
ನವದೆಹಲಿ: ಟರ್ಕಿಯ ಕರಾವಳಿ ಮತ್ತು ಗ್ರೀಕ್‌ನ ಸಾಮೋಸ್ ದ್ವೀಪಗಳ ನಡುವಿನ ಏಜಿಯನ್ ಸಮುದ್ರದ ನಡುವೆ ಶುಕ್ರವಾರ ಸಂಭವಿಸಿದ ಭಾರಿ ಭೂಕಂಪದಿಂದ ಮೃತಪಟ್ಟವರ ಸಂಖ್ಯೆ 26ಕ್ಕೆ ಏರಿಕೆಯಾಗಿದೆ. ಅಂತೆಯೇ ಗ್ರೀಸ್ ನಲ್ಲಿ ಸುನಾಮಿ ಪರಿಸ್ಥಿತಿ ನಿರ್ಮಾಣವಾಗಿದ್ದು, ಹಲವೆಡೆ ಪ್ರವಾಹ ಉಂಟಾಗಿದೆ.
ರಿಕ್ಟರ್ ಮಾಪನದಲ್ಲಿ 7.0ರಷ್ಟು ಭಾರಿ ತೀವ್ರತೆ ದಾಖಲಾಗಿದ್ದು, ಇಜ್ಮಿರ್‌ನ ದಕ್ಷಿಣ ಭಾಗದಲ್ಲಿರುವ ಸೆಫೆರಿಹಿಸರ್ ಜಿಲ್ಲೆಯಲ್ಲಿ ಸಣ್ಣ ಪ್ರಮಾಣದ ಸುನಾಮಿ ಅನುಭವ ಆಗಿದೆ. ಏಜಿಯನ್ ಸಮುದ್ರ ದ್ವೀಪದ ಸಮೋಸ್‌ನಲ್ಲಿರುವ ಗ್ರೀಕ್ ಪಟ್ಟಣವಾದ ನಿಯಾನ್ ಕಾರ್ಲೋವೇಶನ್‌ನಿಂದ 14 ಕಿ.ಮೀ. ದೂರದಲ್ಲಿ ಭೂಕಂಪನ ಸಂಭವಿಸಿದೆ ಎಂದು USGS ಮಾಹಿತಿ ನೀಡಿದೆ. ಭೂಕಂಪದ ಕೇಂದ್ರಬಿಂದು ಗ್ರೀಸ್‌ನ ಅಥೆನ್ಸ್‌ನ ಪೂರ್ವಕ್ಕೆ 258 ಕಿ.ಮೀ ದೂರದಲ್ಲಿದೆ ಎಂದು ಸಂಸ್ಥೆ ತಿಳಿಸಿದೆ. ಅಲ್ಲದೇ ಭೂಗರ್ಭದ 52 ಕಿ.ಮೀ ಆಳದಲ್ಲಿ ಭೂಕಂಪ ಸಂಭವಿಸಿದೆ ಎನ್ನಲಾಗಿದೆ.
ಏಕಾಏಕಿ ಏರಿಕೆಯಾದ ಸಮುದ್ರದ ನೀರಿನಲ್ಲಿ ಅನೇಕ ಮನೆಗಳು ಕಟ್ಟಡಗಳು ಜಲಾವೃತವಾಗಿವೆ. ದ್ವೀಪದಲ್ಲಿನ ಅನೇಕ ವಸ್ತುಗಳು ಸಮುದ್ರ ಪಾಲಾಗಿದೆ. ಇನ್ನು ಇಜ್ಮಿರ್‌ನಲ್ಲಿ ಅನೇಕ ಮನೆಗಳು ಕುಸಿದಿದ್ದು, ಅವಶೇಷಗಳ ಅಡಿ ಸಿಲುಕಿರುವವರನ್ನು ರಕ್ಷಿಸುವ ಕಾರ್ಯಾಚರಣೆ ಭರದಿಂದ ಸಾಗಿದೆ. ಭೂಕಂಪವಾಗುತ್ತಿದ್ದಂತೆಯೇ ಸುನಾಮಿ ಸಂಭವಿಸುವ ಭೀತಿಯಿಂದ ಜನರು ಬೀದಿ ಬೀದಿಗಳಲ್ಲಿ ದಿಕ್ಕಾಪಾಲಾಗಿ ಓಡಿದ್ದಾರೆ.
ಭೂಕಂಪನದ ಬೆನ್ನಲ್ಲೇ ಅನೇಕ ಭಾಗಗಳಲ್ಲಿ ಸಮುದ್ರ ರೌದ್ರಾವತಾರ ತಾಳಿದ್ದು, ಪ್ರವಾಹ ಪರಿಸ್ಥಿತಿ ಉಂಟಾಗಿದೆ. ನಗರಗಳ ಒಳಗೆ ನೀರು ನುಗ್ಗಿದ ಪರಿಣಾಮ ವಸ್ತುಗಳು ಸಮುದ್ರಪಾಲಾಗಿವೆ. ಮರದಿಂದ ಮಾಡಿರುವ ಮನೆಗಳು ಕುಸಿದುಬಿದ್ದಿವೆ. ಪರಿಸ್ಥಿತಿ ಇನ್ನಷ್ಟು ವಿಕೋಪಕ್ಕೆ ಹೋಗುವ ಅಪಾಯವಿದೆ ಎಂದು ಎಚ್ಚರಿಕೆ ನೀಡಲಾಗಿದೆ. 1999ರಲ್ಲಿ 7.6 ತೀವ್ರತೆಯ ಭೂಕಂಪನ ಉಂಟಾಗಿ ಇಜ್ಮಿತ್ ಎಂಬ ಸಣ್ಣ ನಗರದಲ್ಲಿ 17,000ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದರು. 2011ರಲ್ಲಿ ಪೂರ್ವ ನಗರ ವ್ಯಾನ್‌ನಲ್ಲಿ ಸಂಭವಿಸಿದ್ದ ಭೂಕಂಪನದಲ್ಲಿ 500ಕ್ಕೂ ಹೆಚ್ಚು ಮಂದಿ ಜೀವ ಕಳೆದುಕೊಂಡಿದ್ದರು.
ಪ್ರಧಾನಿ ಸಂತಾಪ
ಆಧ್ಯಾತ್ಮಿಕ ಗುರು ರಾಮರಾವ್ ಬಾಪು ಮಹಾರಾಜ್ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಶನಿವಾರ ಸಂತಾಪ ಸೂಚಿಸಿದ್ದಾರೆ. ''ಶ್ರೀ ರಾಮರಾವ್ ಬಾಪು ಮಹಾರಾಜ್ ಜಿ ಅವರು ಸಮಾಜಕ್ಕೆ ಮಾಡಿದ ಸೇವೆ ಮತ್ತು ಸಮೃದ್ಧ ಆಧ್ಯಾತ್ಮಿಕ ಜ್ಞಾನಕ್ಕಾಗಿ ಅವರನ್ನು ಸ್ಮರಿಸಲಾಗುವುದು. ಬಡತನ ಮತ್ತು ಮಾನವ ಸಂಕಟಗಳನ್ನು ನಿವಾರಿಸಲು ಅವರು ದಣಿವರಿಯಿಲ್ಲದೆ ಶ್ರಮಿಸಿದರು. ಕೆಲವು ತಿಂಗಳ ಹಿಂದೆ ಅವರನ್ನು ಭೇಟಿಯಾದ ಗೌರವ ನನಗೆ ಸಿಕ್ಕಿತು. ಈ ದುಃಖದ ಸಮಯದಲ್ಲಿ, ನನ್ನ ಆಲೋಚನೆಗಳು ಅವರ ಭಕ್ತರೊಂದಿಗೆ ಇವೆ. ಓಂ ಶಾಂತಿ.” ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.
Advertisement