ಕೊರೋನಾ ಕರಿ ಛಾಯೆ: ಜಾಗತಿಕ ಮಟ್ಟದಲ್ಲಿ 'ಕಾಂಡೋಮ್' ಪೂರೈಕೆಯಲ್ಲಿ ವ್ಯತ್ಯಯದ ಆತಂಕ!

ಕೊರೋನಾ ಸೋಂಕಿನಿಂದ ಕೈಗಾರಿಕೆಗಳು ಬಂದ್ ಆಗಿ ಪೂರೈಕೆಯಲ್ಲಿ ವ್ಯತ್ಯಯವಾಗಿರುವುದರಿಂದ ಜಾಗತಿಕ ಮಟ್ಟದಲ್ಲಿ ಕಾಂಡೋಮ್ ಗಳ ಕೊರತೆಯುಂಟಾಗಿದೆ, ಮುಂದಿನ ದಿನಗಳಲ್ಲಿ ಇದರಿಂದ ಹಲವು ಸಮಸ್ಯೆಗಳು ಎದುರಾಗಬಹುದು ಎಂದು ವಿಶ್ವಸಂಸ್ಥೆ ಎಚ್ಚರಿಕೆ ನೀಡಿದೆ.
ಕೊರೋನಾ ಕರಿ ಛಾಯೆ: ಜಾಗತಿಕ ಮಟ್ಟದಲ್ಲಿ 'ಕಾಂಡೋಮ್' ಪೂರೈಕೆಯಲ್ಲಿ ವ್ಯತ್ಯಯದ ಆತಂಕ!

ಕೌಲಾಲಂಪುರ್: ಕೊರೋನಾ ಸೋಂಕಿನಿಂದ ಕೈಗಾರಿಕೆಗಳು ಬಂದ್ ಆಗಿ ಪೂರೈಕೆಯಲ್ಲಿ ವ್ಯತ್ಯಯವಾಗಿರುವುದರಿಂದ ಜಾಗತಿಕ ಮಟ್ಟದಲ್ಲಿ ಕಾಂಡೋಮ್ ಗಳ ಕೊರತೆಯುಂಟಾಗಿದೆ, ಮುಂದಿನ ದಿನಗಳಲ್ಲಿ ಇದರಿಂದ ಹಲವು ಸಮಸ್ಯೆಗಳು ಎದುರಾಗಬಹುದು ಎಂದು ವಿಶ್ವಸಂಸ್ಥೆ ಎಚ್ಚರಿಕೆ ನೀಡಿದೆ.

ಮಾರಕ ಕೊರೋನಾ ವೈರಸ್ ನಿಂದಾಗಿ ವಿಶ್ವದಲ್ಲಿ ಅರ್ಧದಷ್ಟು ಜನ ಮನೆಯೊಳಗೆ ನಿರ್ಬಂಧಿಗಳಾಗಿದ್ದು ಇನ್ನು ಬಹುತೇಕ ದೇಶಗಳು ವ್ಯಾಪಾರ ಚಟುವಟಿಕೆ, ವಹಿವಾಟುಗಳನ್ನು ಹಲವು ದಿನಗಳಿಂದ ಸ್ಥಗಿತಗೊಳಿಸಿವೆ. ಕೈಗಾರಿಕೆಗಳು ಸಹ ಉತ್ಪಾದನೆಯನ್ನು ನಿಲ್ಲಿಸಿವೆ.

ವಿಶ್ವದ ಅತಿದೊಡ್ಡ ರಬ್ಬರ್ ತಯಾರಿಕಾ ದೇಶವಾದ ಮತ್ತು ಕಾಂಡೋಮ್ ಗಳನ್ನು ತಯಾರಿಸುವ ಪ್ರಮುಖ ದೇಶವಾದ ಮಲೇಷಿಯಾ ಕಳೆದ ತಿಂಗಳು ದೇಶಾದ್ಯಂತ ಲಾಕ್ ಡೌನ್ ಘೋಷಿಸಿತ್ತು. ಇಲ್ಲಿ ಉತ್ಪಾದನೆ ಬಂದ್ ಆಗಿರುವುದರಿಂದ ಬೇರೆ ದೇಶಗಳಿಗೆ ಕಾಂಡೋಮ್ ಗಳ ಪೂರೈಕೆಯಲ್ಲಿ ವ್ಯತ್ಯಯವುಂಟಾಗಿದೆ. ಇದರಿಂದ ಮುಂದಿನ ದಿನಗಳಲ್ಲಿ ಕಾಂಡೋಮ್ ಗಳ ಪೂರೈಕೆಯಲ್ಲಿ ಖಂಡಿತವಾಗಿಯೂ ಕೊರತೆಯುಂಟಾಗಲಿದೆ ಎಂದು ಮಲೇಷ್ಯಾದ ಪ್ರಮುಖ ಕಾಂಡೋಮ್ ತಯಾರಿಕಾ ಕಂಪೆನಿ ಕಾರೆಕ್ಸ್ ಮುಖ್ಯಸ್ಥ ಗೊಹ್ ಮಿಯಾ ಕಿಯಟ್ ತಿಳಿಸಿದ್ದಾರೆ.

ಇದೇ ಸಂದರ್ಭದಲ್ಲಿ ವಿಶ್ವಸಂಸ್ಥೆಯ ಲೈಂಗಿಕ ಮತ್ತು ಸಂತಾನೋತ್ಪತ್ತಿ ಸಂಸ್ಥೆ ಪ್ರಸ್ತುತ ಜಗತ್ತಿನಲ್ಲಿ ಶೇಕಡಾ 50ರಿಂದ 60ರಷ್ಟು ಕಾಂಡೋಮ್ ಗಳು ಪೂರೈಕೆಯಾಗುತ್ತಿವೆಯಷ್ಟೆ ಎಂದು ಹೇಳಿದೆ. ಗಡಿ ಬಂದ್ ಮಾಡಿರುವಿಕೆ ಮತ್ತು ಇತರ ನಿರ್ಬಂಧ ಕ್ರಮಗಳು ಸಾಗಣೆ ಮತ್ತು ಉತ್ಪಾದನೆ ಮೇಲೆ ಗಂಭೀರ ಪರಿಣಾಮ ಬೀರಿದೆ. ಜನರ ತುರ್ತು ಅಗತ್ಯಗಳನ್ನು ಪೂರೈಸಲು ಹೆಚ್ಚುವರಿ ಪೂರೈಕೆದಾರರನ್ನು ಸೇರಿಸಿಕೊಳ್ಳಲಾಗುವುದು ಎಂದು ವಿಶ್ವಸಂಸ್ಥೆ ಜನಸಂಖ್ಯಾ ನಿಧಿ ವಕ್ತಾರರು ತಿಳಿಸಿದ್ದಾರೆ.

ಜನಸಂಖ್ಯಾ ನಿಯಂತ್ರಣ, ಜನಸಂಖ್ಯಾ ಯೋಜನೆಗೆ ಬೆಂಬಲ ನೀಡಲು ಸರ್ಕಾರಗಳ ಜೊತೆ ಕೆಲಸ ಮಾಡುವ ವಿಶ್ವಸಂಸ್ಥೆ ಹಡಗಿನ ಮೂಲಕ ತುರ್ತು ಅಗತ್ಯವಿರುವ ದೇಶಗಳಿಗೆ ಪೂರೈಸಬೇಕಷ್ಟೆ ಎಂದಿದೆ.

ಕಾಂಡೋಮ್ ಗಳ ಕೊರತೆಯಿಂದ ಅನಪೇಕ್ಷಿತ ಗರ್ಭಧಾರಣೆಯ ಹೆಚ್ಚಳಕ್ಕೆ ಕಾರಣವಾಗಬಹುದು, ಹದಿಹರೆಯದ ಹುಡುಗಿಯರು, ಮಹಿಳೆಯರು, ಅವರ ಪತಿ ಮತ್ತು ಕುಟುಂಬಗಳ ಮೇಲೆ ಆರೋಗ್ಯ ಮತ್ತು ಸಾಮಾಜಿಕ ಪರಿಣಾಮಗಳನ್ನು ಉಂಟುಮಾಡಬಹುದು. ಅಸುರಕ್ಷಿತ ಗರ್ಭಧಾರಣೆ ಮತ್ತು ಗರ್ಭಪಾತದಿಂದ ಲೈಂಗಿಕವಾಗಿ ಹರಡುವ ಸೋಂಕುಗಳು ಮತ್ತು ಹೆಚ್ ಐವಿ ಹೆಚ್ಚಾಗುವ ಅಪಾಯ ಕೂಡ ಇದೆ ಎಂದು ವಿಶ್ವಸಂಸ್ಥೆ ಆತಂಕ ವ್ಯಕ್ತಪಡಿಸಿದೆ.

ಕಾಂಡೋಮ್ ಗಳಿಗೆ ಹೆಚ್ಚಿದೆ ಬೇಡಿಕೆ: ಲಾಕ್ ಡೌನ್ ನಂತರ ಜನರು ಮನೆಯಲ್ಲಿಯೇ ಇರುವುದರಿಂದ ಕಾಂಡೋಮ್ ಗಳಿಗೆ ಬೇಡಿಕೆ ಹೆಚ್ಚಾಗಿದೆ ಎಂದು ಕಾರೆಕ್ಸ್ ಸಂಸ್ಥೆಯ ಗೊಹ್ ಅವರೇ ಹೇಳುತ್ತಾರೆ. ಕಳೆದ ತಿಂಗಳು ಭಾರತದಲ್ಲಿ ಲಾಕ್ ಡೌನ್ ಘೋಷಣೆಯಾದ ನಂತರ ಭಾರತದಲ್ಲಿ ಕಾಂಡೋಮ್ ಗಳ ಮಾರಾಟದಲ್ಲಿ ಶೇಕಡಾ 25ರಿಂದ 35ರಷ್ಟು ಹೆಚ್ಚಳವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com