'ದೇವರೇ ನನಗೆ ಸಾಯಲು ಇಷ್ಟವಿಲ್ಲ': ದ್ವೀಪ ಹತ್ತಿರವಾಗುತ್ತಿದ್ದಂತೆಯೇ ಚೌಗೆ ಸಾವಿನ ಭಯ ಕಾಡಿತ್ತೆ?

ಅಂಡಮಾನ್ ನ ನಿಗೂಢ ಸೆಂಟಿನೆಲ್ ದ್ವೀಪಕ್ಕೆ ತೆರಳಿ ಅಲ್ಲಿನ ಬುಡಕಟ್ಟು ಜನರಿಂದ ಸಾವಿಗೀಡಾದ ಅಮೆರಿಕ ಪ್ರವಾಸಿಗ ಜಾನ್ ಅಲೆನ್ ಚೌಗೆ ಸಾವಿಗೂ ಮುನ್ನವೇ ಆತನ ಸಾವಿನ ಕುರಿತು ಆತಂಕ ಶುರುವಾಗಿತ್ತಂತೆ..
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ವಾಷಿಂಗ್ಟನ್: ಅಂಡಮಾನ್ ನ ನಿಗೂಢ ಸೆಂಟಿನೆಲ್ ದ್ವೀಪಕ್ಕೆ ತೆರಳಿ ಅಲ್ಲಿನ ಬುಡಕಟ್ಟು ಜನರಿಂದ ಸಾವಿಗೀಡಾದ ಅಮೆರಿಕ ಪ್ರವಾಸಿಗ ಜಾನ್ ಅಲೆನ್ ಚೌಗೆ ಸಾವಿಗೂ ಮುನ್ನವೇ ಆತನ ಸಾವಿನ ಕುರಿತು ಆತಂಕ ಶುರುವಾಗಿತ್ತಂತೆ..
ಹೌದು.. ಈ ಬಗ್ಗೆ ಚೌ ತನ್ನ ಡೈರಿಯಲ್ಲಿ ಬರೆದುಕೊಂಡಿದ್ದ ಎಂದು ಅಮೆರಿಕದ ಖ್ಯಾತ ಸುದ್ದಿಪತ್ರಿಕೆ ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿದೆ. ಚೌ ಅಂಡಮಾನ್ ನಿಗೂಢ ಸೆಂಟಿನೆಲ್ ದ್ವೀಪಕ್ಕೆ ತೆರಳುವ ಮುನ್ನ ತನ್ನ ಡೈರಿಯಲ್ಲಿ ಬರೆದುಕೊಂಡಿದ್ದ ಹಲವು ಅಂಶಗಳು ತನಗೆ ದೊರೆತಿದೆ ಎಂದೂ ಪತ್ರಿಕೆ ತನ್ನ ವರದಿಯಲ್ಲಿ ಬರೆದುಕೊಂಡಿದ್ದು, ದ್ವೀಪ ಹತ್ತಿಕವಾಗುತ್ತಿದ್ದಂತೆಯೇ ಚೌಗೆ ತನ್ನ ಸಾವಿನ ಭಯ ಕಾಡಿತ್ತು ಎಂದು ಆತ ಡೈರಿಯಲ್ಲಿ ಬರೆದುಕೊಂಡಿದ್ದ. ಅಲ್ಲದೆ ತನಗೆ ಸಾಯಲು ಇಷ್ಟವಿಲ್ಲ ಎಂದೂ ಕೂಡ ಬರೆದುಕೊಂಡಿದ್ದ ಎಂದು ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿದೆ.
ದ್ವೀಪಕ್ಕೆ ತೆರಳುವ ಮುನ್ನ ಆತ ಬರೆದುಕೊಂಡಿದ್ದ ಕೆಲ ಬರವಣಿಗೆಗಳು ಹಾಗೂ ಡೈರಿಯಲ್ಲಿನ ಅಂಶಗಳು ಪತ್ರಿಕೆಗೆ ದೊರೆತಿದ್ದು, ಡೈರಿಯಲ್ಲಿ ಆತ ತನ್ನ ಸಾವಿನ ಕುರಿತು ಮೊದಲೇ ಶಂಕೆ ವ್ಯಕ್ತಪಡಿಸಿದ್ದ ಎನ್ನಲಾಗಿದೆ. ಈಗಾಗಲೇ ಎರಡು ಬಾರಿ ದ್ವೀಪಕ್ಕೆ ತೆರಳಿ ಬಂದ ದಾರಿಗೆ ಸುಂಕ ಇಲ್ಲ ಎಂಬಂತೆ ಅಲ್ಲಿನ ಬುಡುಕಟ್ಟು ನಿವಾಸಿಗಳ ಆಕ್ರೋಶಕ್ಕೆ ತುತ್ತಾಗಿ ವಾಪಸ್ ಬಂದಿದ್ದ ಚೌ. ನವೆಂಬರ್ 16ರಂದು ಮೊದಲ ಬಾರಿಗೆ ಅಲ್ಲಿಗೆ ತೆರಳಿದ್ದ ಚೌನನ್ನು ಮೀನುಗಾರರು ವಾಪಸ್ ಕರೆದುಕೊಂಡು ಬಂದಿದ್ದರು. ಅಂದು ಚೌ ತನ್ನ ಡೈರಿಯಲ್ಲಿ ತಾನು ಭಾರತೀಯ ನೌಕಾಪಡೆಯ ಸಿಬ್ಬಂದಿಗೆ ಸಿಕ್ಕಿ ಹಾಕಿಕೊಳ್ಳದಿದ್ದರೆ ಸಾಕು ಎಂದು ಬರೆದುಕೊಂಡಿದ್ದ.
ಮಾರನೆಯ ದಿನವೂ ಮೀನುಗಾರರೊಂದಿಗೆ ದ್ವೀಪಕ್ಕೆ ತೆರಳಿದ್ದ ಚೌಗೆ ಅಲ್ಲಿನ ಬುಡುಕಟ್ಟು ಜನರು ಬಿಲ್ಲು ಬಾಣಗಳ ದಾಳಿ ಮೂಲಕ ತಮ್ಮ ವಿರೋಧ ವ್ಯಕ್ತಪಡಿಸಿದ್ದರು. ಅಂದು ಬುಡುಕಟ್ಟು ಜನಾಂಗದ ಯುವಕನೋರ್ವ ಹಾರಿಸಿದ್ದ ಬಾಣ ನೇರವಾಗಿ ಚೌ ಎದೆ ಸೀಳುತ್ತಿತ್ತು. ಆದರೆ ಚೌ ಎದೆಗವಿಚಿಕೊಂಡಿದ್ದ ಬೈಬಲ್ ಗೆ ಬಾಣ ತಗುಲಿ ಆತ ಪ್ರಾಣಾಪಾಯದಿಂದ ಪಾರಾಗಿದ್ದ. ಬಳಿಕ ಅಲ್ಲಿಂದ ಆತ ಹೊರಟು ಹೋಗಿದ್ದ. ಬಳಿಕ ನವೆಂಬರ್ 18ರಂದು ಶತಾಯಗತಾಯ ಬುಡಕಟ್ಟು ನಿವಾಸಿಗಳನ್ನು ಭೇಟಿ ಮಾಡಲೇಬೇಕು ಎಂದು ನಿರ್ಧರಿಸಿದ್ದ ಚೌ ದ್ಪೀಪದತ್ತ ತೆರಳಿದ್ದ, ಅಂದು ಆತನಿಗೆ ತನ್ನ ಸಾವಿನ ಶಂಕೆ ಮೂಡಿತ್ತು. ಈ ಬಗ್ಗೆಯೂ ಆತ ತನ್ನ ಡೈರಿಯಲ್ಲಿ ಬರೆದುಕೊಂಡಿದ್ದು, ಏಸುವಿನ ಪ್ರೀತಿಯನ್ನು ಆ ಬುಡಕಟ್ಟು ಜನರಿಗೆ ಹಂಚಲು ಹೋಗುತ್ತಿದ್ದೇನೆ. ಅವರೂ ಕೂಡ ನಮ್ಮಂತೆಯೇ ಸಾಮಾನ್ಯ ಜೀವನ ಸಾಗಿಸಬೇಕು. ಆದರೆ ನಾನು ಅಲ್ಲಿಂದ ಬದುಕಿ ವಾಪಸ್ ಬರುತ್ತೇನೆಯೋ ತಿಳಿದ್ಲಲ್ಲ. ಆದರೆ ನಾನು ಬದುಕ ಬೇಕು ಎಂದು ಚೌ ತನ್ನ ಡೈರಿಯಲ್ಲಿ ಬರೆದುಕೊಂಡಿದ್ದ. ಈ ಡೈರಿಯನ್ನು ಚೌ ಅವರ ತಾಯಿ ತಮ್ಮೊಂದಿಗೆ ಹಂಚಿಕೊಂಡಿದ್ದಾರೆ ಎಂದು ವಾಷಿಂಗ್ಟನ್ ಪೋಸ್ಟ್ ವರದಿಯಲ್ಲಿ ಬರೆದಿದೆ.
ಇದಾದ ಬಳಿಕ ಅಂದರೆ ಚೌನನ್ನು ಸೆಂಟಿನೆಲ್ ದ್ವೀಪಕ್ಕೆ ಬಿಟ್ಟು ಮೀನುಗಾರರ ವಾಪಸ್ ಆದ ಕೆಲವೇ ಕ್ಷಣಗಳಲ್ಲಿ ಅಲ್ಲಿನ ಬುಡಕಟ್ಟು ಜನರು ಬಿಲ್ಲು ಬಾಣಗಳ ಮೂಲಕ ಆತನ ಮೇಲೆ ದಾಳಿ ಮಾಡಿದ್ದಾರೆ. ಕೂಡಲೇ ಚೌ ನೆಲಕ್ಕುರುಳಿದ್ದು, ಆತನ ದೆಹಕ್ಕೆ ಹಗ್ಗ ಕಟ್ಟಿದ್ದ ಜನರು ಆತನನ್ನು ಕಡಲಿನತ್ತ ಎಳೆದೊಯ್ಯುತ್ತಿದ್ದರು ಎಂದು ಮೀನುಗಾರರು ಪೊಲೀಸರ ಬಳಿ ಹೇಳಿಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com