ಕೊಲಂಬೊ: ಇತ್ತೀಚೆಗೆ ನಡೆದ ಭೀಕರ ಭಯೋತ್ಪಾದಕ ದಾಳಿಯಲ್ಲಿ 253 ಮಂದಿ ಮೃತಪಟ್ಟ ಘಟನೆಯ ಬಳಿಕ ಎಚ್ಚರಿಕೆ ವಹಿಸಲು ಸಾಮಾಜಿಕ ಮಾಧ್ಯಮಗಳ ಬಳಕೆಗೆ ನಿಷೇಧ ಹೇರಿದ್ದ ಶ್ರೀಲಂಕಾ ಸರ್ಕಾರ ಅದನ್ನು ಹಿಂತೆಗೆದುಕೊಂಡಿದೆ.
ಫೇಸ್ ಬುಕ್, ವಾಟ್ಸಾಪ್, ಯೂಟ್ಯೂಬ್ ಮತ್ತು ಇದರ ಸಾಮಾಜಿಕ ಮಾಧ್ಯಮಗಳ ಬಳಕೆಯ ಮೇಲೆ ಕಳೆದ 10 ದಿನಗಳಿಂದ ಹೇರಲಾಗಿದ್ದ ನಿಷೇಧವನ್ನು ನಿನ್ನೆ ಹಿಂತೆಗೆದುಕೊಳ್ಳಲು ದೂರಸಂಪರ್ಕ ನಿಯಂತ್ರಣ ಆಯೋಗಕ್ಕೆ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಆದೇಶ ನೀಡಿದ್ದಾರೆ. ಅದರಂತೆ ನಿನ್ನೆಯಿಂದ ನಿಷೇಧ ಹಿಂತೆಗೆದುಕೊಳ್ಳಲಾಗಿದೆ.
ಸೋಷಿಯಲ್ ಮೀಡಿಯಾಗಳಲ್ಲಿ ಯಾವುದೇ ಮಾಹಿತಿ ಶೇರ್ ಮಾಡುವ ಮುನ್ನ ಸಾರ್ವಜನಿಕರು ಜವಾಬ್ದಾರಿಯುತವಾಗಿ ದೇಶದಲ್ಲಿನ ಪ್ರಸ್ತುತದ ಪರಿಸ್ಥಿತಿ ಅರಿತುಕೊಂಡು ಮಾಹಿತಿ ಹಂಚಿಕೊಳ್ಳುವಂತೆ ಸರ್ಕಾರ ತಿಳಿಸಿದೆ.
ಕಳೆದ ಏಪ್ರಿಲ್ 21ರಂದು ಶ್ರೀಲಂಕಾದ ಮೂರು ಚರ್ಚುಗಳು ಮತ್ತು ಐಷಾರಾಮಿ ಹೊಟೇಲ್ ಗಳ ಮೇಲೆ ನಡೆದ ಪ್ರಬಲ ಭಯೋತ್ಪಾದಕ ದಾಳಿಯಲ್ಲಿ 253 ಮಂದಿ ಅಸುನೀಗಿ 500ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಘಟನೆ ಬಳಿಕ ಸುಳ್ಳು ಸುದ್ದಿಗಳು, ತಪ್ಪು ಮಾಹಿತಿಗಳು ಹಬ್ಬಿ ಕೋಮು ಸಾಮರಸ್ಯಕ್ಕೆ ಧಕ್ಕೆಯುಂಟಾಗಬಾರದು ಎಂಬ ಕಾರಣಕ್ಕೆ ಸರ್ಕಾರ ಸೋಷಿಯಲ್ ಮೀಡಿಯಾ ಬಳಕೆಯನ್ನು ತಡೆಯೊಡ್ಡಿತ್ತು. ಇಸ್ಲಾಮಿಕ್ ಸ್ಟೇಟ್ ದಾಳಿಯ ಹೊಣೆ ಹೊತ್ತಿದ್ದರೂ ಶ್ರೀಲಂಕಾ ಸರ್ಕಾರ ಮಾತ್ರ ಬಾಂಬ್ ದಾಳಿಗೆ ಸ್ಥಳೀಯ ಇಸ್ಲಾಮಿಕ್ ಭಯೋತ್ಪಾದಕ ಗುಂಪು ನ್ಯಾಶನಲ್ ತೊವೀತ್ ಜಮಾತ್(ಎನ್ ಟಿಜೆ) ಕಾರಣ ಎಂದು ಆರೋಪಿಸಿದೆ.