
ವಾಷಿಂಗ್ ಟನ್: ದಿನದಿಂದ ದಿನಕ್ಕೆ ಸಾವಿನ, ಸೋಂಕಿನ ಪ್ರಕರಣಗಳು ಏರಿಕೆಯಾಗುತ್ತಿದೆ. ಕೊರೋನಾ ವೈರಸ್ ನಿಂದ ಚೇತರಿಸಿಕೊಳ್ಳಲು ಹೆಣಗುತ್ತಿರುವ ಅಮೆರಿಕ ಚೀನಾ ವಿರುದ್ಧ ಬುಸುಗುಡುತ್ತಿದೆ.
ಈ ನಡುವೆ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗೊತ್ತಿದ್ದೂ ಗೊತ್ತಿದ್ದೂ ಕೊರೋನಾ ವೈರಸ್ ಗೆ ಚೀನಾ ಜವಾಬ್ದಾರಿಯಾಗಿದ್ದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಕೊರೋನಾ ವೈರಸ್ ನ್ನು ನಿಭಾಯಿಸುತ್ತಿರುವ ವಿಷಯದಲ್ಲಿ ಚೀನಾ ವಿರುದ್ಧ ಅಸಮಾಧಾನ ಹೊರಹಾಕಿರುವ ಟ್ರಂಪ್, ಪಾರದರ್ಶಕತೆ, ಪ್ರಾರಂಭದ ಹಂತದಲ್ಲಿ ಅಸಹಕಾರದ ಆರೋಪ ಮಾಡಿದ್ದಾರೆ.
ಉದ್ದೇಶಪೂರ್ವಕವಾಗಿ ಚೀನಾ ಕೊರೋನಾ ವೈರಸ್ ಗೆ ಜವಾಬ್ದಾರಿಯಾಗಿದ್ದರೆ ಪರಿಣಾಮ ಎದುರಿಸಬೇಕು, 1917 ರಿಂದ ಈವರೆಗೂ ಯಾರೂ ಕಂಡುಕೇಳರಿಯದ ರೀತಿಯಲ್ಲಿ ಪರಿಸ್ಥಿತಿ ನಿರ್ಮಾಣವಾಗಿದೆ. ಕೋವಿಡ್-19 ವಿಶ್ವಾದ್ಯಂತ ಹರಡುವುದಕ್ಕೂ ಮುನ್ನ ಚೀನಾದ ಜೊತೆಗಿನ ಸಂಬಂಧ ಉತ್ತಮವಾಗಿಯೇ ಇತ್ತು, ಏಕಾಏಕಿ ಈ ರೀತಿಯಾಗಿ ಈಗ ಬಹಳಷ್ಟು ವ್ಯತ್ಯಾಸವಾಗಿದೆ ಎಂದು ಟ್ರಂಪ್ ಹೇಳಿದ್ದಾರೆ.
ಚೀನಾ ವಿರುದ್ಧ ಕೋಪಗೊಂಡಿದ್ದೀರೇ? ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿರುವ ಟ್ರಂಪ್, ಹೌದು ಆದರೆ ಪರಿಸ್ಥಿತಿಯನ್ನು ಅವಲಂಬಿಸುತ್ತದೆ ಎಂದು ಹೇಳಿದ್ದಾರೆ. ಅಚಾನಕ್ ಆಗಿ ಕೈಮೀರಿ ನಡೆಯುವುದಕ್ಕೂ, ಉದ್ದೇಶಪೂರ್ವಕವಾಗಿ ನಡೆಯುವುದಕ್ಕೂ ಬಹಳಷ್ಟು ವ್ಯತ್ಯಾಸವಿದೆ. ಎರಡೂ ಸಂದರ್ಭಗಳಲ್ಲಿ ನಮಗೆ ಚೀನಾದವರು ಒಳಗೆ ಪ್ರವೇಶಿಸಲು ಅನುಮತಿ ನೀಡಬೇಕಿತ್ತು. ಆದರೆ ಅವರಿಗೆ ಅದು ಬೇಕಿರಲಿಲ್ಲ ಎಂದು ಟ್ರಂಪ್ ಚೀನಾ ವಿರುದ್ಧ ಕಿಡಿ ಕಾರಿದ್ದಾರೆ.
ಇದೇ ವೇಳೆ ಚೀನಾ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ನಿಲುವು ತೆಗೆದುಕೊಳ್ಳುತ್ತಿದೆ ಎಂದೂ ಆರೋಪ ಮಾಡಿರುವ ಟ್ರಂಪ್, ಚೀನಾ ಮಾಜಿ ಅಮೆರಿಕ ಉಪಾಧ್ಯಕ್ಷ ಜೋಯ್ ಬಿಡೆನ್ (ಡೆಮಾಕ್ರೆಟಿಕ್ ಪಕ್ಷದಿಂದ ಸಂಭಾವ್ಯ ಅಭ್ಯರ್ಥಿ) ಅಧ್ಯಕ್ಷರಾಗಲಿ ಎಂದು ಬಯಸುತ್ತಿದೆ. ಜೋಯ್ ಬಿಡೆನ್ ಗೆದ್ದರೆ, ಅಮೆರಿಕಾ ಚೀನಾ ಕೈಲಿ ಇರಲಿದೆ. ತಮ್ಮ ಆಡಳಿತದ ಕಠಿಣ ವ್ಯಾಪಾರ-ನೀತಿಗಳಿಂದ ಚೀನಾದಿಂದ ಬಿಲಿಯನ್ ಡಾಲರ್ ಗಟ್ಟಲೆ ಲಾಭ ಆಗಿದೆ ಎಂದು ಟ್ರಂಪ್ ಹೇಳಿದ್ದಾರೆ.
Advertisement