ಡೊನಾಲ್ಡ್ ಟ್ರಂಪ್ ಸುಳ್ಳು ಬಟಾಬಯಲು: ಕಾಶ್ಮೀರ ಮಧ್ಯಸ್ಥಿಕೆಗೆ ಭಾರತ ಮನವಿ ಮಾಡಿರಲಿಲ್ಲ ಎಂದ ಅಮೆರಿಕ ಅಧಿಕಾರಿಗಳು!

ಕಾಶ್ಮೀರ ವಿಚಾರವಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸುಳ್ಳು ಬಟಾ ಬಯಲಾಗಿದ್ದು, ಕಾಶ್ಮೀರ ವಿಚಾರವಾಗಿ ಮಧ್ಯಸ್ಥಿಕೆ ವಹಿಸುವಂತೆ ಭಾರತ ಮನವಿ ಮಾಡಿರಲಿಲ್ಲ ಎಂದು ಸ್ವತಃ ಅಮೆರಿಕ ಅಧಿಕಾರಿಗಳೇ ಸ್ಪಷ್ಟ ಪಡಿಸಿದ್ದಾರೆ.
ಮೋದಿ-ಟ್ರಂಪ್
ಮೋದಿ-ಟ್ರಂಪ್

ಪಾಕಿಸ್ತಾನದೊಂದಿಗೆ ಶೀಥಲ ಸಮರಕ್ಕೆ ಕಾರಣವಾಗಿರುವ ಕಾಶ್ಮೀರ ಸಮಸ್ಯೆಗೆ ಮಧ್ಯಸ್ಥಿಕೆಗೆ ಪ್ರಧಾನಿ ಮೋದಿ ಮನವಿ ಮಾಡಿದ್ದರು ಎಂದಿದ್ದ ಟ್ರಂಪ್

ವಾಷಿಂಗ್ಟನ್​: ಕಾಶ್ಮೀರ ವಿಚಾರವಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸುಳ್ಳು ಬಟಾ ಬಯಲಾಗಿದ್ದು, ಕಾಶ್ಮೀರ ವಿಚಾರವಾಗಿ ಮಧ್ಯಸ್ಥಿಕೆ ವಹಿಸುವಂತೆ ಭಾರತ ಮನವಿ ಮಾಡಿರಲಿಲ್ಲ ಎಂದು ಸ್ವತಃ ಅಮೆರಿಕ ಅಧಿಕಾರಿಗಳೇ ಸ್ಪಷ್ಟ ಪಡಿಸಿದ್ದಾರೆ.

ಈ ಕುರಿತಂತೆ ಅಮೆರಿಕ ಸರ್ಕಾರದ ಅಧಿಕಾರಿಯೊಬ್ಬರು ಸುದ್ದಿಸಂಸ್ಥೆಯೊಂದಕ್ಕೆ ಮಾಹಿತಿ ನೀಡಿದ್ದು, 'ಪಾಕಿಸ್ತಾನದೊಂದಿಗಿನ ಕಾಶ್ಮೀರ ವಿವಾದವನ್ನು ಇತ್ಯರ್ಥಪಡಿಸಲು ಮಧ್ಯಸ್ಥಿಕೆ ವಹಿಸುವಂತೆ ಅಮೆರಿಕವನ್ನು ಭಾರತ ಕೋರಿಕೊಂಡಿಲ್ಲ. ಬದಲಿಗೆ ಭಾರತ ಮತ್ತು ಪಾಕಿಸ್ತಾನದ ಪ್ರಧಾನಿಗಳಾದ ನರೇಂದ್ರ ಮೋದಿ ಮತ್ತು ಇಮ್ರಾನ್​ ಖಾನ್​ ನಡುವೆ ಉತ್ತಮ ಬಾಂಧವ್ಯ ಇರುವ ಕಾರಣ, ಆ ಎರಡು ರಾಷ್ಟ್ರಗಳು ಬಯಸಿದರೆ ಮಧ್ಯಸ್ಥಿಕೆ ವಹಿಸಲು ಸಿದ್ಧ ಎಂದು ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಸ್ವಯಂಪ್ರೇರಿತವಾಗಿ ಹೇಳಿಕೆ ನೀಡಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.

ಫ್ರಾನ್ಸ್​ ನಲ್ಲಿ ನಡೆಯುತ್ತಿರುವ ಜಿ7 ಶೃಂಗ ಸಭೆಯ ಸಂದರ್ಭದಲ್ಲೂ ಕಾಶ್ಮೀರ ವಿವಾದ ಇತ್ಯರ್ಥಕ್ಕೆ ಮಧ್ಯಸ್ಥಿಕೆ ವಹಿಸಲು ಅಮೆರಿಕ ಸಿದ್ಧವಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಹೇಳಿಕೆ ನೀಡಿರುವ ಹಿನ್ನೆಲೆಯಲ್ಲಿ ಅವರು ಈ ಸ್ಪಷ್ಟನೆ ನೀಡಿದ್ದಾರೆ.

ಜಿ7 ಶೃಂಗದ ಹಿನ್ನೆಲೆಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ. ಈ ಸಂದರ್ಭದಲ್ಲಿ ನಿಶ್ಚಿತವಾಗಿ ಕಾಶ್ಮೀರದ ವಿಷಯ ಪ್ರಸ್ತಾಪವಾಗುತ್ತದೆ. ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ಮತ್ತು ವಿಶೇಷ ಅಧಿಕಾರ ನೀಡುವ ಭಾರತೀಯ ಸಂವಿಧಾನದ 370 ಮತ್ತು 35ಎ ವಿಧಿಗಳನ್ನು ರದ್ದುಗೊಳಿಸುವುದು ಭಾರತದ ಆಂತರಿಕ ವಿಷಯ ಎಂಬುದು ನಿಜ. ಆದರೆ, ಈ ನಿರ್ಧಾರ ಪ್ರಾದೇಶಿಕವಾಗಿ ಭಾರಿ ಪರಿಣಾಮವನ್ನುಂಟು ಮಾಡುತ್ತದೆ. ಹಾಗಾಗಿ ಈ ಪ್ರದೇಶದಲ್ಲಿ ಮೂಡಿರುವ ಉದ್ವಿಗ್ನ ಪರಿಸ್ಥಿತಿಯನ್ನು ತಿಳಿಗೊಳಿಸುವ ನಿಟ್ಟಿನಲ್ಲಿ ಟ್ರಂಪ್​ ಅವರು ಮೋದಿ ಜತೆ ಚರ್ಚಿಸಲಿದ್ದಾರೆ ಎಂದು ಹೇಳಿದ್ದಾರೆ.

ಈ ಹಿಂದೆ ಕಾಶ್ಮೀರ ವಿಚಾರವಾಗಿ ಮೋದಿ ಅಧ್ಯಸ್ಥಿಕೆ ವಹಿಸುವಂತೆ ತಮ್ಮನ್ನು ಕೇಳಿದ್ದರು. ಹೀಗಾಗಿ ಮಧ್ಯಸ್ಥಿಕೆ ವಹಿಸಲು ನಾನು ಸಿದ್ಧ. ನನಗೆ ನೀಡುವ ಜವಾಬ್ದಾರಿಯನ್ನು ಉತ್ತಮವಾಗಿ ಮತ್ತು ಪರಿಣಾಮಕಾರಿಯಾಗಿ ನಿಭಾಸಬಲ್ಲೆ ಎಂದು ಟ್ರಂಪ್ ಹೇಳಿದ್ದರು. ಇನ್ನು ಟ್ರಂಪ್ ಹೇಳಿಕೆ ಭಾರತದಲ್ಲಿ ವ್ಯಾಪಕ ಚರ್ಚೆ ಹುಟ್ಟುಹಾಕಿತ್ತು. ಪ್ರತಿಪಕ್ಷ ಕಾಂಗ್ರೆಸ್ ಸೇರಿದಂತೆ ವಿವಿಧ ಪಕ್ಷಗಳು ಈ ಸಂಬಂಧ ಪ್ರಧಾನಿ ಮೋದಿ ಸಂಸತ್ ನಲ್ಲಿ ಸ್ಪಷ್ಟನೆ ನೀಡಬೇಕು ಎಂದು ಪಟ್ಟು ಹಿಡಿದಿದ್ದವು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com