ಇಸ್ಲಾಮಬಾದ್: ಕಾಶ್ಮೀರ ವಿಷಯದಲ್ಲಿ ಭಾರತದೊಂದಿಗೆ ಉದ್ವಿಗ್ನತೆ ಹೆಚ್ಚಾಗಿರುವ ಸಂದರ್ಭದಲ್ಲೇ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್, ಕಣಿವೆಯಲ್ಲಿ ಹೇರಿರುವ ಕರ್ಫ್ಯೂವನ್ನು ಹಿಂಪಡೆಯದೆ ಮತ್ತು ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ಮರುಸ್ಥಾಪಿಸದೆ ಭಾರತದೊಂದಿಗೆ ಮಾತುಕತೆ ನಡೆಸುವುದರಿಂದ ಯಾವುದೇ ಪ್ರಯೋಜನವಿಲ್ಲ ಎಂದು ಹೇಳಿದ್ದಾರೆ.
ಕಾಶ್ಮೀರದಲ್ಲಿ ಕರ್ಫ್ಯೂವನ್ನು ಹಿಂಪಡೆಯದೆ ಮತ್ತು 370ನೇ ವಿಧಿಯನ್ನು ಹಿಂದೆಗೆದುಕೊಂಡಿರುವುದನ್ನು ಕೈಬಿಡದ ಹೊರತು ಉಭಯ ದೇಶಗಳ ನಡುವೆ ಮಾತುಕತೆ ಅಸಾಧ್ಯ ಎಂದು ಇಮ್ರಾನ್ ಖಾನ್ ಬುಧವಾರ ಪೇಶಾವರದಲ್ಲಿ ಹೇಳಿರುವುದಾಗಿ 'ಡಾನ್' ಪತ್ರಿಕೆ ವರದಿ ಮಾಡಿದೆ.
ಕಾಶ್ಮೀರದಲ್ಲಿ ಕಳೆದ 45 ದಿನಗಳಿಂದ ಕರ್ಫ್ಯೂ ಹೇರಲಾಗಿದೆ ಎಂದು ಪಾಕ್ ಪ್ರಧಾನಿ ಹೇಳಿದ್ದಾರೆ.
ಪಾಕಿಸ್ತಾನದ ಯಾರಾದರೂ ಕಾಶ್ಮೀರದಲ್ಲಿ ಹೋರಾಡಲು ಅಥವಾ ಕಾಶ್ಮೀರದಲ್ಲಿ ಜಿಹಾದ್‌ಗೆ ಹೋಗಲು ಬಯಸಿದರೆ ಅವರು ಕಾಶ್ಮೀರಿಗಳಿಗೆ ದೊಡ್ಡ ಅನ್ಯಾಯ ಮಾಡುತ್ತಿದ್ದಾರೆ. ಇಂತಹ ಕೃತ್ಯವು ಕಾಶ್ಮೀರಿಗಳ ವಿರುದ್ಧದ ದ್ವೇಷದ ಕಾರ್ಯವಾಗುತ್ತದೆ ಎಂದು ಅವರು ಹೇಳಿದ್ದಾರೆ.
ಈಗ ನಾನು ಹೇಳಲು ಹೊರಟಿರುವುದು ಇದನ್ನೇ. ಅಂತಹ ಯಾವುದೇ ಪ್ರಯತ್ನವನ್ನು ಮಾಡುವವರು (ಕಾಶ್ಮೀರಕ್ಕೆ ಹೋರಾಡಲು ಹೋಗುವವರು) ಪಾಕಿಸ್ತಾನದ ಶತ್ರು ಮತ್ತು ಕಾಶ್ಮೀರಿಗಳ ಶತ್ರುಗಳಾಗುತ್ತಾರೆ ಎಂದು ಅವರು ಪ್ರತಿಪಾದಿಸಿದರು.
ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ಕಳೆದ ತಿಂಗಳು ಭಾರತ ಸರ್ಕಾರ ರದ್ದುಪಡಿಸಿದ ನಂತರ ಪರಮಾಣು ಶಸ್ತ್ರಾಸ್ತ್ರ ಹೊಂದಿರುವ ಎರಡು ದೇಶಗಳ ನಡುವೆ ಉದ್ವಿಗ್ನತೆ ಹೆಚ್ಚಾಗಿದೆ.
ಅಂದಿನಿಂದ ಪಾಕಿಸ್ತಾನವು ಕಾಶ್ಮೀರ ಸಮಸ್ಯೆಯನ್ನು ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಎತ್ತಲು ಪ್ರಯತ್ನಿಸುತ್ತಿದೆ. ಇಮ್ರಾನ್ ಖಾನ್ ಮುಂದಿನ ವಾರ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯನ್ನು ಉದ್ದೇಶಿಸಿ ಮಾತನಾಡಲು ಅಮೆರಿಕಕ್ಕೆ ಭೇಟಿ ನೀಡಲಿದ್ದಾರೆ. ಈ ವೇಳೆ ಅವರು ಕಾಶ್ಮೀರದ ಬಗ್ಗೆ ಮಾತನಾಡುವ ಸಾಧ್ಯತೆ ಇದೆ.
Advertisement