ಭಾರತಕ್ಕೆ ಬಿಗ್ ಶಾಕ್ ಕೊಟ್ಟ ಅಮೆರಿಕಾ: 50ಕ್ಕೂ ಹೆಚ್ಚು ಉತ್ಪನ್ನಗಳ ರಫ್ತು ಮೇಲೆ ತೆರಿಗೆ ವಿನಾಯ್ತಿ ರದ್ದು!

ಭಾರತ ದೇಶದ ಕನಿಷ್ಠ 50 ವಸ್ತುಗಳ ಮೇಲೆ ಆಮದು ತೆರಿಗೆ ರಹಿತ ರಿಯಾಯಿತಿಯನ್ನು ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ವಾಷಿಂಗ್ಟನ್ : ಭಾರತ ದೇಶದ 50ಕ್ಕೂ ಹೆಚ್ಚು ವಸ್ತುಗಳ ಮೇಲೆ ಆಮದು ತೆರಿಗೆ ರಹಿತ ರಿಯಾಯಿತಿಯನ್ನು ಅಮೆರಿಕಾ ಸರ್ಕಾರ ಗುರುವಾರ ರದ್ದುಪಡಿಸಿದೆ. ಅವುಗಳಲ್ಲಿ ಕೈಮಗ್ಗದಿಂದ ಕೃಷಿ ವಲಯದವರೆಗಿನ ವಸ್ತುಗಳು ಸೇರಿಕೊಂಡಿದ್ದು ವ್ಯಾಪಾರ ಸಂಬಂಧಿ ವಿಷಯಗಳಲ್ಲಿ ಮುಂದಿನ ದಿನಗಳಲ್ಲಿ ಭಾರತದೊಂದಿಗೆ ತನ್ನ ಕಠಿಣ ನಿಲುವನ್ನು ಅಮೆರಿಕಾ ತೋರಿಸಿದೆ.

ಈ ಕುರಿತು ಶ್ವೇತಭವನ ಅಧಿಸೂಚನೆಯನ್ನು ಹೊರಡಿಸಿದ್ದು, ಪ್ರಾಶಸ್ತ್ಯಗಳ ಸಾಮಾನ್ಯ ವ್ಯವಸ್ಥೆ (ಜಿಎಸ್ ಪಿ ) ಅಡಿಯಲ್ಲಿ ಇದುವರೆಗೆ ತೆರಿಗೆ ವಿನಾಯ್ತಿ ಪಡೆಯುತ್ತಿದ್ದ ಸುಮಾರು 90 ಉತ್ಪನ್ನಗಳನ್ನು ಪಟ್ಟಿ ಮಾಡಿದೆ. ಈ ಬಗ್ಗೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಳೆದ ಮಂಗಳವಾರ ಪ್ರಕಟಣೆ ಹೊರಡಿಸಿದ್ದರು. ಇಂದಿನಿಂದಲೇ ಈ ಉತ್ಪನ್ನಗಳ ಮೇಲೆ ಆಮದು ತೆರಿಗೆ ವಿನಾಯ್ತಿ ರದ್ದಾಗಲಿದೆ.

ಅಮೆರಿಕಾ ಸರ್ಕಾರದ ಅಧಿಸೂಚನೆ ಪ್ರಕಾರ, ಭಾರತದಿಂದ ರಫ್ತಾಗುವ ಈ ಉತ್ಪನ್ನಗಳ ಮೇಲೆ ತೆರಿಗೆ ವಿನಾಯ್ತಿ ಸಾಮಾನ್ಯ ಆದ್ಯತೆ ವ್ಯವಸ್ಥೆ(ಜಿಎಸ್ ಪಿ)ಯಡಿ ರದ್ದಾಗಲಿದೆ. ಆದರೆ ನಿಯಮಿತವಾಗಿ ಈ ಉತ್ಪನ್ನಗಳು ಹೆಚ್ಚು ಅನುಕೂಲಕರ ರಾಷ್ಟ್ರದ ತೆರಿಗೆ-ದರಗಳಿಗೆ ಒಳಪಟ್ಟಿರುತ್ತದೆ ಎಂದು ಅಮೆರಿಕಾದ ವಾಣಿಜ್ಯ ಪ್ರಾತಿನಿಧ್ಯ ಅಧಿಕಾರಿಯೊಬ್ಬರು ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಅಮೆರಿಕಾ ಅಧ್ಯಕ್ಷರ ಈ ಪ್ರಕಟಣೆ ದೇಶಕ್ಕೆ ನಿಶ್ಚಿತವಾಗಿರದೆ ಉತ್ಪನ್ನಗಳಿಗೆ ನಿಶ್ಚಿತವಾಗಿರುತ್ತದೆ ಎಂದು ಉತ್ಪನ್ನಗಳ ಪರಾಮರ್ಶೆ ನಡೆಸಿದಾಗ ತಿಳಿದುಬಂದಿದೆ.
ಜಿಎಸ್ ಪಿ ವ್ಯವಸ್ಥೆಯ ಫಲಾನುಭವ ಪಡೆಯುವವರಲ್ಲಿ ಭಾರತ ಮುಂಚೂಣಿಯಲ್ಲಿದೆ. ಜಿಎಸ್ ಪಿ ಅಮೆರಿಕಾದ ಅತಿ ಹಳೆಯ ಮತ್ತು ಬೃಹತ್ ಪ್ರಮಾಣದ ವ್ಯಾಪಾರ ಆದ್ಯತೆ ಕಾರ್ಯಕ್ರಮವಾಗಿದ್ದು ನಿರ್ದಿಷ್ಟ ದೇಶಗಳಿಗೆ ಸಾವಿರಾರು ಉತ್ಪನ್ನಗಳನ್ನು ತೆರಿಗೆ ವಿನಾಯ್ತಿ ನೀಡಿ ರಫ್ತು ಮಾಡುವುದಾಗಿತ್ತು. ಇದು ಎರಡೂ ದೇಶಗಳ ಆರ್ಥಿಕಾಭಿವೃದ್ಧಿ ಕಾರ್ಯಕ್ರಮದ ಭಾಗವಾಗಿತ್ತು.

ಅಮೆರಿಕಾ ಪಟ್ಟಿಯಲ್ಲಿ ಮಾಡಿರುವ ವಸ್ತುಗಳನ್ನು ನೋಡಿದಾಗ ಅವುಗಳಲ್ಲಿ ಕನಿಷ್ಟ 50 ಉತ್ಪನ್ನಗಳು ಭಾರತದಿಂದ ಆಗಿವೆ. ಕಳೆದ ವರ್ಷ ಭಾರತದಿಂದ ಅಮೆರಿಕಕ್ಕೆ ಜಿಎಸ್ ಪಿಯಡಿ 5.6 ಶತಕೋಟಿ ಡಾಲರ್ ಗಿಂತ ಅಧಿಕ ವಸ್ತುಗಳು ತೆರಿಗೆ ರಹಿತವಾಗಿ ರಫ್ತಾಗಿದ್ದವು.

ಆದರೆ ಇದೀಗ ಟ್ರಂಪ್ ಆಡಳಿತ ತೆಗೆದುಕೊಂಡಿರುವ ಈ ನಿರ್ಧಾರದಿಂದ ಭಾರತದಿಂದ ರಫ್ತಾಗುವ ವಸ್ತುಗಳ ಮೇಲೆ ಬಹುದೊಡ್ಡ ಮಟ್ಟಿನ ಪರಿಣಾಮ ಬೀರಲಿದೆ. ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಗಳಿಗೆ ಸಹ ಪೆಟ್ಟು ಬೀಳಲಿದೆ. ಅದರಲ್ಲೂ ಮುಖ್ಯವಾಗಿ ಕೈಮಗ್ಗ ಮತ್ತು ಕೃಷಿ ಉತ್ಪನ್ನಗಳ ಮೇಲೆ ಹೆಚ್ಚು ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಕಳೆದ ಮಂಗಳವಾರ ಡೊನಾಲ್ಡ್ ಟ್ರಂಪ್ ಪ್ರಕಟಣೆ ಹೊರಡಿಸಿ, ಇಂತಹ ದೇಶವೆಂದು ಪರಿಗಣನೆಗೆ ತೆಗೆದುಕೊಳ್ಳದೆ ನಿರ್ದಿಷ್ಟ ವಸ್ತುಗಳ ಮೇಲೆ ಜಿಎಸ್ ಪಿ ಅನುಕೂಲವನ್ನು ತೆಗೆದುಹಾಕಲಾಗುವುದು. ನಮ್ಮ ದೇಶದ ಆರ್ಥಿಕ ಬೆಳವಣಿಗೆಗೆ ಮತ್ತು ಈಗಾಗಲೇ ಅಭಿವೃದ್ಧಿ ಹೊಂದಿರುವ ದೇಶಗಳಿಗೆ ಈ ತೆರಿಗೆ ವಿನಾಯ್ತಿಯ ಅಗತ್ಯವಿಲ್ಲ ಎಂದು ಮನಗಂಡಿರುವುದರಿಂದ ಇದನ್ನು ತೆಗೆದುಹಾಕಲಾಗುವುದು ಎಂದಿದ್ದರು.

ಅಮೆರಿಕಾದ ಜಿಎಸ್ ಪಿ ಪಟ್ಟಿಯಿಂದ ಭಾರತ ಮಾತ್ರವಲ್ಲದೆ ಅರ್ಜೆಂಟೀನಾ, ಬ್ರೆಜಿಲ್, ಥೈಲ್ಯಾಂಡ್, ಸುರಿನಾಮೆ, ಪಾಕಿಸ್ತಾನ, ಟರ್ಕಿ, ಫಿಲಿಫೈನ್ಸ್, ಈಕ್ವೆಡಾರ್ ಮತ್ತು ಇಂಡೋನೇಷಿಯಾ ದೇಶಗಳನ್ನು ಕೂಡ ತೆಗೆದುಹಾಕಲಾಗಿದೆ.

ಭಾರತದಿಂದ ಜಿಎಸ್ ಪಿಯಡಿ ತೆಗೆದುಹಾಕಲಾಗಿರುವ ಕೆಲವು ಪ್ರಮುಖ ಉತ್ಪನ್ನಗಳಲ್ಲಿ ಅಡಿಕೆ, ಟರ್ಪಂಟೈನ್ ಗಮ್, ಮಾವಿನ ಹಣ್ಣುಗಳು, ಮರಳುಗಲ್ಲು, ತವರ ಕ್ಲೋರೈಡ್ಗಳು; ಬೇರಿಯಂ ಕ್ಲೋರೈಡ್ಗಳು; ಲವಣಗಳು ಮತ್ತು ಟಾರ್ಟಾರಿಕ್ ಆಮ್ಲದ ಎಸ್ಟರ್, ನೆಸಾಯ್; ಮತ್ತು ಟ್ರಿಮೆಥೈಲ್ ಫಾಸ್ಫೈಟ್, ಧಾನ್ಯ, ಹತ್ತಿ ಬಟ್ಟೆಗಳು, ಕೈಮಗ್ಗ ಹೀಗೆ 50ಕ್ಕೂ ಹೆಚ್ಚು ವಸ್ತುಗಳು ಸೇರಿವೆ.

ಈ ವಸ್ತುಗಳನ್ನು ಎಂದಿನಂತೆ ಅಮೆರಿಕಾಕ್ಕೆ ಭಾರತದಿಂದ ರಫ್ತು ಮಾಡಬಹುದು, ಆದರೆ ಅವುಗಳಿಗೆ ತೆರಿಗೆ ವಿನಾಯ್ತಿಯಿರುವುದಿಲ್ಲ, ನಿಗದಿತ ದರ ನೀಡಲೇಬೇಕು. ಜಿಎಸ್ ಪಿ ಅನುಕೂಲದಿಂದ  ತೆಗೆದುಹಾಕದಂತೆ ಭಾರತ ಕಳೆದ ಜೂನ್ ನಲ್ಲಿ ಅಮೆರಿಕಾವನ್ನು ಮನವಿ ಮಾಡಿಕೊಂಡಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com