ವಿರೋಧಿ ಬಣದಿಂದ 3 ಜಿಲ್ಲೆಗಳು ತಾಲಿಬಾನ್ ಮುಕ್ತ, ಹಲವು ತಾಲಿಬಾನಿಗಳ ಹತ್ಯೆ: ವರದಿ
ಕಾಬೂಲ್: ಆಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತಕ್ಕೆ ಹೆದರಿ ದೇಶ ಬಿಟ್ಟು ಪರಾರಿಯಾಗುತ್ತಿರುವ ನಾಗರೀಕರ ನಡುವೆಯೇ ಅಲ್ಲೊಂದು ಸಣ್ಣ ತಾಲಿಬಾನ್ ವಿರೋಧಿ ಬಣ ಕೂಡ ಸೃಷ್ಟಿಯಾಗಿದ್ದು, ಈ ಬಣದ ದಿಟ್ಟ ಹೋರಾಟದಿಂದಾಗಿ ಕೇವಲ ಕೆಲವೇ ದಿನಗಳ ಅಂತರದಲ್ಲಿ 3 ಜಿಲ್ಲೆಗಳು ತಾಲಿಬಾನ್ ಮುಕ್ತವಾಗಿದೆ.
ಹೌದು..ಅಚ್ಚರಿಯ ಬೆಳವಣಿಗೆಯಲ್ಲಿ ಸ್ಥಳೀಯರ ಹೋರಾಟದ ಫಲವಾಗಿ 3 ಜಿಲ್ಲೆಗಳು ತಾಲಿಬಾನ್ ಹಿಡಿತದಿಂದ ಮುಕ್ತವಾಗಿವೆ. ಬಾಗಲನ್ ಪ್ರಾಂತ್ಯದ 3 ಜಿಲ್ಲೆಗಳು ಇದೀಗ ತಾಲಿಬಾನ್ ಕೈತಪ್ಪಿದ್ದು, ಸ್ಥಳೀಯರ ಕೆಚ್ಚೆದೆಯ ಹೋರಾಟಕ್ಕೆ ಪ್ರತಿಫಲ ದೊರೆತಿದೆ. ಈ ಹೋರಾಟ ಇದೀಗ ಕ್ರಮೇಣ ಎಲ್ಲ ಪ್ರಾಂತ್ಯಗಳಿಗೂ ವ್ಯಾಪಿಸುವ ಸಾಧ್ಯತೆ ಇದ್ದು, ತಾಲಿಬಾನ್ ವಿರೋಧಿ ಬಣಕ್ಕೆ ಮತ್ತಷ್ಟು ಹೋರಾಟಗಾರರು ಸೇರ್ಪಡೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಅಫ್ಘಾನಿಸ್ತಾನದಲ್ಲಿ ಆತಂಕ ಬಿತ್ತಿರುವ ತಾಲಿಬಾನ್ ಉಗ್ರರು ಬಾಯಲ್ಲಿ ಶಾಂತಿಯ ಮಾತುಗಳನ್ನು ಆಡುತ್ತಿದ್ದರೂ ತಮ್ಮ ಕ್ರೌರ್ಯವನ್ನು ಬಿಟ್ಟಿಲ್ಲ. ಯಾರೂ ದೇಶ ಬಿಟ್ಟು ಹೋಗಬೇಡಿ, ಮಹಿಳೆಯರಿಗೆ ತೊಂದರೆ ಮಾಡುವುದಿಲ್ಲ, ಸರ್ಕಾರಿ ನೌಕರರು ಕೆಲಸಕ್ಕೆ ಹಾಜರಾಗಿ ಎಂದೆಲ್ಲಾ ಹೇಳುವ ತಾಲಿಬಾನಿ ಉಗ್ರರು ಇಂದು ಪೊಲೀಸ್ ಅಧಿಕಾರಿಯೊಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಹೀಗೆ ಕ್ರೌರ್ಯತೆ ಮೆರೆಯುವವರ ವಿರುದ್ಧ 3 ಜಿಲ್ಲೆಗಳ ಜನರು ತಿರುಗಿ ಬಿದ್ದಿರುವುದು ನಿಜಕ್ಕೂ ಸಾಹಸಗಾಥೆಯಾಗಿದ್ದು, ಸ್ಥಳೀಯರ ಹೋರಾಟದಿಂದಾಗಿ ಸದರಿ ಜಿಲ್ಲೆಗಳು ತಾಲಿಬಾನ್ ಹಿಡಿತದಿಂದ ಮುಕ್ತಗೊಂಡಿವೆ.
ತಾಲಿಬಾನಿಗಳ ಹುಟ್ಟಡಗಿಸಿದ 'ಪಬ್ಲಿಕ್ ರೆಸಿಸ್ಟೆನ್ಸ್ ಫೋರ್ಸ್'
ಖೈರ್ ಮೊಹಮದ್ ಅಂದರಾಬಿ ಎಂಬುವವರಿಂದ ಆರಂಭವಾದ 'ಪಬ್ಲಿಕ್ ರೆಸಿಸ್ಟೆನ್ಸ್ ಫೋರ್ಸ್' ಸೇನೆ ತಾಲಿಬಾನಿಗಳ ಹುಟ್ಟಡಗಿಸಿದ್ದು, ಬಾಘಲನ್ ಪ್ರಾಂತ್ಯದ ಪೋಲ್-ಎ-ಹೆಸರ್, ದೇಹ್ ಸಲಾಹ್ ಮತ್ತು ಬಾನು ಜಿಲ್ಲೆಗಳನ್ನು ತಾಲಿಬಾನ್ ಮುಕ್ತಗೊಳಿಸಿದ್ದಾರೆ. ಇದಕ್ಕೆ ಇಂಬು ನೀಡುವಂತೆ ಈ ಪ್ರಾಂತ್ಯಗಳಲ್ಲಿ ಸ್ಥಳೀಯರು ಆಫ್ಘಾನಿಸ್ತಾನ ರಾಷ್ಟ್ರೀಯ ಧ್ವಜವನ್ನು ಹಾರಾಟ ಮಾಡುತ್ತಿರುವ ದೃಶ್ಯ ಕೂಡ ವೈರಲ್ ಆಗುತ್ತಿದೆ. ತಾಲಿಬಾನ್ ಬಂಡುಕೋರರು ಮತ್ತು 'ಪಬ್ಲಿಕ್ ರೆಸಿಸ್ಟೆನ್ಸ್ ಫೋರ್ಸ್' ನೇತೃತ್ವದ ಸ್ಥಳೀಯರ ಸೇನೆ ಸುಮಾರು 60ಕ್ಕೂ ಹೆಚ್ಚು ತಾಲಿಬಾನಿಗಳನ್ನು ಹೊಡೆದುರುಳಿಸಿದೆ. ಅಲ್ಲದೆ ತಮ್ಮ ಸೇನೆ ತಾಲಿಬಾನಿಗಳು ನಿಯಂತ್ರಣಕ್ಕೆ ತೆಗೆದುಕೊಂಡಿರುವ ಜಿಲ್ಲೆಗಳಿಗೂ ನುಗ್ಗಲಿದ್ದು ಅವುಗಳನ್ನು ಕೂಡ ತಾಲಿಬಾನಿಗಳಿಂದ ಮುಕ್ತಗೊಳಿಸಲಿದೆ ಎಂದು ಹೇಳಿದೆ.
ಇಡೀ ಆಫ್ಘಾನಿಸ್ತಾನ ತಾಲಿಬಾನಿಗಳ ವಶವಾಗಿದ್ದರೂ, ಒಂದೇ ಒಂದು ಪ್ರಾಂತ್ಯ ಮಾತ್ರ ಇಂದಿಗೂ ತಾಲಿಬಾನ್ ಮುಕ್ತ
ಅಂತೆಯೇ ಮತ್ತೊಂದು ತುದಿಯಲ್ಲಿ ಈ ಹಿಂದೆ ಆ್ಯಂಟಿ ತಾಲಿಬಾನ್ ನಾಯಕ ಎಂದೇ ಖ್ಯಾತಿಗಳಿಸಿದ್ದ ಅಹ್ಮದ್ ಶಾ ಮಸ್ಸೌದ್ ನ ಪುತ್ರ ಅಹ್ಮದ್ ಮಸ್ಸೌದ್ ಕೂಡ ಇದೇ ರೀತಿಯ ತಾಲಿಬಾನ್ ವಿರೋಧಿ ಬಣ ಕಟ್ಟಿಕೊಂಡು ಪಂಜಶೀರ್ ಪ್ರಾಂತ್ಯದಲ್ಲಿ ಹೋರಾಟ ಮಾಡುತ್ತಿದ್ದು, ಈ ಪ್ರಾಂತ್ಯ ಇಂದಿಗೂ ತಾಲಿಬಾನ್ ಮುಕ್ತವಾಗಿಯೇ ಉಳಿದಿದೆ. ಇಡೀ ಆಫ್ಘಾನಿಸ್ತಾನ ತಾಲಿಬಾನಿಗಳ ವಶವಾಗಿದ್ದರೂ ಇಲ್ಲಿ ಅಹ್ಮದ್ ಶಾ ಮಸ್ಸೌದ್ ನ ಪುತ್ರ ಅಹ್ಮದ್ ಮಸ್ಸೌದ್ ತನ್ನದೇ ಪಡೆಕಟ್ಟಿಕೊಂಡು ತಾಲಿಬಾನಿಗಳು ಈ ಕಡೆ ತಲೆಕೂಡ ಹಾಕದಂತೆ ಕಾರ್ಯಾಚರಣೆ ನಡೆಸಿದ್ದಾರೆ. ಇವರ ಈ ಕಾರ್ಯಕ್ಕೆ ಸ್ಥಳೀಯರು ಕೂಡ ಸಾಥ್ ನೀಡುತ್ತಿದ್ದು, ಇದೇ ಇವರ ಯಶಸ್ಸಿನ ಮೂಲವೆಂದು ಹೇಳಲಾಗುತ್ತಿದೆ.
ಇದೇ ಕಾರಣಕ್ಕಾಗಿ ಕೆಲ ತಾಲಿಬಾನ್ ಮುಖಂಡರು ಅಹ್ಮದ್ ಮಸ್ಸೌದ್ ರೊಂದಿಗೆ ಭೇಟಿ ಮಾಡಲು ಯತ್ನಿಸುತ್ತಿದ್ದು, ತಾಲಿಬಾನಿ ಮುಖಂಡರ ಮಾತಿಗೆ ಸೊಪ್ಪು ಹಾಕದ ಮಸ್ಸೌದ್ ತನ್ನ ಪಡೆಯ ಪ್ರಧಾನ ಕಮಾಂಡರ್ ಆಗಿ ಮುಂಚೂಣಿಯಲ್ಲಿ ನಿಂತು ಹೋರಾಡುತ್ತಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ