ಪಾಕಿಸ್ತಾನ ಶಾಂತಿ, ಸಾಮರಸ್ಯ ಬಯಸುತ್ತಿದೆ ಎನ್ನಲು ಕರ್ತಾರ್ ಪುರ್ ಕಾರಿಡಾರ್ ಸ್ಪಷ್ಟ ನಿದರ್ಶನ: ವಿಶ್ವಸಂಸ್ಥೆ 

ಕರ್ತಾರ್ ಪುರ್ ಸಾಹಿಬ್ ಕಾರಿಡಾರ್ ನ್ನು ಸಂಚಾರಕ್ಕೆ ಮುಕ್ತಗೊಳಿಸಿದ್ದು ಪಾಕಿಸ್ತಾನ ಶಾಂತಿ ಮತ್ತು ಅಂತರ ಧರ್ಮೀಯ ಸಾಮರಸ್ಯವನ್ನು ಬಯಸುತ್ತಿದೆ ಎಂದು ತೋರಿಸುವ ಉತ್ತಮ ಉದಾಹರಣೆ ಎಂದು ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಶ್ಲಾಘಿಸಿದ್ದಾರೆ.
ಪಾಕಿಸ್ತಾನದ ಕರ್ತಾರ್ ಪುರ್ ನಲ್ಲಿ ಗುರುದ್ವಾರ ಮುಂದೆ ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ
ಪಾಕಿಸ್ತಾನದ ಕರ್ತಾರ್ ಪುರ್ ನಲ್ಲಿ ಗುರುದ್ವಾರ ಮುಂದೆ ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ

ಲಾಹೋರ್:ಕರ್ತಾರ್ ಪುರ್ ಸಾಹಿಬ್ ಕಾರಿಡಾರ್ ನ್ನು ಸಂಚಾರಕ್ಕೆ ಮುಕ್ತಗೊಳಿಸಿದ್ದು ಪಾಕಿಸ್ತಾನ ಶಾಂತಿ ಮತ್ತು ಅಂತರ ಧರ್ಮೀಯ ಸಾಮರಸ್ಯವನ್ನು ಬಯಸುತ್ತಿದೆ ಎಂದು ತೋರಿಸುವ ಉತ್ತಮ ಉದಾಹರಣೆ ಎಂದು ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಶ್ಲಾಘಿಸಿದ್ದಾರೆ. 


ಸಿಖ್ ಧರ್ಮೀಯರ ಸ್ಥಾಪಕ ಗುರು ನಾನಕ್ ದೇವ್ ಅವರ ಸಮಾಧಿ ಸ್ಥಳವಾದ ಗುರುದ್ವಾರ ದರ್ಬಾರ್ ಸಾಹಿಬ್ ಗೆ ನಿನ್ನೆ ಭೇಟಿ ನೀಡಿದ ಅವರು ಅಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ಕರ್ತಾರ್ ಪುರ್ ಕಾರಿಡಾರ್ ಒಪ್ಪಂದದ ಬಗ್ಗೆ ತಿಳಿದುಕೊಂಡರು. ಭಾರತದಲ್ಲಿರುವ ಸಿಖ್ ಧರ್ಮೀಯರ ಅನುಕೂಲಕ್ಕಾಗಿ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರೇ ಆಸಕ್ತಿ ವಹಿಸಿ ಈ ಕರ್ತಾರ್ ಪುರ್ ಕಾರಿಡಾರ್ ಒಪ್ಪಂದ ಮಾಡಿಸಿಕೊಂಡರು ಎಂದು ಅಲ್ಲಿದ್ದ ಪಾಕಿಸ್ತಾನ ಸಿಖ್ ಗುರುದ್ವಾರ ಪ್ರಬಂದಿಕ್ ಸಮಿತಿ ಮತ್ತು ಎವಾಕ್ಯು ಟ್ರಸ್ಟ್ ಪ್ರಾಪರ್ಟಿ ಮಂಡಳಿ ಅಧಿಕಾರಿಗಳು ವಿಶ್ವಸಂಸ್ಥೆ ಮುಖ್ಯಸ್ಥರಿಗೆ ತಿಳಿಸಿದರು.


ತಲೆಗೆ ಕೇಸರಿ ಬಣ್ಣದ ಶಾಲು ಧರಿಸಿ ಗುಟೆರೆಸ್ ಅವರು ಗುರುದ್ವಾರದ ವಿವಿಧ ಸ್ಥಳಗಳಿಗೆ ಭೇಟಿ ಕೊಟ್ಟರು. ಅಲ್ಲಿ ಬಂದಿದ್ದ ಸಿಖ್ ಧರ್ಮೀಯರು ಮತ್ತು ಪಾಕಿಸ್ತಾನ ಅಧಿಕಾರಿಗಳೊಂದಿಗೆ ಅವರು ಸಾಂಪ್ರದಾಯಿಕ ಆಹಾರಗಳನ್ನು ಸವಿದರು. ವಿಶ್ವಸಂಸ್ಥೆ ಮುಖ್ಯಸ್ಥರ ಭೇಟಿ ವೇಳೆ ತೀವ್ರ ಭದ್ರತೆ ಕಲ್ಪಿಸಲಾಗಿತ್ತು. ಈ ಸಂದರ್ಭದಲ್ಲಿ ಭಾರತದ ಸಿಖ್ ಧರ್ಮೀಯರು ಕೂಡ ಅಪಾರ ಸಂಖ್ಯೆಯಲ್ಲಿದ್ದರು. 


ಭೇಟಿ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಗುಟೆರೆಸ್, ಇದೊಂದು ಭಾವನಾತ್ಮಕ ಭೇಟಿಯಾಗಿದೆ. ಇಲ್ಲಿಗೆ ಬಲವಾದ ಕಾರಣವಿಲ್ಲದೆ ನಾನು ಬಂದಿಲ್ಲ. ಪಾಕಿಸ್ತಾನ ಶಾಂತಿ, ಅಂತರ ಧರ್ಮೀಯ ಸಾಮರಸ್ಯವನ್ನು ಬಯಸುತ್ತಿದೆ ಎಂಬುದಕ್ಕೆ ಕರ್ತಾರ್ ಪುರ್ ಕಾರಿಡಾರ್ ಒಪ್ಪಂದ ಒಂದು ಉತ್ತಮ ಉದಾಹರಣೆ. ಹಿಂದೂ, ಮುಸ್ಲಿಂ, ಕ್ರೈಸ್ತ, ಸಿಖ್ಖರು ಸಾಮರಸ್ಯದಿಂದ ಶಾಂತಿಯುತವಾಗಿ ಇದ್ದರೆ ಅದಕ್ಕಿಂತ ಖುಷಿಯ ವಿಚಾರ ಮತ್ತೊಂದಿಲ್ಲ ಎಂದರು.

ಸಿಖ್ ಧರ್ಮೀಯರ ಸ್ಥಾಪಕ ಗುರು ನಾನಕ್ ದೇವ್ ಅವರ 550ನೇ ಜಯಂತಿ ಅಂಗವಾಗಿ ಕಳೆದ ವರ್ಷ ನವೆಂಬರ್ 9ರಂದು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಕರ್ತಾರ್ ಪುರ್ ಕಾರಿಡಾರ್ ನ್ನು ಉದ್ಘಾಟಿಸಿದ್ದರು. ಈ ಸಂದರ್ಭದಲ್ಲಿ ಅದೇ ದಿನ ಭಾರತದ ಕಡೆಯಿಂದ ಪ್ರಧಾನಿ ನರೇಂದ್ರ ಮೋದಿಯವರು ಭಾರತದ 500 ಯಾತ್ರಿಕರ ಮೊದಲ ತಂಡಕ್ಕೆ ಹಸಿರು ನಿಶಾನೆ ತೋರಿಸಿ ಕಳುಹಿಸಿಕೊಟ್ಟಿದ್ದರು. ಅದರಲ್ಲಿ ಮಾಜಿ ಪ್ರಧಾನಿ ಡಾ ಮನಮೋಹನ್ ಸಿಂಗ್ ಮತ್ತು ಕೇಂದ್ರ ಸಚಿವೆ ಹರ್ಸಿಮ್ರತ್ ಕೌರ್ ಬಾದಲ್ ಕೂಡ ಇದ್ದರು.

ಕರ್ತಾರ್ ಪುರ್ ಕಾರಿಡಾರ್ ಇರುವುದು ಪಾಕಿಸ್ತಾನದ ಲಾಹೋರ್ ನಿಂದ ಸುಮಾರು 125 ಕಿಲೋ ಮೀಟರ್ ದೂರದಲ್ಲಿ. ರವಿ ನದಿಗೆ ಅಡ್ಡಲಾಗಿ ದೆರಾ ಬಾಬಾ ನಾನಕ್ ದೇಗುಲದಿಂದ ನಾಲ್ಕು ಕಿಲೋ ಮೀಟರ್ ದೂರದಲ್ಲಿ ಕಾರಿಡಾರ್ ನಿರ್ಮಿಸಲಾಗಿದೆ.

ಏನಿದು ಕರ್ತಾರ್ ಪುರ್ ಕಾರಿಡಾರ್ ಒಪ್ಪಂದ: 
ಈ ಕರ್ತಾರ್ ಪುರ್ ಕಾರಿಡಾರ್ ಭಾರತದ ಗುರ್ದಾಸ್ಪುರ್ ದಲ್ಲಿರುವ ದೆರಾ ಬಾಬಾ ನಾನಕ್ ದೇಗುಲವನ್ನು ಪಾಕಿಸ್ತಾನದ ದರ್ಬಾರ್ ಸಾಹಿಬ್ ದೇಗುಲ ಜೊತೆ ಸಂಪರ್ಕಿಸುತ್ತದೆ. ಇದರಿಂದ ಎರಡೂ ದೇಶಗಳಲ್ಲಿರುವ ಸಿಖ್ ಧರ್ಮೀಯರಿಗೆ ಹೋಗಿ ಬರಲು ಈ ಕಾರಿಡಾರ್ ನಿಂದ ಅನುಕೂಲವಾಗಿದೆ.

ಭಾರತೀಯ ಯಾತ್ರಿಕರಿಗೆ ವೀಸಾ ಮುಕ್ತ ಪ್ರಯಾಣಕ್ಕೆ ಅವಕಾಶವಿದೆ. ಭಾರತದ ಯಾತ್ರಿಕರು ಪಾಕಿಸ್ತಾನದ ಗಡಿ ಪ್ರವೇಶಿಸಲು ಅನುಮತಿ ಪಡೆದುಕೊಂಡರೆ ಸಾಕು.

ಈ ಒಪ್ಪಂದಕ್ಕೆ ಭಾರತೀಯ ಗೃಹ ಸಚಿವಾಲಯದ ಆಂತರಿಕ ಭದ್ರತಾ ಜಂಟಿ ಕಾರ್ಯದರ್ಶಿ ಎಸ್.ಸಿ.ಎಲ್ ದಾಸ್ ಮತ್ತು ಪಾಕಿಸ್ತಾನ ವಿದೇಶಾಂಗ ಕಚೇರಿಯಲ್ಲಿ ದಕ್ಷಿಣ ಏಷ್ಯಾದ ಮಹಾ ನಿರ್ದೇಶಕ ಮಹಮ್ಮದ್ ಫೈಸಲ್ ಸಹಿ ಹಾಕಿದ್ದರು. ಗಡಿಯಲ್ಲಿರುವ ಶೂನ್ಯ ರೇಖೆಯ ಒಪ್ಪಂದ ಮಾಡಿಕೊಳ್ಳಲಾಯಿತು. ಅದರಂತೆ ಭಾರತೀಯರು ಮತ್ತು ಭಾರತೀಯ ಮೂಲದವರು ಗುರುದ್ವಾರಕ್ಕೆ ಭೇಟಿ ನೀಡಲು ಈ ಕಾರಿಡಾರ್ ನ್ನು ಬಳಸಿಕೊಳ್ಳಬಹುದು. 

ಪಾಕಿಸ್ತಾನದಲ್ಲಿರುವ ಗುರುದ್ವಾರಕ್ಕೆ ಹೋಗುವವರು ತಮ್ಮ ಪಾಸ್ ಪೋರ್ಟ್ ಮತ್ತು ಎಲೆಕ್ಟ್ರಾನಿಕ್ ಪ್ರಯಾಣ ಅಧಿಕೃತ ಚೀಟಿಯನ್ನು ಕೊಂಡೊಯ್ಯಬೇಕು, ಇದು ಯಾತ್ರೆಯ ದಾಖಲಾತಿ ಸಮಯದಲ್ಲಿ ಸಿಕ್ಕಿರುತ್ತದೆ. ಭಾರತೀಯ ಮೂಲದ ಮತ್ತೊಂದು ದೇಶದ ಪಾಸ್ ಪೋರ್ಟ್ ಹೊಂದಿರುವವರು ಸಾಗರೋತ್ತರ ಭಾರತೀಯ ಕಾರ್ಡನ್ನು ಹೊಂದಿರಬೇಕು.

ಮುಂಜಾನೆಯಿಂದ ಮುಸ್ಸಂಜೆಯವರೆಗೆ ಕಾರಿಡಾರ್ ಸಂಚಾರಕ್ಕೆ ಮುಕ್ತವಾಗಿರುತ್ತದೆ. ಬೆಳಗ್ಗೆ ಹೋದ ಯಾತ್ರಿಕರು ಅದೇ ದಿನ ಹಿಂತಿರುಗಬೇಕು. ಮೊದಲೇ ಸೂಚನೆ ನೀಡಿದ ದಿನಾಂಕಗಳು ಹೊರತುಪಡಿಸಿ ಬೇರೆಲ್ಲಾ ದಿನಗಳಲ್ಲಿ ವರ್ಷವಿಡೀ ಕಾರಿಡಾರ್ ಮುಕ್ತವಾಗಿರುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com