ಕೊರೋನ ಅಬ್ಬರ: ಜಪಾನ್ ನಲ್ಲಿ ಮೂರನೇ ಬಾರಿಗೆ ತುರ್ತು ಪರಿಸ್ಥಿತಿ ಜಾರಿ
ಟೋಕಿಯೊ: ಜಪಾನ್ ನಲ್ಲಿ ಮಾರಕ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗುತ್ತಿರುವ ಹಿನ್ನಲೆಯಲ್ಲಿ ಜಪಾನ್ ಸರ್ಕಾರ ಮೂರನೇ ಬಾರಿಗೆ ತುರ್ತು ಪರಿಸ್ಥಿತಿ ಜಾರಿ ಮಾಡಿದೆ.
ಕೊರೋನ ಹೆಚ್ಚಳದ ಕಾರಣ ಜಪಾನಿನ ಟೋಕಿಯೊ, ಒಸಾಕಾ, ಕ್ಯೋಟೋ ಮತ್ತು ಹ್ಯೋಗೊ ಪ್ರಾಂತ್ಯಗಳಲ್ಲಿ ಮೂರು ವಾರಗಳ ತುರ್ತು ಪರಿಸ್ಥಿತಿ ಜಾರಿಯಾಗಿದೆ. ಏಪ್ರಿಲ್ 25 ರಿಂದ ಮೇ 11ರವರೆಗೂ ತುರ್ತು ಪರಿಸ್ಥಿತಿ ಜಾರಿಯಲ್ಲಿರುತ್ತದೆ ಎಂದು ಜಪಾನ್ ಪ್ರಧಾನಿ ಯೋಶಿಹಿಡೆ ಸುಗಾ ಹೇಳಿದ್ದಾರೆ.
'ಏಪ್ರಿಲ್ ಅಂತ್ಯದಿಂದ ಮೇ ಮೊದಲ ವಾರದವರೆಗೆ ಜಪಾನ್‌ನ ಗೋಲ್ಡನ್ ವೀಕ್ ರಜಾದಿನಗಳಾಗಿದ್ದು, ಈ ಸಂದರ್ಭದಲ್ಲಿ ಜನರು ವೈರಸ್ ಪ್ರಸರಣವನ್ನು ತಡೆಯಲು ಈ ಕ್ರಮ ಅನಿವಾರ್ಯವಾಗಿದೆ ಎಂದು ಸುಗಾ ಹೇಳಿದ್ದಾರೆ. ದೇಶದಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗ ಹರಡಿದ ನಂತರದ ಸರ್ಕಾರ ಜಾರಿಗೊಳಿಸಿದ ಮೂರನೇ ಬಿಗಿ ಕ್ರಮ ಇದಾಗಿದೆ.
ಶನಿವಾರ, ಜಪಾನ್‌ನಲ್ಲಿ ದೈನಂದಿನ ಕೊರೊನಾ ಸೋಂಕು ಪ್ರಕರಣಗಳ ಸಂಖ್ಯೆ 5,600 ಗಡಿ ದಾಟಿದ್ದು, ಇದು ಮೂರು ತಿಂಗಳಲ್ಲಿ ಅತಿಹೆಚ್ಚಿನ ಪ್ರಕರಣವಾಗಿದೆ. ಮುಂದಿನ ವಾರಗಳಲ್ಲಿ, ದೊಡ್ಡ ಶಾಪಿಂಗ್ ಮಾಲ್‌ಗಳು ಮತ್ತು ಥೀಮ್ ಪಾರ್ಕ್‌ಗಳನ್ನು ಮುಚ್ಚುವಂತೆ ಸೂಚಿಸಲಾಗಿದೆ, ಆದರೆ ಆಲ್ಕೊಹಾಲ್ ಸೌಲಭ್ಯವಿಲ್ಲದ ರೆಸ್ಟೋರೆಂಟ್‌ಗಳು ರಾತ್ರಿ 8:00 ಗಂಟೆಗೆ ಮುಚ್ಚುವಂತೆ ಸೂಚಿಸಲಾಗುತ್ತಿದೆ. ಅಲ್ಲದೆ ಕ್ರೀಡಾಕೂಟಗಳಿಂದ ಪ್ರೇಕ್ಷಕರನ್ನು ನಿರ್ಬಂಧಿಸಲಾಗುವುದು, ಎಲ್ಲ ರೀತಿಯ ಕ್ರೀಡಾಕೂಟಗಳೂ ಪ್ರೇಕ್ಷಕ ರಹಿತವಾಗಿರಲಿದ್ದು, ಸಾಮಾಜಿಕ ಅಂತರ ಪಾಲನೆ ಕಡ್ಡಾಯವಾಗಿರಲಿದೆ ಎಂದು ಹೇಳಲಾಗಿದೆ.
ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ದಿನಗಣನೆ ಆರಂಭವಾಗಿರುವಂತೆಯೇ ಜಪಾನ್ ಸರ್ಕಾರದ ನಿರ್ಧಾರ ಕ್ರೀಡಾಕೂಟದ ಮೇಲೆ ಕರಿ ನೆರಳು ಮೂಡುವಂತೆ ಮಾಡಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ