ಅಮೆರಿಕಾ: ನಕಲಿ ವೀಸಾ ಆರೋಪದ ಮೇಲೆ ಭಾರತೀಯ ಸಿಇಒ ಬಂಧನ

ಅಮೆರಿಕಾದಲ್ಲಿ ಎರಡು ಮಾಹಿತಿ ತಂತ್ರಜ್ಞಾನ ಕಂಪೆನಿಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿದ್ದ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಅಮೆರಿಕಾದಲ್ಲಿ ಎರಡು ಮಾಹಿತಿ ತಂತ್ರಜ್ಞಾನ ಕಂಪೆನಿಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿದ್ದ ಭಾರತೀಯ ಪ್ರಜೆ ವೀಸಾ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಬಂಧಿತರಾಗಿದ್ದಾರೆ. ಸುಮಾರು 200ಕ್ಕೂ ಹೆಚ್ಚು ವಿದೇಶಿ ನೌಕರರಿಗೆ ಹೆಚ್1 ಬಿಯಂತಹ ವೀಸಾ ಪಡೆಯಲು ನಕಲಿ ಸಹಿ ಮತ್ತು ದಾಖಲೆಗಳನ್ನು ನೀಡಿದ್ದರು ಎಂಬ ಆರೋಪ ಕೇಳಿಬಂದಿದೆ.

ಸೀಟ್ಲ್ ವಿಮಾನ ನಿಲ್ದಾಣಕ್ಕೆ ಅಂತಾರಾಷ್ಟ್ರೀಯ ವಿಮಾನದಲ್ಲಿ ಬರುತ್ತಿದ್ದಂತೆ 49 ವರ್ಷದ ಪ್ರದ್ಯುಮ್ನ ಕುಮಾರ್ ಸಮಾಲ್ ಅವರನ್ನು ಬಂಧಿಸಿ ಕಸ್ಟಡಿಗೆ ಒಪ್ಪಿಸಲಾಗಿದೆ.ಕಳೆದ ಏಪ್ರಿಲ್ ನಲ್ಲಿ ವೀಸಾ ವಂಚನೆ ಯೋಜನೆಯಡಿ ಕೇಸು ದಾಖಲಿಸಲಾಗಿತ್ತು. ನಂತರ ಆತ ಅಮೆರಿಕಾದಿಂದ ತಪ್ಪಿಸಿಕೊಂಡು ಹೋಗಿದ್ದ.

ಈ ವಾರದವರೆಗೆ ತಪ್ಪಿಸಿಕೊಂಡಿದ್ದ ಸಮಲ್ ಪುನಃ ಅಮೆರಿಕಾಕ್ಕೆ ಬಂದಿಳಿದಾಗ ಕಾನೂನು ಜಾರಿ ನಿರ್ದೇಶನಾಲಯ ಅಧಿಕಾರಿಗಳು ಬಂಧಿಸಿದ್ದಾರೆ.

2010 ಮತ್ತು 2011ರಲ್ಲಿ ಸಿಯಾಟಲ್ ಸಮೀಪ ಬೆಲ್ಲೆವ್ಯೂನಲ್ಲಿ ಡಿವೆನ್ಸಿ ಮತ್ತು ಅಜಿಮೆಟ್ರಿ ಎಂಬ ಎರಡು ಕಾರ್ಪೊರೇಟ್ ಕಂಪೆನಿಗಳನ್ನು ಸಮಲ್  ವಾಷಿಂಗ್ಟನ್ ರಾಜ್ಯದಲ್ಲಿ ಆರಂಭಿಸಿದ್ದ. ಎರಡೂ ಕಂಪೆನಿಗಳ ಮೂಲಕ ಮಾಹಿತಿ ತಂತ್ರಜ್ಞಾನ ನೌಕರರನ್ನು ಬೆಂಚ್ ಅಂಡ್ ಸ್ವಿಚ್ ಸ್ಕೀಮ್ ಮೂಲಕ ಅಗತ್ಯವಿರುವವರಿಗೆ ಒದಗಿಸುತ್ತಿದ್ದ. ಈ ಮೂಲಕ ವಿದೇಶಿ ಕೆಲಸಗಾರರನ್ನು ವಂಚಿಸುತ್ತಿದ್ದ. ಮಾರುಕಟ್ಟೆಯಲ್ಲಿ ಕಾನೂನಿಗೆ ವಿರುದ್ಧವಾಗಿ ವ್ಯವಹಾರ ನಡೆಸಿ ಅಮೆರಿಕಾ ಸರ್ಕಾರಕ್ಕೆ ವಂಚಿಸುತ್ತಿದ್ದ ಎಂಬ ಆರೋಪವಿದೆ.

2015ರಲ್ಲಿಯೇ ಈತನ ವಿರುದ್ಧ ತನಿಖೆ ಆರಂಭವಾಗಿತ್ತು. ನೌಕರರ ತಪ್ಪು ಮಾಹಿತಿಗಳನ್ನು ಸರ್ಕಾರಕ್ಕೆ ಸಲ್ಲಿಸುವುದಾಗಿ ವಿದೇಶಿ ನೌಕರರಿಂದ ಒಪ್ಪಿಗೆ ಪಡೆದು ಸಲ್ಲಿಸಿದ್ದೆ ಎಂದು ಸಮಲ್ ಹೇಳುತ್ತಾನೆ. ಆದರೆ ತನಿಖೆ ವೇಳೆ ಯಾವ ನೌಕರರು ಕೂಡ ಅದಕ್ಕೆ ಒಪ್ಪಿರಲಿಲ್ಲ ಎಂದು ತಿಳಿದುಬಂದಿದೆ.

ತನಿಖೆ ವೇಳೆ ಅಮೆರಿಕಾದ ನಾಗರಿಕ ಮತ್ತು ವಲಸೆ ಸೇವೆ ಇಲಾಖೆಗೆ ನೌಕರರ ತಪ್ಪು ಮತ್ತು ಸುಳ್ಳು ಮಾಹಿತಿ ಸಲ್ಲಿಕೆಯಾಗಿದ್ದು ತಿಳಿದುಬಂದಿದೆ. ಈ ಮೂಲಕ ಕೆಲಸದ ವೀಸಾ ಪಡೆದುಕೊಂಡಿರುವುದು ಬೆಳಕಿಗೆ ಬಂದಿದೆ.

ಅಮೆರಿಕಾದಲ್ಲಿ ಈ ಆರೋಪ ಸಾಬೀತಾದರೆ 10 ವರ್ಷದವರೆಗೆ ಜೈಲುಶಿಕ್ಷೆ ಮತ್ತು 25 ಸಾವಿರ ಅಮೆರಿಕನ್ ಡಾಲರ್ ದಂಡ ಹಾಕಲಾಗುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com