ಫಿನ್ ಟೆಕ್ ಫೆಸ್ಟಿವಲ್: ಡಿಜಿಟಲ್‌ ಪೇಮೆಂಟ್‌ನಿಂದ ಸಮಯ, ದೇಶಕ್ಕೆ ಹಣ ಉಳಿತಾಯ- ಪ್ರಧಾನಿ ಮೋದಿ

ಭಾರತದಲ್ಲಿ ಡಿಜಿಟಲ್ ಪೇಮೆಂಟ್ ನ ಕ್ರಾಂತಿಯಾಗುತ್ತಿದ್ದು, ಇದರಿಂದ ದೇಶಕ್ಕೆ ಸಮಯ ಮತ್ತು ಹಣದ ಉಳಿತಾಯವಾಗುತ್ತಿದೆ ಎಂದು ಪ್ರಧಾನಿ ಮೋದಿ ಅಭಿಪ್ರಾಯಪಟ್ಟಿದ್ದಾರೆ.
ಫಿನ್‌ಟೆಕ್‌ ಫೆಸ್ಟಿವಲ್‌ ನಲ್ಲಿ ಪ್ರಧಾನಿ ಮೋದಿ
ಫಿನ್‌ಟೆಕ್‌ ಫೆಸ್ಟಿವಲ್‌ ನಲ್ಲಿ ಪ್ರಧಾನಿ ಮೋದಿ
ಸಿಂಗಾಪುರ: ಭಾರತದಲ್ಲಿ ಡಿಜಿಟಲ್ ಪೇಮೆಂಟ್ ನ ಕ್ರಾಂತಿಯಾಗುತ್ತಿದ್ದು, ಇದರಿಂದ ದೇಶಕ್ಕೆ ಸಮಯ ಮತ್ತು ಹಣದ ಉಳಿತಾಯವಾಗುತ್ತಿದೆ ಎಂದು ಪ್ರಧಾನಿ ಮೋದಿ ಅಭಿಪ್ರಾಯಪಟ್ಟಿದ್ದಾರೆ.
ಸಿಂಗಾಪುರದಲ್ಲಿ ನಡೆಯುತ್ತಿರುವ ಫಿನ್‌ಟೆಕ್‌ ಫೆಸ್ಟಿವಲ್‌ ನಲ್ಲಿ ಪಾಲ್ಗೊಂಡು ಭಾಷಣ ಮಾಡಿದ ಪ್ರಧಾನಿ ಮೋದಿ, ಜಾಗತಿಕ ಮಟ್ಟದಲ್ಲಿ ಡಿಜಿಟಲ್‌ ಯುಗ ಆರಂಭವಾಗಿದ್ದು, ಭಾರತ ಕೂಡ ಇದಕ್ಕೆ ಮುಕ್ತವಾಗಿ ತೆರೆದುಕೊಂಡಿದೆ. ಕಳೆದ ಕೆಲವು ವರ್ಷಗಳಿಂದ ಡಿಜಿಟಲೀಕರಣದಿಂದ ದೇಶ ಪ್ರಗತಿಯತ್ತ ಸಾಗುತ್ತಿದೆ. ಸಿಂಗಾಪುರ ಆರ್ಥಿಕ ವಿಷಯದಲ್ಲಿ ಜಾಗತಿಕ ಮಟ್ಟದಲ್ಲಿ ಮುಖ್ಯ ಹಬ್‌ ಆಗಿದ್ದು, ಹಣಕಾಸು ವಿಷಯದಲ್ಲಿ ಡಿಜಿಟಲೀಕರಣಕ್ಕೆ ಈ ದೇಶ ಸಾಕಷ್ಟು ಒತ್ತು ನೀಡಿದೆ. ಈ ನಿಟ್ಟಿನಲ್ಲಿ ಆಯೋಜನೆ ಮಾಡುತ್ತಿರುವ ಫಿನ್‌ಟೆಕ್‌ ಫೆಸ್ಟಿವಲ್‌ ವಿಶ್ವಾಸದ ಪ್ರತೀಕವಾಗಿದೆ ಎಂದು ಹೇಳಿದರು.
ಅಂತೆಯೇ 'ಜಾಗತಿಕ ಆರ್ಥಿಕತೆಯ ಚಿತ್ರಣ ಈಗ ಬದಲಾಗುತ್ತಿದ್ದು, ತಂತ್ರಜ್ಞಾನವೇ ಈಗ ಮುಖ್ಯವಾಹಿನಿಯಲ್ಲಿದೆ. ಇದಕ್ಕೆ ನಾವೆಲ್ಲರೂ ಒಗ್ಗಿಕೊಳ್ಳಬೇಕು. ಭಾರತ ಕೂಡ ಈ ನಿಟ್ಟಿನಲ್ಲಿ ಸಾಕಷ್ಟು ಸುಧಾರಣೆಗಳನ್ನು ತಂದಿದೆ. ಡಿಜಿಟಲೀಕರಣದಿಂದಾಗಿ ದೇಶದಲ್ಲಿ ಹಲವಾರು ಯೋಜನೆಗಳನ್ನು ಆರಂಭಿಸಲು ಸಾಧ್ಯವಾಗಿದೆ. ಇದರಿಂದಾಗಿ ವಿಶ್ವದ ಅತ್ಯಂತ ಬೃಹತ್ ಆರೋಗ್ಯ ವಿಮೆ ಯೋಜನೆ ಆಯುಷ್ಮಾನ್‌ ಭಾರತ್‌ ಅನ್ನು ಆರಂಭಿಸಲು ಸಾಧ್ಯವಾಯಿತು. ಡಿಜಿಟಲ್‌ ತಂತ್ರಜ್ಞಾನದ ಯಶಸ್ಸಿಗೆ ಇದೊಂದು ಉತ್ತಮ ಉದಾಹರಣೆ'.
ಭಾರತದಲ್ಲಿ 128 ಬ್ಯಾಂಕ್‌ಗಳು ಯುಪಿಐ ಜತೆ ಲಿಂಕ್‌ ಆಗಿದ್ದು, ಇದು ವಿಶ್ವದಲ್ಲಿಯೇ ಅತಿ ದೊಡ್ಡ ಜಾಲಗಳಲ್ಲಿ ಒಂದಾಗಿದೆ. ಡಿಜಿಟಲ್‌ ಪೇಮೆಂಟ್‌ಗೆ ಭಾರತ ಒತ್ತು ನೀಡಿರುವುದು, ಅದರಲ್ಲೂ ರೂಪೇ ಕಾರ್ಡ್‌ಗಳು ಈಗ ಬಹುತೇಕ ಎಲ್ಲ ಭಾರತೀಯನ ಕೈಯಲ್ಲಿ ಇದೆ. ಗ್ರಾಮೀಣ ಭಾರತದಲ್ಲಿಯೂ ಈಗ ತಂತ್ರಜ್ಞಾನ, ಡಿಜಿಟಲ್‌ ವಹಿವಾಟು ಜೋರಾಗಿ ಸಾಗುತ್ತಿರುವುದಕ್ಕೆ ಕಳೆದ ನಾಲ್ಕು ವರ್ಷಗಳಲ್ಲಿ ಕೈಗೊಂಡ ಆರ್ಥಿಕ ಸುಧಾರಣೆಗಳು ಸಹಕಾರಿಯಾಗಿವೆ.  ವೈವಿಧ್ಯತೆಯೇ ಜೀವಾಳವಾಗಿರುವ ಭಾರತದಲ್ಲಿ ಹಲವಾರು ಸವಾಲುಗಳಿದ್ದು, ಎಲ್ಲದ್ದಕ್ಕೂ ವೈವಿಧ್ಯಮಯ ಪರಿಹಾರವನ್ನೂ ನಾವು ಕಂಡುಕೊಳ್ಳಬೇಕಾಗಿದೆ. ಈ ನಿಟ್ಟಿನಲ್ಲಿ ನಾವು ಕೂಡ ಸಾಕಷ್ಟು ಹೆಜ್ಜೆ ಇಟ್ಟಿದ್ದೇವೆ. ಇಡೀ ವಿಶ್ವವೇ ಈಗ ಭಾರತದ ಕಡೆ ಕಣ್ಣು ಬೀರಿದೆ ಎಂದು ಹೇಳಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com