ಸೊಳ್ಳೆಗಳಿಂದಲೂ ಕೊರೋನಾ ವೈರಸ್ ಸೋಂಕು ಹರಡುತ್ತಿದೆಯೇ?; ತಜ್ಞರು ಹೇಳಿದ್ದೇನು?

ದೇಶದಲ್ಲಿ ಮಾರಕ ಕೊರೋನಾ ವೈರಸ್ ಗಣನೀಯ ಪ್ರಮಾಣವಾಗಿ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ವೈರಸ್ ಸೋಂಕು ಹೆಚ್ಚಳಕ್ಕೆ ಕಾರಣವೇನು ಎಂಬ ಪ್ರಶ್ನೆ ಹುಟ್ಟಿದ್ದು, ಸೊಳ್ಳೆಗಳಿಂದ ಸೋಂಕು ಹರಡುತ್ತಿದೆಯೇ ಎಂಬ ಅನುಮಾನ ಮೂಡತೊಡಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ದೇಶದಲ್ಲಿ ಮಾರಕ ಕೊರೋನಾ ವೈರಸ್ ಗಣನೀಯ ಪ್ರಮಾಣವಾಗಿ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ವೈರಸ್ ಸೋಂಕು ಹೆಚ್ಚಳಕ್ಕೆ ಕಾರಣವೇನು ಎಂಬ ಪ್ರಶ್ನೆ ಹುಟ್ಟಿದ್ದು, ಸೊಳ್ಳೆಗಳಿಂದ ಸೋಂಕು ಹರಡುತ್ತಿದೆಯೇ ಎಂಬ ಅನುಮಾನ ಮೂಡತೊಡಗಿದೆ.

ವೈರಸ್ ಸೋಂಕು ಹರಡುವಿಕೆಯಿಂದಾಗಿ ಜನರಿಗೆ ಹೊಸ ಹೊಸ ಅನುಮಾನಗಳು ಹುಟ್ಟುತ್ತಿದ್ದು,  ಈಗ ಸೊಳ್ಳೆಗಳ ಕಾಟ ಹೆಚ್ಚುತ್ತಿರುವುದರಿಂದ ಸೊಳ್ಳೆಯಿಂದ ಕೋವಿಡ್ ಸೋಂಕು ಹರಡುತ್ತಿದೆಯೇ ಎಂಬ ಅನುಮಾನ ಕೂಡ ಹುಟ್ಟಿಕೊಂಡಿದೆ. ಈ ಅನುಮಾನಕ್ಕೆ ತಜ್ಞರು ಉತ್ತರ ಕೊಟ್ಟಿದ್ದು, ವೈರಸ್ ಸೋಂಕಿನ ಕುರಿತು ಸಂಶೋಧನೆ ನಡೆಸುತ್ತಿರುವ ತಜ್ಞರು ಸೊಳ್ಳೆಗಳಿಂದ ಸೋಂಕು ಹರಡುವ ಸಾಧ್ಯತೆಯನ್ನು ತಳ್ಳಿಹಾಕಿದ್ದಾರೆ.

ಸೈಂಟಿಫಿಕ್ ರಿಪೋರ್ಟ್ಸ್ ಎಂಬ ಜರ್ನಲ್​ನಲ್ಲಿ ಈ ವರದಿ ಪ್ರಕಟವಾಗಿದ್ದು, ಸೊಳ್ಳೆಗಳಿಗೆ ಕೊರೋನಾ ಸೋಂಕು ತಗುಲಬಹುದಾ? ಆ ಮೂಲಕ ಮನುಷ್ಯರಿಗೂ ಸೋಂಕು ತಗುಲಬಹುದಾ ಎಂಬ ನಿಟ್ಟಿನಲ್ಲಿ ಈ ಸಂಶೋಧಕರು ವಿವಿಧ ಪ್ರಯೋಗಗಳನ್ನ ನಡೆಸಿ ಆ ವಿವರವನ್ನು ಈ ಜರ್ನಲ್​ನಲ್ಲಿ ಪ್ರಕಟಿಸಿದ್ದಾರೆ.

ವಿಶ್ವ ಆರೋಗ್ಯ ಸಂಸ್ಥೆ ಕೂಡ ಸೊಳ್ಳೆಗಳಿಂದ ವೈರಾಣು ಹರಡುವುದಿಲ್ಲ ಎಂದು ಹಿಂದೆಯೇ ಸ್ಪಷ್ಟಪಡಿಸಿತ್ತು. ಅದಾಗ್ಯೂ ಸಂಶೋಧನೆಯು ಈ ವಿಚಾರವನ್ನು ದೃಢಪಡಿಸುತ್ತದೆ. ಸೊಳ್ಳೆಗಳಿಂದ ಸೋಂಕು ಹರಡುವುದಿಲ್ಲ ಎಂದು ಅಮೆರಿಕದ ಕಾನ್ಸಾಸ್ ಸ್ಟೇಟ್ ಯೂನಿವರ್ಸಿಟಿಯ ಸಂಶೋಧಕ ಸ್ಟೀಫನ್ ಹಿಗ್ಸ್ ಹೇಳಿದ್ದಾರೆ. 

ಈ ಸಂಶೋಧನೆಗಾಗಿ ವೈರಾಣುವನ್ನು ಹರಡಬಲ್ಲ ಸೊಳ್ಳೆಗಳ ತಳಿಯನ್ನು ಸಂಶೋಧನೆಗೆ ಆಯ್ಕೆ ಮಾಡಿಕೊಳ್ಳಲಾಗಿತ್ತು. ಏಡಿಸ್ ಏಜಿಪ್ತಿ (Aedes Aegypti), ಏಡಿಸ್ ಆಲ್ಬೋಪಿಕ್ಟಸ್ (Aedes Albopictus) ಮತ್ತು ಕ್ಯುಲೆಕ್ಸ್ ಕ್ಯುಂಕೆಫ್ಯಾಸಿಯಾಟಸ್ (Culex Quinquefasciatus) ಸೊಳ್ಳೆಗಳ ಮೇಲೆ ಪ್ರಯೋಗ ನಡೆಯಿತು. ಈ ಮೂರು ತಳಿಯ ಸೊಳ್ಳೆಗಳು ಚೀನಾದಲ್ಲಿ ಸಾಮಾನ್ಯವಾಗಿ ಸಿಗುತ್ತವೆ ಎಂಬುದು ಇಲ್ಲಿ ಗಮನಾರ್ಹ. ಕೋವಿಡ್-19 ವೈರಾಣು ಈ ಮೂರು ಸೊಳ್ಳೆಗಳಿಗೆ ಸೋಂಕು ಉಂಟು ಮಾಡಲು ಅಸಮರ್ಥವಾಗಿರುವುದು ಸಂಶೋಧನೆಯಿಂದ ದೃಢಪಟ್ಟಿದೆ. ಸೊಳ್ಳೆಯ ದೇಹದೊಳಗೆ ಕೊರೋನಾ ವೈರಸ್ ಸಂತತಿ ಬೆಳೆಯಲು ಅಸಾಧ್ಯವಾಗಿದೆ. 

ಹೀಗಾಗಿ, ಸೊಳ್ಳೆಯ ಮೂಲಕ ಮನುಷ್ಯರಿಗೆ ಸೋಂಕು ತಗುಲುವ ಸಾಧ್ಯತೆ ಇಲ್ಲ ಎಂದು ಸಂಶೋಧಕರು ಸ್ಪಷ್ಟಪಡಿಸಿದ್ದಾರೆ. ಆ ಮೂಲಕ ಕೊರೋನಾ ವೈರಸ್ ಸೋಂಕು ಇರುವ ವ್ಯಕ್ತಿಯನ್ನ ಕಚ್ಚುವ ಸೊಳ್ಳೆಗೆ ಆ ಸೋಂಕು ಹರಡಿ ಆ ಮೂಲಕ ಬೇರೊಬ್ಬರಿಗೆ ಸೋಂಕು ತಗುಲಬಹುದು ಎಂಬ ಅನುಮಾನಗಳಿಗೆ ಸಂಶೋಧಕರು ತೆರೆ ಎಳೆದಿದ್ದಾರೆ.

ಕಾನ್ಸಾಸ್ ಸ್ಟೇಟ್ ಯೂನಿರ್ಸಿಟಿಯಲ್ಲಿ ಕೊರೋನಾ ವೈರಸ್ ಅಷ್ಟೇ ಅಲ್ಲ ಇತರ ಹಲವು ಅಪಾಯಕಾರಿ ಸೂಕ್ಷ್ಮಜೀವಿಗಳ ಬಗ್ಗೆ ಅಧ್ಯಯನ ನಡೆಯುತ್ತಿದೆ. ಪ್ರಾಣಿಗಳಿಂದ ಬ್ಯಾಕ್ಟೀರಿಯಾ ಅಥವಾ ವೈರಸ್​ಗಳು ಸೋಂಕು ಹರಡಬಹುದಾದ ಸಾಧ್ಯತೆಗಳ ಬಗ್ಗೆ ಮಾಹಿತಿ ಕಲೆಹಾಕಲಾಗುತ್ತಿದೆ. ಆಫ್ರಿಕನ್ ಹಂದಿ ಜ್ವರ, ಜಪಾನೀಸ್ ಎನ್ಸೆಫಲಿಟಿಸ್, ರಿಫ್ಟ್ ವ್ಯಾಲಿ ಫಿವರ್, ಕ್ಲಾಸಿಕಲ್ ಸ್ವೈನ್ ಫ್ಲೂ ಇತ್ಯಾದಿ ಸೋಂಕಿಗೆ ಕಾರಣವಾಗುವ ಸೂಕ್ಷ್ಮಜೀವಿಗಳ ಅಧ್ಯಯನವಾಗುತ್ತಿದೆ ಎಂದು ಯೂನಿವರ್ಸಿಟಿಯ ಸಂಶೋಧಕರು ತಿಳಿಸಿದ್ಧಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com