ಟ್ರಂಪ್ ಕಾಲೆಳೆದ ಯುವತಿ ಆಸ್ಥಾ
ವಿದೇಶ
ತಪ್ಪುತಪ್ಪಾಗಿ ಟ್ವೀಟ್ ಮಾಡಿದ ಅಮೆರಿಕ ಅಧ್ಯಕ್ಷ ಟ್ರಂಪ್ ಗೆ ಪಾಠ ಮಾಡಿದ ಅಸ್ಸಾಂ ಯುವತಿ!
ವಿಶ್ವದ ದೊಡ್ಡಣ್ಣ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೊಮ್ಮೆ ಸಾಮಾಜಿಕ ಜಾಲತಾಣದಲ್ಲಿ ಪೇಚಿಗೆ ಸಿಲುಕಿದ್ದು, ಟ್ರಂಪ್ ಮಾಡಿದ್ದ ತಪ್ಪು ತಪ್ಪು ಟ್ವೀಟ್ ಗೆ ಸಂಬಂಧಿಸಿದಂತೆ ಅಸ್ಸಾಂ ಮೂಲದ ಯುವತಿ ನೀಡಿರುವ ಉತ್ತರ ಇದೀಗ ವೈರಲ್ ಆಗುತ್ತಿದೆ.
ನವದೆಹಲಿ: ವಿಶ್ವದ ದೊಡ್ಡಣ್ಣ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೊಮ್ಮೆ ಸಾಮಾಜಿಕ ಜಾಲತಾಣದಲ್ಲಿ ಪೇಚಿಗೆ ಸಿಲುಕಿದ್ದು, ಟ್ರಂಪ್ ಮಾಡಿದ್ದ ತಪ್ಪು ತಪ್ಪು ಟ್ವೀಟ್ ಗೆ ಸಂಬಂಧಿಸಿದಂತೆ ಅಸ್ಸಾಂ ಮೂಲದ ಯುವತಿ ನೀಡಿರುವ ಉತ್ತರ ಇದೀಗ ವೈರಲ್ ಆಗುತ್ತಿದೆ.
ನವೆಂಬರ್ 21ರಂದು ವಾಷಿಂಗ್ಟನ್‌ನಲ್ಲಿ ಉಷ್ಣಾಂಶ ಮೈನಸ್ 2 ಡಿಗ್ಸಿ ಸೆಲ್ಸಿಯಸ್ ಇದ್ದಾಗ ಟ್ವೀಟ್ ಮಾಡಿದ್ದ ಟ್ರಂಪ್, ‘ಭಯಾನಕ. ಜಾಗತಿಕ ತಾಪಮಾನದ ಎಲ್ಲ ದಾಖಲೆಗಳನ್ನೂ ಇದು ಮುರಿಯಬಹುದು’ ಎಂದಿದ್ದರು. ಇದಕ್ಕೆ ಉತ್ತರ ನೀಡಿದ್ದ ಟ್ವೀಟ್‌ಗೆ, ಅಸ್ಸಾಂನ ಯುವತಿ ಆಸ್ಥಾ ಸರ್ಮಾಹ್ (18 ವರ್ಷ) ಕಮೆಂಟ್ ಮಾಡಿದ್ದು, 'ಹವಾಮಾನ ಮತ್ತು ತಾಪಮಾನ ಎರಡೂ ಒಂದೇ ಅಲ್ಲ' ಎಂದು ಹೇಳಿದ್ದಾಳೆ.
'ನಾನು ನಿಮಗಿಂತಲೂ 54 ವರ್ಷ ಕಿರಿಯಳು. ಸಾಧಾರಣ ಅಂಕಗಳೊಂದಿಗೆ ಈಗಷ್ಟೇ ಪ್ರೌಢಶಿಕ್ಷಣ ಪೂರ್ಣಗೊಳಿಸಿದ್ದೇನೆ. ಆದರೆ ನಿಮಗೆ ಈ ಕುರಿತು ಸಹಾಯ ಬೇಕಿದ್ದರೆ, ನಾನು ಎರಡನೇ ತರಗತಿಯಿಂದ ಬಳಸುತ್ತಿರುವ ಎನ್ ಸೈಕ್ಲೊಪೀಡಿಯಾ ನಿಮಗೆ ನೀಡಬಲ್ಲೆ' ಎಂದು ಟ್ರಂಪ್ ಕಾಲೆಳೆದಿದ್ದಾಳೆ. ಆಕೆಯ ಕಮೆಂಟ್ ಗೆ ಜಗತ್ತಿನಾದ್ಯಂತ 22 ಸಾವಿರ ಮಂದಿ ಲೈಕ್ ಮಾಡಿದ್ದು, 5,100ಕ್ಕೂ ಹೆಚ್ಚು ಬಾರಿ ಅದು ರಿಟ್ವೀಟ್ ಆಗಿದೆ. ಅಮೆರಿಕದ ಟ್ವಿಟ್ಟರ್ ಬಳಕೆದಾರರು ತಮ್ಮ ಅಧ್ಯಕ್ಷರಿಗೇ ಟಾಂಗ್ ಕೊಟ್ಟ ಯುವತಿಯ ದಿಟ್ಟತನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕೆಲವರು ಈ ಯುವತಿ ಭವಿಷ್ಯದ ಭರವಸೆ ಎಂದೂ ಗುಣಗಾನ ಮಾಡಿದ್ದಾರೆ. ಮತ್ತೆ ಕೆಲವರು ಅರೇಬಿಯನ್ ಸಮುದ್ರದಲ್ಲಿ ವಾತಾವರಣ ಬದಲಾವಣೆಯ ಪರಿಣಾಮಗಳ ಕುರಿತಾಗಿ ಅಧ್ಯಯನ ಮಾಡುವಂತೆ ಇಂಟರ್ನ್ಶಿಪ್ಗೆ ಆಫರ್ ನೀಡಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ