ಮೌಂಟ್ ಎವರೆಸ್ಟ್ ಶಿಖರದಲ್ಲಿ ಟನ್ ಗಟ್ಟಲೇ ತ್ಯಾಜ್ಯ ಹೊರತೆಗೆದ ನೇಪಾಳ

ವಿಶ್ವದ ಅತ್ಯಂತ ಎತ್ತರದ ಶಿಖರ ಮೌಂಟ್ ಎವರೆಸ್ಟ್ ನ ಸ್ವಚ್ಛತಾ ಅಭಿಯಾನ ಕೊನೆಗೂ ಅಂತ್ಯಗೊಂಡಿದ್ದು, ಹಲವು ದಶಕಗಳಿಂದ ಸಂಗ್ರಹಣೆಯಾಗಿದ್ದ ಸುಮಾರು 11 ಟನ್ ತ್ಯಾಜ್ಯವನ್ನು ವಿಲೇವಾರಿ ಮಾಡಲಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಕಠ್ಮಂಡು: ವಿಶ್ವದ ಅತ್ಯಂತ ಎತ್ತರದ ಶಿಖರ ಮೌಂಟ್ ಎವರೆಸ್ಟ್ ನ ಸ್ವಚ್ಛತಾ ಅಭಿಯಾನ ಕೊನೆಗೂ ಅಂತ್ಯಗೊಂಡಿದ್ದು, ಹಲವು ದಶಕಗಳಿಂದ ಸಂಗ್ರಹಣೆಯಾಗಿದ್ದ ಸುಮಾರು 11 ಟನ್ ತ್ಯಾಜ್ಯವನ್ನು ವಿಲೇವಾರಿ ಮಾಡಲಾಗಿದೆ.
ನೇಪಾಳ ಸರ್ಕಾರ ನಡೆಸಿದ ವಿಶೇಷ ಎವರೆಸ್ಟ್ ತ್ಯಾಜ್ಯ ನಿರ್ವಹಣಾ ಅಭಿಯಾನದ ಮೂಲಕ ಶಿಖರದಲ್ಲಿ ಶೇಖರಣೆಯಾಗಿದ್ದ ಸುಮಾರು 11 ಟನ್ ತ್ಯಾಜ್ಯವನ್ನುವಿಲೇವಾರಿ ಮಾಡಲಾಗಿದೆ ಎಂದು ತಿಳಿದುಬಂದಿದೆ. ಹಿಮಾಲಯ ಪರ್ವತದಲ್ಲಿ ರಾಶಿ ರಾಶಿ ಬಿದ್ದಿದ್ದ ಹಳೆಯ ಉಪಕರಣಗಳು, ಆಮ್ಲಜನಕದ ಸಿಲಿಂಡರ್, ತ್ಯಾಜ್ಯ ಹಾಗೂ ಮಾನವರ ತ್ಯಾಜ್ಯವನ್ನು ಹೊರತೆಗೆಯಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
66 ವರ್ಷಗಳ ಹಿಂದೆ ಎಡ್ಮಂಡ್‍ ಹಿಲರಿ ಹಾಗೂ ತೇನ್ ಸಿಂಗ್ ಶೆರ್ಪಾ ಅವರು ಪ್ರಪ್ರಥಮ ಬಾರಿಗೆ ಹಿಮಾಲಯ ಪರ್ವತದ ತುತ್ತತುದಿ ತಲುಪಿದ ನಂತರ ಇದೇ ಮೊದಲ ಬಾರಿಗೆ ಪರ್ವತದ ಸ್ವಚ್ಛತಾ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಏಪ್ರಿಲ್ ತಿಂಗಳಲ್ಲಿ ಆರಂಭಗೊಂಡಿದ್ದ ಈ ಅಭಿಯಾನಕ್ಕೆ 12 ಅತಿ ಎತ್ತರದ ಶೆರ್ಪಾ ಪರ್ವತಾರೋಹಿಗಳನ್ನು ಬಳಸಿಕೊಳ್ಳಲಾಗಿತ್ತು. ಈ ಅಭಿಯಾನಕ್ಕೆ ನೇಪಾಳದ ಪ್ರವಾಸೋದ್ಯಮ ಇಲಾಖೆ, ನೇಪಾಳದ ಸೇನೆ, ಪರ್ವತಾರೋಹಣ ಸಂಘ, ಪ್ರವಾಸೋದ್ಯಮ ಮಂಡಳಿ, ಸಾಗರ್ ಮಾತಾ ರಾಷ್ಟ್ರೀಯ ಉದ್ಯಾನವನ, ಎಸ್ ಪಿಸಿಸಿ ಹಾಗೂ ಸ್ಥಳೀಯ ಸರ್ಕಾರಗಳು ಕೈಜೋಡಿಸಿದ್ದವು. 
ತ್ಯಾಜ್ಯದ ಜೊತೆಗೆ, ಪರ್ವತದ ತುತ್ತತುದಿಯಲ್ಲಿ ಮೃತದೇಹಗಳು ಕೂಡ ಪತ್ತೆಯಾಗಿದ್ದು, ಕಳೆದ ವಾರ ಅವುಗಳನ್ನು ರಾಜಧಾನಿ ಕಠ್ಮಂಡುಗೆ ರವಾನಿಸಲಾಗಿದೆ ಎಂದು ನೇಪಾಳ ಪ್ರವಾಸೋದ್ಯಮ ಇಲಾಖೆಯ ಪ್ರಧಾನ ನಿರ್ದೇಶಕ ದಂಡು ರಾಜ್ ಗಿಮಿರೆ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಅವರ ಪ್ರಕಾರ, ಈ ಸ್ವಚ್ಛತಾ ಅಭಿಯಾನಕ್ಕೆ 23 ದಶಲಕ್ಷ ವೆಚ್ಚವಾಗಿದೆ. ಇನ್ನೊಂದೆಡೆ ಚೀನಾ ಕೂಡ ವಿಶ್ವದ ಅತ್ಯಂತ ದೊಡ್ಡ ಪರ್ವತವಾದ ಮೌಂಟ್ ಎವರೆಸ್ಟ್ ನ ಉತ್ತರ ಭಾಗದಲ್ಲಿ ಸ್ಪಚ್ಛತಾ ಕಾರ್ಯ ಅರಂಭಿಸಿದೆ.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಪರ್ವತದಲ್ಲಿ ಶೇಖರಣೆಯಾಗಿರುವ ತ್ಯಾಜ್ಯದ ಕುರಿತು ಸಾಕಷ್ಟು ಕಾಳಜಿ ಹಾಗೂ ನೇಪಾಳ ಸರ್ಕಾರ ಐತಿಹಾಸಿಕ ಶಿಖರದ ಸೌಂದರ್ಯ ಕಾಪಾಡಲು ಶ್ರಮ ವಹಿಸಿಲ್ಲ ಎಂಬ ಆರೋಪಗಳು ಕೇಳಿ ಬಂದಿದ್ದವು. ಈ ಹಿನ್ನೆಲೆಯಲ್ಲಿ ನೇಪಾಳ ಸರ್ಕಾರ ಈ ಸ್ವಚ್ಛತಾ ಅಭಿಯಾನ ಆರಂಭಿಸಿದ್ದು, ಮುಂದಿನ ದಿನಗಳಲ್ಲಿ ಕೂಡ ಇದನ್ನು ಮುಂದುವರಿಸಲಿದೆ ಎಂದರು. ಸಗರ್ ಮಾತಾ ಮಾಲಿನ್ಯ ನಿಯಂತ್ರಣ ಸಮಿತಿಯ ಅಧ್ಯಕ್ಷ ಅಂಜ್ ದೋರ್ಜೆ ಶೆರ್ಪಾ ಪ್ರಕಾರ, ಶಿಖರದ ಆರಂಭಿಕ ಹಾಗೂ ಎತ್ತರದ ಶಿಬಿರಗಳಲ್ಲಿ 7 ಟನ್ ಹಾಗೂ ಶಿಖರದ ಮುಖ್ಯದ್ವಾರ ಎಂದು ಪರಿಗಣಿಸಲಾಗಿರುವ ಲುಕ್ಲ ಹಾಗೂ ನಾಮ್ಚೆ ಬಜಾರ್ ಗ್ರಾಮಗಳಿಂದ 4 ಟನ್ ತ್ಯಾಜ್ಯ ಸಂಗ್ರಹಿಸಲಾಗಿದೆ.
ಪರ್ವತಾರೋಹಿಗಳಿಗೆ ತ್ಯಾಜ್ಯ ಸಂಗ್ರಹಣೆ ಟಾರ್ಗೆಟ್!
ಪ್ರತಿ ವರ್ಷ ಏಪ್ರಿಲ್ ಆರಂಭದಿಂದ ಮೇ ಅಂತ್ಯದವರೆಗೆ ಮೌಂಟ್ ಎವರೆಸ್ಟ್ ಪ್ರರ್ವತಾರೋಹಣಕ್ಕೆ ಬರುವ ಯಾತ್ರಿಗರು, ತಾವು ಬಳಸಿದ ವಸ್ತುಗಳನ್ನು ಅಲ್ಲಿಯೇ ಎಸೆದುಹೋಗುವುದರಿಂದ ಇದು ವಿಶ್ವದ ಅತಿ ದೊಡ್ಡ ತ್ಯಾಜ್ಯದ ರಾಶಿ ಎಂಬ ಕುಖ್ಯಾತಿಗೆ ಪಾತ್ರವಾಗಿತ್ತು. ನೇಪಾಳ ಸರ್ಕಾರ ಪ್ರತಿ ವರ್ಷ ಪರ್ವತಾರೋಹಿಗಳಿಗೆ ಶಿಖರ ಏರಲು ನೀಡುವ ಪರವಾನಗಿಯಿಂದ 3.55 ದಶಲಕ್ಷ ಡಾಲರ್ ಹಣ ಸಂಗ್ರಹಿಸುತ್ತದೆ. 2014ರಲ್ಲಿ ಸರ್ಕಾರ, ಪ್ರತಿ ಪರ್ವತಾರೋಹಿಗಳು ಹಿಂದಿರುಗುವಾಗ , ತಾವು ಉತ್ಪಾದಿಸಿದ ತ್ಯಾಜ್ಯದ ಜೊತೆಗೆ, ಹೆಚ್ಚುವರಿಯಾಗಿ ಕನಿಷ್ಠ 8 ಕೆಜಿ ಸಂಗ್ರಹಿಸಿದ ತ್ಯಾಜ್ಯವನ್ನು ತರುವಂತೆ ನೀತಿ ರೂಪಿಸಿತ್ತು. ಅದರಂತೆ ಶಿಖರವನ್ನು ಏರುವ ಪರ್ವತಾರೋಹಿಗಳು ತಮ್ಮೊಂದಿಗೆ ತಾವು ಬಳಿಸಿದ ತ್ಯಾಜ್ಯ ಮಾತ್ರವಲ್ಲದೇ ಶಿಖರದಲ್ಲಿ ದೊರೆತ ತ್ಯಾಜ್ಯಗಳನ್ನು ಕೆಳಗೆ ತರುತ್ತಿದ್ದರು. ಈ ರೀತಿಯಲ್ಲೂ ಸಾಕಷ್ಟು ಪ್ರಮಾಣದ ತ್ಯಾಜ್ಯ ನಿರ್ವಹಣೆಯಾಗಿತ್ತು. ಆ ಮೂಲಕ ಪರ್ವತಾರೋಹಿಗಳಲ್ಲೂ ನೇಪಾಳ ಸರ್ಕಾರ ಸ್ವಚ್ಛತೆ ಅರಿವು ಮೂಡಿಸುವ ಕೆಲಸ ಮಾಡಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com