ದುಬೈಗೆ ಹೊರಟಿದ್ದ ವಿಮಾನದ ಹೈಜಾಕ್ ಗೆ ವಿಫಲಯತ್ನ; ಓರ್ವ ಬಂದೂಕುಧಾರಿ ಬಂಧನ

ಢಾಕಾದಿಂದ ದುಬೈಗೆ ಹಾರಿದ್ದ ವಿಮಾನವೊಂದನ್ನು ಹೈಜಾಕ್ ಮಾಡಲು ಯತ್ನಿಸಿರುವ ಆಘಾತಕಾರಿ ಘಟನೆ ವರದಿಯಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಢಾಕಾ: ಢಾಕಾದಿಂದ ದುಬೈಗೆ ಹಾರಿದ್ದ ವಿಮಾನವೊಂದನ್ನು ಹೈಜಾಕ್ ಮಾಡಲು ಯತ್ನಿಸಿರುವ ಆಘಾತಕಾರಿ ಘಟನೆ ವರದಿಯಾಗಿದೆ.
ಬಾಂಗ್ಲಾದೇಶ ರಾಜಧಾನಿ ಢಾಕಾದಿಂದ ದುಬೈಗೆ ಹೋಗುತ್ತಿದ್ದ ವಿಮಾನವೊಂದನ್ನು ದುಷ್ಕರ್ಮಿಗಳು ಹೈಜಾಕ್ ಮಾಡಲು ಯತ್ನಿಸಿದ ಘಟನೆ ವರದಿಯಾಗಿದ್ದು, ವಿಮಾನದೊಳಗಿದ್ದ ಬಂದೂಕುಧಾರಿಯೊಬ್ಬ ಗುಂಡು ಹಾರಿಸುತ್ತಾ ಕಾಕ್ ಪಿಟ್ ಗೆ ನುಗ್ಗಲು ಯತ್ನಿಸಿದ್ದಾನೆ. ಈ ವೇಳೆ ವಿಮಾನವನ್ನು ಚಿತ್ತಗಾಂಗ್ ಏರ್​ಪೋರ್ಟ್ ನಲ್ಲಿ ಸಂಜೆ 5:15ಕ್ಕೆ ತುರ್ತಾಗಿ ಲ್ಯಾಂಡಿಂಗ್ ಮಾಡಿಸಿದ್ದಾನೆ. ಆಗ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಒಬ್ಬ ಹೈಜಾಕರ್ ನನ್ನು ಹಿಡಿಯುವಲ್ಲಿ ಸಫಲರಾಗಿದ್ದಾರೆ ಎಂದು ಸುದ್ದಿಸಂಸ್ಥೆ ವರದಿ ಮಾಡಿದೆ.
ಬಾಂಗ್ಲಾದೇಶದ ಬಿಮಾನ್ ಬಾಂಗ್ಲಾದೇಶ ಏರ್ ಲೈನ್ಸ್ ಗೆ ಸೇರಿದ ಬಿಜಿ-147 ವಿಮಾನದಲ್ಲಿ ಈ ಘಟನೆ ನಡೆದಿದ್ದು, ಅದೃಷ್ಟಕ್ಕೆ ವಿಮಾನದ ಯಾವುದೇ ಪ್ರಯಾಣಿಕರಿಗೆ ಜೀವಹಾನಿಯಾಗಿರುವ ಮಾಹಿತಿ ಬಂದಿಲ್ಲ. ಆದರೆ ಘಟನೆಯಲ್ಲಿ ವಿಮಾನದ ಕೆಲ ಸಿಬ್ಬಂದಿಗೆ ಗುಂಡೇಟು ತಗುಲಿದೆ ಎನ್ನಲಾಗಿದೆ.  ವಿಮಾನವನ್ನು ವಶಕ್ಕೆ ಪಡೆಯಲು ಯತ್ನಿಸಿದ ಹೈಜಾಕರ್ ಯಾರೆಂಬುದು ಇನ್ನೂ ಗೊತ್ತಾಗಿಲ್ಲ. ಆತ ಕಾಕ್​ಪಿಟ್ ಗೆ ನುಗ್ಗಿ ಪೈಲಟ್ ಗಳನ್ನು ಬೆದರಿಸಿ ಚಿತ್ತಗಾಂಗ್​ನಲ್ಲೇ ಲ್ಯಾಂಡ್ ಮಾಡಿಸಿದ್ದಾನೆ. ತಾನು ಪ್ರಧಾನಿಯೊಂದಿಗೆ ಮಾತನಾಡಬೇಕು ಎಂದು ಬೇಡಿಕೆ ಇಟ್ಟಿದ್ದ ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿಕೆ ನೀಡಿದ್ದನ್ನು ಕೆಲ ಮಾಧ್ಯಮಗಳು ವರದಿ ಮಾಡಿವೆ.
ಆದರೆ, ಇನ್ನೂ ಕೆಲ ವರದಿಗಳ ಪ್ರಕಾರ ಚಿತ್ತಗಾಂಗ್ ನಿಂದ ದುಬೈಗೆ ಹೊರಟಿದ್ದ ವಿಮಾನದಲ್ಲಿ ಕುಳಿತಿದ್ದ ವ್ಯಕ್ತಿಯೊಬ್ಬನ ಬಳಿ ಗನ್ ಇದ್ದದ್ದನ್ನ ಸಹಪ್ರಯಾಣಿಕರು ಗಮನಿಸಿದ್ದಾರೆ. ಈ ವೇಳೆ ವಿಮಾನದ ಸಿಬ್ಬಂದಿಯನ್ನು ಈ ಬಗ್ಗೆ ಎಚ್ಚರಿಸಿದ್ದಾರೆ. ಆಗ ಕೂಡಲೇ ಏರ್ ಪೋರ್ಟ್​​ನಲ್ಲೇ ವಿಮಾನವನ್ನು ತುರ್ತಾಗಿ ಇಳಿಸಲಾಗಿದೆ. ಆ ಬಳಿಕ ಎಲ್ಲಾ 142 ಪ್ರಯಾಣಿಕರನ್ನು ಸುರಕ್ಷಿತವಾಗಿ ಇಳಿಸಿ, ಬಂದೂಕುಧಾರಿಯನ್ನು ಬಂಧಿಸಲಾಗಿದೆ.
ಬಾಂಗ್ಲಾದೇಶದ ಪೊಲೀಸರ ಪ್ರಕಾರ ಈ ಶಂಕಿತ ವ್ಯಕ್ತಿಯ ಕೈಯಲ್ಲಿ ಬಾಂಬ್ ಇತ್ತೆನ್ನಲಾಗಿದೆ. ಆತನನ್ನು ವಿಚಾರಣೆಗೊಳಪಡಿಸಿದಾಗ ಆತನಿಗೆ ಮಾನಸಿಕ ಸಮಸ್ಯೆ ಇರುವುದು ಗೊತ್ತಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com