ಪಾಕಿಸ್ತಾನದ ಸೇನಾ ಮುಖ್ಯಸ್ಥ ಕಾಮರ್ ಜಾವೇದ್ ಬಾಜ್ವಾ ಸೌದಿ ರಾಜನನ್ನು ಭೇಟಿ ಮಾಡಲು ಯತ್ನಿಸಿ ಮುಖಭಂಗ ಎದುರಿಸಿದ್ದಾರೆ.
ಕಾಶ್ಮೀರದ ವಿಚಾರವಾಗಿ ಸೌದಿ ಅರೇಬಿಯಾ ಭಾರತದ ವಿರುದ್ಧ ಕ್ರಮಕ್ಕೆ ನಿರಾಕರಿಸಿದಾಗ ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮೆಹ್ಮೂದ್ ಕುರೇಶಿ ಸೌದಿ ಅರೇಬಿಯಾಗೇ ಎಚ್ಚರಿಕೆ ನೀಡಿದ್ದರು. ಪರಿಣಾಮ ಪಾಕ್ ವಿರುದ್ಧ ಸೌದಿ ನಾಯಕತ್ವ ಕೆಂಡಾಮಂಡಲವಾಗಿದ್ದರ ಪರಿಣಾಮವಾಗಿ ದಶಕಗಳಷ್ಟು ಹಳೆಯ ಸೌದಿ-ಪಾಕಿಸ್ತಾನದ ಮಿತ್ರತ್ವದಲ್ಲಿ ಬಿರುಕು ಮೂಡಿತ್ತು.
ಈ ಹಿನ್ನೆಲೆಯಲ್ಲಿ ಮೈತ್ರಿಯನ್ನು ಸರಿಪಡಿಸುವುದಕ್ಕಾಗಿ ಪಾಕಿಸ್ತಾನದ ಸೇನಾ ಮುಖ್ಯಸ್ಥ ಹಾಗೂ ಗುಪ್ತಚರ ವಿಭಾಗದ ಮುಖ್ಯಸ್ಥರಾದ ಜ.ಫೈಜ್ ಹಮೀದ್ ಜೊತೆಗೆ ರಿಯಾಧ್ ಗೆ ಭೇಟಿ ನೀಡಿ ರಾಜ ಮೊಹಮ್ಮದ್ ಬಿನ್ ಸಲ್ಮಾನ್ ನ್ನು ಭೇಟಿ ಮಾಡಲು ಯತ್ನಿಸಿದರು. ಆದರೆ ಅದು ಸಾಧ್ಯವಾಗದ ಕಾರಣ ಅಲ್ಲಿನ, ರಕ್ಷಣಾ ಉಪ ಸಚಿವ, ರಕ್ಷಣಾ ಮುಖ್ಯಸ್ಥರನ್ನಷ್ಟೇ ಭೇಟಿ ಮಾಡಿ ಮಾತುಕತೆ ನಡೆಸುವುದಕ್ಕೆ ಅಷ್ಟೇ ಸಾಧ್ಯವಾಗಿದೆ.
ಆರ್ಟಿಕಲ್ 370 ರದ್ದತಿಯ ಕುರಿತಂತೆ ಆರ್ಗನೈಸೇಷನ್ ಆಫ್ ಇಸ್ಲಾಮಿಕ್ ಕೋ ಆಪರೇಷನ್ (ಒಐಸಿ) ಸಭೆಯನ್ನು ಆಯೋಜಿಸುವ ಪಾಕ್ ನ ಪ್ರಸ್ತಾವನೆಗೆ ಸೌದಿ ಬೆಂಬಲ ನೀಡದೇ ಇದ್ದದ್ದಕ್ಕೆ ಇತ್ತೀಚೆಗಷ್ಟೇ ಪಾಕ್ ವಿದೇಶಾಂಗ ಸಚಿವ ಟಿ.ವಿ ಚರ್ಚೆಯೊಂದರಲ್ಲಿ ಸೌದಿ ಅರೇಬಿಯಾಗೆ ಎಚ್ಚರಿಕೆ ನೀಡಿದ್ದರು.
ಪಾಕ್ ನ ಈ ನಡೆಗೆ ತೀವ್ರ ಆಕ್ರೋಶಗೊಂಡಿದ್ದ ಸೌದಿ ಅರೇಬಿಯಾ, ತಾನು ಪಾಕ್ ಗೆ ನೀಡಿದ್ದ 1 ಬಿಲಿಯನ್ ಡಾಲರ್ ಸಾಲವನ್ನು ವಾಪಸ್ ನೀಡುವಂತೆ ಒತ್ತಡ ಹಾಕುತ್ತಿದೆ, ಹಾಗೂ ಮತ್ತೊಂದು ಸಾಲದ ಮೊತ್ತವಾಗಿರುವ 1 ಬಿಲಿಯನ್ ಡಾಲರ್ ನ್ನು ಅವಧಿಗೂ ಮುನ್ನವೇ ವಾಪಸ್ ನೀಡುವಂತೆ ಕೇಳುತ್ತಿದೆ.
Advertisement