ಉಗ್ರರಿಗೆ ಆರ್ಥಿಕ ನೆರವು; ಹಫೀಜ್ ಸಯ್ಯೀದ್ ವಿರುದ್ಧ ಕೋರ್ಟ್ ನಿಂದ ದೋಷಾರೋಪ, ಮತ್ತೆ ಪಾಕ್ ಗೆ ತೀವ್ರ ಮುಖಭಂಗ

ಪಾಕಿಸ್ತಾನಕ್ಕೆ ಜಾಗತಿಕ ಮಟ್ಟದಲ್ಲಿ ಮತ್ತೆ ತೀವ್ರ ಮುಖಭಂಗವಾಗಿದ್ದು, 26/11 ಮುಂಬೈ ದಾಳಿ ರೂವಾರಿ ಉಗ್ರ ನಾಯಕ ಹಫೀಜ್ ಸಯ್ಯೀದ್ ವಿರುದ್ಧದ ಉಗ್ರರಿಗೆ ಆರ್ಥಿಕ ನೆರವು ನೀಡುತ್ತಿದ್ದ ಆರೋಪ ಹೊರಿಸಲಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಲಾಹೋರ್: ಪಾಕಿಸ್ತಾನಕ್ಕೆ ಜಾಗತಿಕ ಮಟ್ಟದಲ್ಲಿ ಮತ್ತೆ ತೀವ್ರ ಮುಖಭಂಗವಾಗಿದ್ದು, 26/11 ಮುಂಬೈ ದಾಳಿ ರೂವಾರಿ ಉಗ್ರ ನಾಯಕ ಹಫೀಜ್ ಸಯ್ಯೀದ್ ವಿರುದ್ಧದ ಉಗ್ರರಿಗೆ ಆರ್ಥಿಕ ನೆರವು ನೀಡುತ್ತಿದ್ದ ಆರೋಪ ಹೊರಿಸಲಾಗಿದೆ.

ಹೌದು.. 2008ರ ಮುಂಬೈ ಉಗ್ರ ದಾಳಿ ರೂವಾರಿ ಜಮಾತ್ ಉದ್ ದವಾ ಉಗ್ರ ಸಂಘಟನೆ ಮುಖ್ಯಸ್ಥ ಹಫೀಜ್ ಸಯ್ಯೀದ್ ಉಗ್ರ ಸಂಘಟನೆಗಾಗಿ ಆರ್ಥಿಕ ನೆರವು ನೀಡುತ್ತಿದ್ದ ಮತ್ತು ಇದಕ್ಕಾಗಿ ಜನರಿಂದ ಆರ್ಥಿಕ ನೆರವು ಪಡೆಯುತ್ತಿದ್ದ ಎಂಬ ಆರೋಪ ಸಾಬೀತಾಗಿದೆ ಎಂದು ಪಾಕಿಸ್ತಾನದ ಕೋರ್ಟ್ ಹೇಳಿದೆ.

ಈ ಹಿಂದೆ ಇದೇ ವಿಚಾರವಾಗಿ ಭಾರತ ಹಲವು ಬಾರಿ ವಿಶ್ವ ಸಮುದಾಯದ ಗಮನ ಸೆಳೆಯುವ ಪ್ರಯತ್ನ ಮಾಡಿತ್ತಾದರೂ, ಚೀನಾ ಮತ್ತು ಪಾಕಿಸ್ತಾನ ಇದಕ್ಕೆ ಅಡ್ಡಗಾಲು ಹಾಕಿದ್ದವು. ಇದೀಗ ಸ್ವತಃ ಪಾಕಿಸ್ತಾನದ ಕೋರ್ಟ್ ಆತ ಉಗ್ರ ಸಂಘಟನೆಗಳಿಗೆ ಆರ್ಥಿಕ ನೆರವು ನೀಡುತ್ತಿದ್ದ ಎಂದು ತನ್ನ ಆದೇಶದಲ್ಲಿ ತಿಳಿಸಿದೆ. 

ಕಳೆದ ಜುಲೈ 17ರಂದು ಪಾಕಿಸ್ತಾನದ ಕೌಂಟರ್ ಟೆರರಿಸಮ್ ಡಿಪಾರ್ಟ್ ಮೆಂಟ್ (Counter Terrorism Department- CTD)ಯ ಪಂಜಾಬ್ ಪ್ರಾಂತ್ಯದ ಪೊಲೀಸರು ಉಗ್ರ ಸಂಘಟನೆಗಳಿಗೆ ಆರ್ಥಿಕ ನೆರವು ನೀಡುತ್ತಿರುವ ಆರೋಪದ ಮೇರೆಗೆ ಹಫೀಜ್ ಸಯ್ಯೀದ್ ಮತ್ತು ಆತನ ಜಮಾತ್ ಉದ್ ದವಾ ಸಂಘಟನೆಯ ವಿರುದ್ಧ ಒಟ್ಟು 23 ಎಫ್ ಐಆರ್ ಗಳನ್ನು ದಾಖಲಿಸಿದ್ದರು. ಲಾಹೋರ್, ಮುಲ್ತಾನ್ ಮತ್ತು ಗುಜ್ರನ್ ವಾಲಾ ಜಿಲ್ಲೆಗಳಲ್ಲಿ ಆತ ಉಗ್ರ ಸಂಘಟನೆಗೆ ಹಣ ಸಂಗ್ರಹಿಸುತ್ತಿದ್ದ ಎಂದು ಎಫ್ ಐಆರ್ ನಲ್ಲಿ ನಮೂದಿಸಲಾಗಿತ್ತು.  ಅಲ್-ಅನ್ಫಾಲ್ ಟ್ರಸ್ಟ್, ದವಾತುಲ್ ಇರ್ಷಾದ್ ಟ್ರಸ್ಟ್ ಮತ್ತು ಮುವಾಜ್ ಬಿನ್ ಜಬಲ್ ಟ್ರಸ್ಟ್ ಸೇರಿದಂತೆ ವಿವಿಧ ಟ್ರಸ್ಟ್ ಗಳ ಹೆಸರಲ್ಲಿ ಆತ ಮತ್ತು ಆತನ ಕಾರ್ಯಕರ್ತರು ಹಣ ಸಂಗ್ರಹ ಮಾಡುತ್ತಿದ್ದಾರೆ ಎಂದು ಎಫ್ ಐಆರ್ ನಲ್ಲಿ ಆರೋಪಿಸಲಾಗಿತ್ತು.

ಪ್ರಸ್ತುತ ಹಫೀಜ್ ಸಯ್ಯೀದ್ ಪಾಕ್ ಸೇನೆಯ ಬಂಧನದಲ್ಲಿದ್ದು, ಆತನನ್ನು ಕೋಟ್ ಲಕಪತ್ ಜೈಲಿನಲ್ಲಿ ಸುರಕ್ಷಿತ ಸೆಲ್ ನಲ್ಲಿ ಇರಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇನ್ನು ಭಯೋತ್ಪಾದನೆಯನ್ನು ಹತ್ತಿಕ್ಕುವ ನಿಟ್ಟಿನಲ್ಲಿ ಪಾಕಿಸ್ತಾನದ ಕಾರ್ಯದ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದ ಅಂತಾರಾಷ್ಟ್ರೀಯ ಹಣಕಾಸು ಕ್ರಿಯಾ ಕಾರ್ಯಪಡೆ (Financial Action Task Force-FATF) ಮುಂದಿನ ವರ್ಷ ತನ್ನ ಅಂತಿಮ ನಿರ್ಣಯ ಕೈಗೊಳ್ಳಲ್ಲಿದೆ. ಒಂದು ವೇಳೆ ಪಾಕಿಸ್ತಾನದಲ್ಲಿ ಭಯೋತ್ಪಾದನೆ ನಿಯಂತ್ರಿಸುವ ನಿಟ್ಟಿನಲ್ಲಿ ಪಾಕಿಸ್ತಾನ ಸರ್ಕಾರ ಕೈಗೊಳ್ಳುವ ಕ್ರಮ ಸಮಾಧಾನಕರವಾಗಿಲ್ಲವಾದರೆ ಆ ದೇಶವನ್ನು ಕಪ್ಪು ಪಟ್ಟಿಗೆ ಸೇರಿಸುವ ಅಥವಾ ಅದರ ಮೇಲೆ ನಿರ್ಬಂಧ ಹೇರುವ ಸಾಧ್ಯತೆಗಳಿವೆ ಎನ್ನಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com