ಜಲಾಲಾಬಾದ್'ನ್ನೂ ವಶಕ್ಕೆ ಪಡೆದ ಉಗ್ರರು; ಸರ್ಕಾರದ ನಿಯಂತ್ರಣದಲ್ಲಿರುವ ಕಾಬೂಲ್'ನ್ನೂ ಸುತ್ತುವರೆದಿರುವ ತಾಲಿಬಾನ್!

ಅಫ್ಘಾನಿಸ್ತಾನದ ಉತ್ತರ, ಪಶ್ಚಿಮ ಹಾಗೂ ದಕ್ಷಿಣ ಭಾಗವನ್ನು ಸಂಪೂರ್ಣ ವಶಪಡಿಸಿಕೊಂಡಿರುವ ತಾಲಿಬಾನ್‌ ಉಗ್ರರು ಇದೀಗ ಜಲಾಲಾಬಾದ್'ನ್ನೂ ವಶಕ್ಕೆ ಪಡೆದುಕೊಂಡಿದ್ದು, ಸರ್ಕಾರದ ವಶದಲ್ಲಿರುವ ಏಕೈಕ ನಗರ ಕಾಬೂಲ್'ನ್ನೂ ಸುತ್ತುವರೆದಿದ್ದಾರೆಂದು ವರದಿಗಳಿಂದ ತಿಳಿದುಬಂದಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಕಾಬೂಲ್‌: ಅಫ್ಘಾನಿಸ್ತಾನದ ಉತ್ತರ, ಪಶ್ಚಿಮ ಹಾಗೂ ದಕ್ಷಿಣ ಭಾಗವನ್ನು ಸಂಪೂರ್ಣ ವಶಪಡಿಸಿಕೊಂಡಿರುವ ತಾಲಿಬಾನ್‌ ಉಗ್ರರು ಇದೀಗ ಜಲಾಲಾಬಾದ್'ನ್ನೂ ವಶಕ್ಕೆ ಪಡೆದುಕೊಂಡಿದ್ದು, ಸರ್ಕಾರದ ವಶದಲ್ಲಿರುವ ಏಕೈಕ ನಗರ ಕಾಬೂಲ್'ನ್ನೂ ಸುತ್ತುವರೆದಿದ್ದಾರೆಂದು ವರದಿಗಳಿಂದ ತಿಳಿದುಬಂದಿದೆ. 

ನಂಗರ್‌ಹಾರ್ ಪ್ರಾಂತ್ಯದ ರಾಜಧಾನಿಯಾದ ಜಲಾಲಾಬಾದ್‌ನಲ್ಲಿರುವ ರಾಜ್ಯಪಾಲರ ಕಚೇರಿಯಲ್ಲಿ ನಿಂತುಕೊಂಡಿರುವ ಫೋಟೋಗಳನ್ನು ಇಂದು ಮುಂಜಾನೆ ಉಗ್ರರು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. 

ಈ ಪ್ರಾಂತ್ಯದ ನಾಯಕರಾಗಿರುವ ಅಬ್ರರುಲ್ಲಾ ಮುರಾದ್ ಅವರು ಸುದ್ದಿಸಂಸ್ಥೆಯೊಂದಕ್ಕೆ ಹೇಳಿಕೆ ನೀಡಿದ್ದು, ಜಲಾಲಾಬಾದ್‌ನಲ್ಲಿ ಯಾವುದೇ ಘರ್ಷಣೆಗಳು ನಡೆಯುತ್ತಿಲ್ಲ. ಏಕೆಂದರೆ, ರಾಜ್ಯಪಾಲರು ತಾಲಿಬಾನ್‌ಗೆ ಶರಣಾಗಿದ್ದಾರೆಂದು ಹೇಳಿದ್ದಾರೆ.

ಅಫ್ಘಾನಿಸ್ತಾನದಲ್ಲಿ ತಮ್ಮ ದಾಳಿಯನ್ನು ತೀವ್ರಗೊಳಿಸಿರುವ ಉಗ್ರರು, ಈಗಾಗಲೇ ಕಾಬೂಲ್'ಗೆ ಅಂಟಿಕೊಂಡಿರುವ ಪ್ರಾಂತ್ಯವನ್ನು ವಶಪಡಿಸಿಕೊಂಡಿದ್ದು, ಹಲವು ದಿಕ್ಕಿನಿಂದ ಕಾಬೂಲ್ ನತ್ತ ನುಗ್ಗುತ್ತಿದ್ದಾರೆಂದು ವರದಿಗಳು ತಿಳಿಸಿವೆ. 

ಈ ನಡುವೆ ಅಫ್ಘಾನಿಸ್ಥಾನವನ್ನು ತನ್ನ ಮುಷ್ಟಿಗೆ ಪಡೆಯಲು ಸನ್ನದ್ಧವಾಗಿರುವ ತಾಲಿಬಾನ್‌, ಇದೀಗ ಸಂಧಾನಕ್ಕೆ ಹೊಸ ಷರತ್ತುಗಳನ್ನು ವಿಧಿಸಿದೆ ಎಂದು ತಿಳಿದುಬಂದಿದೆ. 

ತಾಲಿಬಾನ್ ಉಗ್ರರು ವಿಧಿಸಿರುವ ಷರತ್ತು ಗಳು ಇದೀಗ ಅಫ್ಘಾನ್‌ನ ಅಶ್ರಫ್ ಘನಿ ನೇತೃತ್ವದ ಸರ್ಕಾರಕ್ಕೆ “ನುಂಗಲಾರದ ತುತ್ತಾಗಿ’ ಪರಿಣಮಿಸಿದೆ ಎಂದು ಹೇಳಲಾಗುತ್ತಿದೆ. 

ಸಂಧಾನದ ಮೂಲಕ ಶಾಂತಿ ಕಾಪಾಡುವ ವಿಚಾರಕ್ಕೆ ಸಂಬಂಧಿಸಿ ಜಾಗತಿಕ ಒತ್ತಡ ಹೆಚ್ಚಿರುವಂತೆಯೇ, ತಾಲಿಬಾನ್‌ ಹೊಸ ಷರತ್ತುಗಳ ಮೂಲಕ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದೆ. 

ಜೈಲಲ್ಲಿರುವ ಉಗ್ರರ ಬಿಡುಗಡೆ, ಹೊಸ ಸರಕಾರದಲ್ಲಿ ಪ್ರಮುಖ ಎಲ್ಲ ಹುದ್ದೆಗಳಿಗೆ ಬೇಡಿಕೆ ಹಾಗೂ ವಿಶ್ವಸಂಸ್ಥೆಯ “ಉಗ್ರ ಪಟ್ಟಿ’ಯಿಂದ ಹೊರಗಿಡುವಂತೆ ಷರತ್ತು ವಿಧಿಸಿದೆ ಎಂದು ವರದಿಗಳು ತಿಳಿಸಿವೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com