ತೆರಿಗೆ ನಿಯಮದ ಮೂಲಕ ನಮ್ಮನ್ನು ಭಯಪಡಿಸಬೇಡಿ: ರಾಜನಾಥ್ ಸಿಂಗ್ ಗೆ ರಾಫೆಲ್ ಇಂಜಿನ್ ತಯಾರಕರ ಮನವಿ

ಭಾರತವು ಆಕರ್ಷಕ ವ್ಯಾಪಾರ ವಾತಾವರಣವನ್ನು ಒದಗಿಸಬೇಕು ತೆರಿಗೆ ಹಾಗೂ ಕಸ್ಟಮ್ಸ್ ನಿಯಮಾವಳಿಗಳಿಂದ ನಮ್ಮನ್ನು ಭೀತಿಗೊಳಿಸಬಾರದು ಎಂದು ರಾಫೆಲ್  ಫೈಟರ್ ಜೆಟ್‌ನ ಫ್ರೆಂಚ್ ಇಂಜಿನ್ ತಯಾರಕರ ಸಿಇಒ ಹೇಳಿದ್ದಾರೆ

Published: 09th October 2019 06:24 PM  |   Last Updated: 09th October 2019 06:24 PM   |  A+A-


ರಾಫೆಲ್ ಇಂಜಿನ್ ಪ್ರಾತ್ಯಕ್ಷಿಕೆ ವೀಕ್ಷಿಸುತ್ತಿರುವ ಸಚಿವ ರಾಜನಾಥ್ ಸಿಂಗ್

Posted By : Raghavendra Adiga
Source : The New Indian Express

ಪ್ಯಾರೀಸ್: ಭಾರತವು ಆಕರ್ಷಕ ವ್ಯಾಪಾರ ವಾತಾವರಣವನ್ನು ಒದಗಿಸಬೇಕು ತೆರಿಗೆ ಹಾಗೂ ಕಸ್ಟಮ್ಸ್ ನಿಯಮಾವಳಿಗಳಿಂದ ನಮ್ಮನ್ನು ಭೀತಿಗೊಳಿಸಬಾರದು ಎಂದು ರಾಫೆಲ್  ಫೈಟರ್ ಜೆಟ್‌ನ ಫ್ರೆಂಚ್ ಇಂಜಿನ್ ತಯಾರಕರ ಸಿಇಒ ಹೇಳಿದ್ದಾರೆ.ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರೊಡನೆ ಮಾತುಕತೆ ನಡೆಸಿದ ಅವರು ಸಿಂಗ್ ಅವರಿಗೆ ಈ ಬಗೆಗೆ ತಿಳಿಸಿದ್ದಾರೆ.ಇದೇ ವೇಳೆ ಕಂಪನಿಯು ಭಾರತದಲ್ಲಿ ಸುಮಾರು 150 ಮಿಲಿಯನ್ ಡಾಲರ್ ಹೂಡಿಕೆ ಮಾಡಲು ಯೋಜಿಸಿದೆ  ಎಂದು ಅವರು ಘೋಷಿಸಿದ್ದಾರೆ.

ಭಾರತ ಸ್ವೀಕರಿಸಿರುವ ರಾಫೆಲ್ ಜೆಟ್ ನಲ್ಲಿ ಅಳವಡಿಸಲಾಗಿರುವ  ಎಂ 88 ಸ್ಟೇಟ್ ಆಫ್ ದಿ ಆರ್ಟ್ ಇಂಜಿನ್ ಗಳ ತಯಾರಕ ಫ್ರೆಂಚ್ ಬಹುರಾಷ್ಟ್ರೀಯ ಸಂಸ್ಥೆ ಸಫ್ರಾನ್ ಘಟಕಕ್ಕೆ ರಾಜನಾಥ್ ಸಿಂಗ್ ತೆರಳಿದ್ದಾಗ ಅವರಿಗೆ ಅಲ್ಲಿನ ಸೌಲಭ್ಯಗಳ ಪರಿಚಯ ಮಾಡಿಕೊಡಲಾಗಿದೆ.

ಈ ಸಮಯದಲ್ಲಿ ಸಫ್ರಾನ್  ಏರ್‌ಕ್ರಾಫ್ಟ್ ಇಂಜಿನ್ ಗಳ ಸಿಇಒ ಆಲಿವಿಯರ್ ಆಂಡ್ರೀಸ್ ತರಬೇತಿ ಮತ್ತು ನಿರ್ವಹಣೆಗೆ ದೇಶದಲ್ಲಿ ಸುಮಾರು 150 ಮಿಲಿಯನ್ ಡಾಲರ್ ಹೂಡಿಕೆಯ ಯೋಜನೆ ಹೊಂದಿರುವುದಾಗಿ ಹೇಳಿದ್ದಾರೆ. ಅದೇ ವೇಳೆ ಅವರು ಭಾರತದಿಂದ ನಮಗೆ ತೆರಿಗೆ ವಿಚಾರವಾಗಿ ಹೆಚ್ಚಿನ ಬೆಂಬಲದ ಅಗತ್ಯವಿದೆ ಎಂದು ನುಡಿದರು.

"ಭಾರತವು ವಾಯುಯಾನದ ಕ್ಷೇತ್ರದಲ್ಲಿ ಜಗತ್ತಿನ ಮೂರನೇ ಅತಿದೊಡ್ಡ ಮಾರುಕಟ್ಟೆಯಾಗಲು ಸಿದ್ದವಾಗಿದೆ.ಅದಕ್ಕಾಗಿ ಗ್ರಾಹಕ ಸೇವೆಗಾಗಿ ನಾವು  ಭಾರತದಲ್ಲಿ ಉತ್ತಮ ನಿರ್ವಹಣೆ ಹಾಗೂ ದುರಸ್ತಿ ಕೇಂದ್ರವನ್ನು  ರಚಿಸಲು ಉತ್ಸುಕರಾಗಿದ್ದೇವೆ. ಅದಕ್ಕಾಗಿ ಭಾರತೀಯ ಸರ್ಕಾರ ತೆರಿಗೆ, ಕಸ್ಟಮ್ಸ್ ಸುಂಕದ ವಿಚಾರದಲ್ಲಿ ನಮ್ಮನ್ನು ಭೀತಿಗೊಳಿಸುವುದಿಲ್ಲ ಎಂಬುದನ್ನು ಖಚಿತಪಡಿಸಬೇಕು" ಎಂದು ಆಂಡ್ರೀಸ್ ಹೇಳಿದರು.

ಇದಕ್ಕೆ ಪ್ರತಿಕ್ರಯಿಸಿರುವ ಸಚಿವ ಸಿಂಗ್ "ಭಾರತವು  'ಮೇಕ್ ಇನ್ ಇಂಡಿಯಾ' ಉಪಕ್ರಮದಡಿಯಲ್ಲಿ ಹೂಡಿಕೆಗಳಿಗೆ  "ಉತ್ತಮ ವಾತಾವರಣ" ಒದಗಿಸಲು ಬದ್ದವಾಗಿದೆ ಎಂದಿದ್ದಾರೆ.

ಮುಂದಿನ ವರ್ಷ ಫೆಬ್ರವರಿಯಲ್ಲಿ ಲಖನೌದಲ್ಲಿ ನಡೆಯುವ  DefExpoದಲ್ಲಿ ಭಾಗವಹಿಸಲು ಸಿಂಗ್ ಅವರು ಸಫ್ರಾನ್‌ ಸಂಸ್ಥೆಗೆ ಆಹ್ವಾನ ನೀಡಿದ್ದಾರೆ. ಸಫ್ರಾನ್ ಸಂಸ್ಥೆ ಭಾರತಕ್ಕೆ ನೀಡಲಾಗುವ ಎಲ್ಲಾ 36 ರಾಫೆಲ್ ವಿಮಾನಗಳಿಗೆ ರಾಫೆಲ್ ಜೆಟ್ ಎಂ 88 ಎಂಜಿನ್ ಗಳನ್ನು ಜೋಡಿಸಲಿದೆ.

Stay up to date on all the latest ಅಂತಾರಾಷ್ಟ್ರೀಯ news with The Kannadaprabha App. Download now
facebook twitter whatsapp