ಹೃದಯ ವಿದ್ರಾವಕ ಪರಿಸ್ಥಿತಿ; ನೆರವಿಗೆ ಮುಂದಾದ ಅಮೆರಿಕಕ್ಕೆ ಮೈಕ್ರೋಸಾಫ್ಟ್ ಮುಖ್ಯಸ್ಥ ಸತ್ಯ ನಾಡೆಲ್ಲ ಧನ್ಯವಾದ
ವಾಷಿಂಗ್ಟನ್: ಕೋವಿಡ್-19 2ನೇ ಅಲೆಯಿಂದಾಗಿ ತತ್ತರಿಸಿ ಹೋಗಿರುವ ಭಾರತದಲ್ಲಿನ ಪರಿಸ್ಥಿತಿ ಹೃದಯ ವಿದ್ರಾವಕವಾಗಿದ್ದು, ನೆರವಿಗೆ ಮುಂದಾದ ಅಮೆರಿಕ ಸರ್ಕಾರಕ್ಕೆ ಧನ್ಯವಾದಗಳು ಎಂದು ಮೈಕ್ರೋಸಾಫ್ಟ್ ಸಂಸ್ಥೆಯ ಮುಖ್ಯಸ್ಥ ಭಾರತ ಮೂಲದ ಸತ್ಯ ನಾಡೆಲ್ಲ ಹೇಳಿದ್ದಾರೆ.
ಈ ಕುರಿತಂತೆ ಟ್ವೀಟ್ ಮಾಡಿರುವ ಅವರು, 'ಭಾರತದ ಪ್ರಸ್ತುತ ಪರಿಸ್ಥಿತಿ ಹೃದಯ ವಿದ್ರಾವಕವಾಗಿದೆ. ಈ ಸಂಕಷ್ಟದ ಪರಿಸ್ಥಿಯಿಲ್ಲಿ ಅಮೆರಿಕ ಸರ್ಕಾರವು ಭಾರತಕ್ಕೆ ನೆರವು ನೀಡಲು ಮುಂದಾಗಿದೆ. ಇದಕ್ಕಾಗಿ ನಾನು ಕೃತಜ್ಞನಾಗಿದ್ದೇನೆ. ಅಂತೆಯೇ ಮೈಕ್ರೋಸಾಫ್ಟ್ ಸಂಸ್ಥೆ ತನ್ನ ಧ್ವನಿ, ಸಂಪನ್ಮೂಲ, ಮತ್ತು ತಂತ್ರಜ್ಞಾನವನ್ನು ಭಾರತದಲ್ಲಿನ ಪ್ರಸ್ತುತ ಪರಿಸ್ಥಿತಿಯಲ್ಲಿ ಪರಿಹಾರ ಕಾರ್ಯಗಳಿಗೆ ಸಹಾಯ ಮಾಡಲು ಮತ್ತು ನಿರ್ಣಾಯಕ ಆಮ್ಲಜನಕ ಸಾಂದ್ರತೆಯ ಸಾಧನಗಳ ಖರೀದಿಯನ್ನು ಬೆಂಬಲಿಸಲು ಬಳಸುವುದನ್ನು ಮುಂದುವರಿಸುತ್ತದೆ ಎಂದು ಭರವಸೆ ನೀಡಿದ್ದಾರೆ.
ಈ ಹಿಂದೆ ಸ್ವೀಡನ್ ಮೂಲದ ಅಂತಾರಾಷ್ಟ್ಪೀಯ ಪರಿಸರ ಹೋರಾಟಗಾರ್ತಿ ಗ್ರೇಟಾ ಥನ್ಬರ್ಗ್ ಕೂಡ ಭಾರತದ ಪರಿಸ್ಥಿತಿ ಕುರಿತು ಟ್ವೀಟ್ ಮಾಡಿ, ಜಾಗತಿಕ ಸಮುದಾಯ ಭಾರತಕ್ಕೆ ನೆರವು ನೀಡಬೇಕು ಎಂದು ಕೋರಿದ್ದರು.
ಇನ್ನು ಭಾರತದಲ್ಲಿ ಇಂದು ಕೂಡ ಮತ್ತೆ ದೈನಂದಿನ ಸೋಂಕಿತರ ಸಂಖ್ಯೆ 3.52ಲಕ್ಷ ಗಡಿ ದಾಡಿದ್ದು, ಕಳೆದ 24 ಗಂಟೆಗಳ ಅವಧಿಯಲ್ಲಿ ದೇಶದಲ್ಲಿ 3,52,991 ಹೊಸ ಕೋವಿಡ್ ಸೋಂಕು ಪ್ರಕರಣಗಳು ವರದಿಯಾಗಿದ್ದು, 2812 ಸೋಂಕಿತರು ಸಾವನ್ನಪ್ಪಿದ್ದಾರೆ. ಈ ಬಗ್ಗೆ ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದ್ದು, ದೇಶದಲ್ಲಿ ಒಟ್ಟಾರೆ ಕೋವಿಡ್ ಸೋಂಕಿತರ ಸಂಖ್ಯೆ 1,73,13,163ಕ್ಕೆ ಏರಿಕೆಯಾಗಿದೆ. ಅಂತೆಯೇ ನಿನ್ನೆ 2,19,272 ಮಂದಿ ಸೋಂಕಿತರು ಗುಣಮುಖರಾಗಿದ್ದು, ಆ ಮೂಲಕ ದೇಶದಲ್ಲಿ ಚೇತರಿಕೆಯಾದವರ ಸಂಖ್ಯೆ 1,43,04,382ಕ್ಕೆ ಏರಿಕೆಯಾಗಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ