ಯಾರು ಈ ಅಬೂಬಕರ್ ಅಲ್ ಬಾಗ್ದಾದಿ? ಇಲ್ಲಿದೆ ಆತನ ಪೂರ್ಣ ಚರಿತ್ರೆ!

ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಮತ್ತು ಲೆವಂಟ್ (ಐಎಸ್ಐಎಲ್, ಅಥವಾ ಐಸಿಸ್) ಸಶಸ್ತ್ರ ಗುಂಪಿನ ನಾಯಕನಾಗಿ ಎಲ್ಲಾ ಮುಸ್ಲಿಮರ "ಖಲೀಫ" ಎಂದು ಘೋಷಿಸಿಕೊಂಡಿದ್ದ, ಜಾಗತಿಕ ಭಯೋತ್ಪಾದಕ ಇರಾಕಿನ ಅಬೂಬಕರ್ ಅಲ್-ಬಾಗ್ದಾದಿ, ಅಮೆರಿಕ ದಾಳಿಯಲ್ಲಿ ಹತ್ಯೆಗೀಡಾಗಿದ್ದು, ಅಮೆರಿಕ ಅಧ್ಯಕ್ಷರು ಭಾನುವಾರ ಆತನ ಸಾವನ್ನು ದೃಢಪಡಿಸಿದ್ದಾರೆ
Abu Bakr al-Baghdadi
Abu Bakr al-Baghdadi
Updated on

ವಾಷಿಂಗ್ಟನ್ : ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಮತ್ತು ಲೆವಂಟ್ (ಐಎಸ್ಐಎಲ್, ಅಥವಾ ಐಸಿಸ್) ಸಶಸ್ತ್ರ ಗುಂಪಿನ ನಾಯಕನಾಗಿ ಎಲ್ಲಾ ಮುಸ್ಲಿಮರ "ಖಲೀಫ" ಎಂದು ಘೋಷಿಸಿಕೊಂಡಿದ್ದ, ಜಾಗತಿಕ ಭಯೋತ್ಪಾದಕ ಇರಾಕಿನ ಅಬೂಬಕರ್ ಅಲ್-ಬಾಗ್ದಾದಿ, ಅಮೆರಿಕ ದಾಳಿಯಲ್ಲಿ ಹತ್ಯೆಗೀಡಾಗಿದ್ದು, ಅಮೆರಿಕ ಅಧ್ಯಕ್ಷರು ಭಾನುವಾರ ಆತನ ಸಾವನ್ನು ದೃಢಪಡಿಸಿದ್ದಾರೆ.

48 ವರ್ಷ  ಅಲ್-ಬಾಗ್ದಾದಿ ವಾಯವ್ಯ ಸಿರಿಯಾದ ಇದ್ಲೀಬ್‌ನಲ್ಲಿ ನಡೆದ ದಾಳಿಯ ವೇಳೆ ತನ್ನನ್ನು ತಾನು ಸ್ಫೋಟಿಸಿ ಹತ್ಯೆಯಾಗಿದ್ದಾನೆ ಎಂದು ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ದಾಳಿಯ ನಂತರದ ಡಿಎನ್‌ಎ ಪರೀಕ್ಷೆ ಕೂಡ ಅಲ್-ಬಾಗ್ದಾದಿ ಎಂಬುದನ್ನು ದೃಢಪಡಿಸಿದೆ ಎಂದು ಅಮೆರಿಕ ಅಧ್ಯಕ್ಷರು ಹೇಳಿದ್ದಾರೆ.

ಸಿರಿಯಾ, ಇರಾಕ್ ಸೇರಿದಂತೆ ಹಲವೆಡೆ ಪ್ರಾಬಲ್ಯ ಹೊಂದಿದ್ದ ಐಎಸ್‌ಐಎಲ್‌ ಅನ್ನು ಅಮೆರಿಕ ಮತ್ತು ಪ್ರಾದೇಶಿಕ ಭದ್ರತಾ ಪಡೆಗಳು ನಿರ್ಮೂಲನೆ ಮಾಡಲು ಪ್ರಯತ್ನಿಸುತ್ತಲೇ ಇತ್ತು. 2014 ರಲ್ಲಿ ಇರಾಕ್‌ನ ಮೊಸುಲ್‌ನಲ್ಲಿ ಸ್ವಯಂ ಘೋಷಿತ, ಖಲೀಫಾ ಎಂದು ಅಲ್-ಬಾಗ್ದಾದಿ ಘೋಷಿಸಿದ ಕೆಲವೇ ತಿಂಗಳುಗಳಲ್ಲಿ, ಈ ಗುಂಪನ್ನು ಅಮೆರಿಕದ ನೇತೃತ್ವದ ಪಡೆಗಳು ಗುರಿಯಾಗಿಸಿ ದಾಳಿ ನಡೆಸಿದ್ದವು.

ಈ ಶಸಸ್ತ್ರ ಗುಂಪು, ಉತ್ತರ ಇರಾಕ್‌ನ ಕುರ್ದಿಷ್-ನಿಯಂತ್ರಿತ ಪ್ರದೇಶಕ್ಕೆ ಮತ್ತಷ್ಟು ಹರಡಿತು, ಅಲ್ಲಿ ಅವರು ಯಾಜಿದಿ ಸಮುದಾಯ ಸೇರಿದಂತೆ ಅಲ್ಪಸಂಖ್ಯಾತರನ್ನು ಗುಲಾಮರನ್ನಾಗಿ ಮಾಡಿ ದೌರ್ಜನ್ಯವೆಸಗುತ್ತಿದ್ದರು. ಜನವರಿ 2015 ರಲ್ಲಿ ಐಎಸ್ಐಎಲ್ ಸಿರಿಯಾ ಮತ್ತು ಇರಾಕ್‌ನಾದ್ಯಂತ ಇಂಗ್ಲೆಂಡ್‌ನಷ್ಟು ದೊಡ್ಡ ಗಾತ್ರದ ಭೂ ಪ್ರದೇಶದಲ್ಲಿ ಪ್ರಾಬಲ್ಯ ಮೆರೆದಿತ್ತು. ಮಾತ್ರವಲ್ಲ ಸುಮಾರು 40,000 ವಿದೇಶಿ ಹೋರಾಟಗಾರರನ್ನು ತನ್ನ ಉದ್ದೇಶ ಈಡೇರಿಸಿಕೊಳ್ಳಲು ನೇಮಿಸಿಕೊಂಡಿತ್ತು.

ಸ್ವಯಂ ಘೋಷಿತ ಖಲೀಫಾ, ಅಲ್ ಬಗ್ದಾದಿಯ ತಲೆಗೆ ಅಮೆರಿಕ 25 ಮಿಲಿಯನ್ ಅಮೆರಿಕನ್ ಡಾಲರ್ ಬಹುಮಾನ ಘೋಷಿಸಿತ್ತು. ಇಷ್ಟೇ ಮೊತ್ತದ ಬಹುಮಾನವನ್ನು ಅಮೆರಿಕ, ಅಲ್ ಖೈದಾ ನಾಯಕ ಉಸಾಮ ಬಿನ್ ಲಾಡೆನ್ ಮತ್ತು ಆತನ ಉತ್ತರಾಧಿಕಾರಿ ಅಯ್ಮನ್ ಅಲ್ ಝವಾಹರಿಯ ತಲೆಗೂ ಘೋಷಿಸಿತ್ತು.

ಅಮೆರಿಕ ವಾಯು ದಾಳಿ ನಡೆಸಿ ಈಗಾಗಲೇ ಈ ಗುಂಪಿನ ಪ್ರಮುಖರಾದ ಅಬೂ ಉಮರ್ ಅಲ್-ಶಿಶಾನಿ, ಅಬೂ ಮುಸ್ಲಿಂ ಅಲ್-ತುರ್ಕಮನಿ, ಅಬೂ ಅಲಿ ಅಲ್-ಅನ್ಬರಿ, ಅಬೂ ಸಯ್ಯಫ್ ಮತ್ತು ಗುಂಪಿನ ವಕ್ತಾರ ಅಬೂ ಮುಹಮ್ಮದ್ ಅಲ್-ಅದ್ನಾನಿ ಸೇರಿದಂತೆ ಅಲ್-ಬಾಗ್ದಾದಿಯ ಉನ್ನತ ಲೆಫ್ಟಿನೆಂಟ್‌ಗಳನ್ನು ಹತ್ಯೆ ಮಾಡಿತ್ತು.

2014ರ ಸೆಪ್ಟೆಂಬರ್‌ನಲ್ಲಿ ಈ ಭಯೋತ್ಪಾದಕ ಗುಂಪನ್ನು ಸೋಲಿಸಲು ಜಾಗತಿಕ ಒಕ್ಕೂಟ ರಚನೆಯಾದಾಗಿನಿಂದ ಸಾವಿರಾರು ಐಎಸ್‌ಐಎಲ್ ಯೋಧರು ಕೊಲ್ಲಲ್ಪಟ್ಟರು ಅಥವಾ ಸೆರೆಹಿಡಿಯಲ್ಪಟ್ಟಿದ್ದಾರೆ. ಅಲ್-ಬಾಗ್ದಾದಿ ಇರಾಕಿನ ರಾಜಧಾನಿ ಬಾಗ್ದಾದ್‌ನ ಉತ್ತರದ ಸಮರ್ರಾ ಪಟ್ಟಣದ ಸಮೀಪವಿರುವ ಹಿಂದುಳಿದ ಪ್ರದೇಶವಾದ ಟೋಬ್ಚಿ ಎಂಬಲ್ಲಿನ ಇಬ್ರಾಹಿಂ ಅವಾದ್ ಅಲ್-ಸಮರ್ರಾ ಎಂಬಲ್ಲಿ 1971ರಲ್ಲಿ ಜನಿಸಿದನು. ಆತನ ಕುಟುಂಬವು ಸುನ್ನಿ ವಿಭಾಗದ ಸಲಫಿ ಶಾಖೆಯಾಗಿತ್ತು. ಈ ಗುಂಪು ಇಸ್ಲಾಮಿನ ಇತರ ಹಲವು ನಂಬಿಕೆಯನ್ನು ಧರ್ಮದ್ರೋಹಿ ಮತ್ತು ಇತರ ಧರ್ಮಗಳ ಜನರನ್ನು ದುಷ್ಟರು ಎಂದು ಭಾವಿಸುತ್ತದೆ.

ಅಮೆರಿಕ ಪಡೆ, ಇರಾಕ್‌ನ ಮೇಲೆ ದಾಳಿ ಮಾಡಿದ 2003ರಲ್ಲಿ ಅಬೂಬಕರ್, ಇರಾಕ್‌ನಲ್ಲಿ ಸಶಸ್ತ್ರ ಚಳವಳಿ ಆರಂಭಿಸಿದನು. ಈ ವೇಳೆ ಅಮೆರಿಕ ಪಡೆ ಆತನನ್ನು ಬಂಧಿಸಿತ್ತು. ಆತ ಸೇನಾ ಬೆದರಿಕೆಗಿಂತ ನಾಗರಿಕ ಚಳವಳಿಕಾರ ಎಂದು ಭಾವಿಸಿ ಸುಮಾರು ಒಂದು ವರ್ಷದ ನಂತರ ಆತನನ್ನು ಬಿಡುಗಡೆ ಮಾಡಿತು.

ಅಲ್-ಜರ್ಕಾವಿಯ ಉತ್ತರಾಧಿಕಾರಿ - ಅಬೂ ಉಮರ್ ಅಲ್-ಬಾಗ್ದಾದಿಯನ್ನು ಸಹ ಗುಂಪಿನಿಂದ ಹೊರಹಾಕಲ್ಪಟ್ಟ ನಂತರ, ಅಬೂಬಕರ್ ಅಲ್-ಬಾಗ್ದಾದಿ 2010 ರಲ್ಲಿ ಈ ಗುಂಪಿನ ಚುಕ್ಕಾಣಿ ಹಿಡಿದನು. ಆತ ಈ ಗುಂಪನ್ನು ವಿಸ್ತರಿಸುತ್ತಾ ಸಾಗಿದನು. ಇದು ಸಿರಿಯಾಕ್ಕೆ ವಿಸ್ತರಿಸಿದ ನಂತರ 2012 ರಲ್ಲಿ ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಮತ್ತು ಲೆವಂಟ್ ಆಗಿ ಹೆಸರು ಮಾರ್ಪಡಿಸಲಾಯಿತು.

ಜುಲೈ 4, 2014 ರವರೆಗೆ, ಅಲ್-ಬಾಗ್ದಾದಿ ವಿಶ್ವದ ಗಮನವನ್ನು ಸೆಳೆದನು. ಖಿಲಾಫತ್‌ನ ಪುನಃಸ್ಥಾಪನೆಯನ್ನು ಘೋಷಿಸಲು ಶುಕ್ರವಾರದ ಪ್ರಾರ್ಥನೆಯ ಸಮಯದಲ್ಲಿ ಆತ ಕಪ್ಪು ಸಾಂಪ್ರದಾಯಿಕ ಉಡುಪಿನಲ್ಲಿ, ಮೊಸುಲ್‌ನ ಮಧ್ಯಕಾಲೀನ ಅಲ್-ನೂರಿ ಮಸೀದಿಯ ಪ್ರವಚನಪೀಠವನ್ನು ಏರಿದನು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com