ಸರ್ಕಾರ ರಚನೆ ಕುರಿತು ತಾಲಿಬಾನ್ ಸಹ-ಸಂಸ್ಥಾಪಕ ಮುಲ್ಲಾ ಅಬ್ದುಲ್ ಘನಿ ಬರದಾರ್ ಕಾಬುಲ್'ನಲ್ಲಿ ಮಾತುಕತೆ!

ತಾಲಿಬಾನ್ ಸಹ ಸಂಸ್ಥಾಪಕ ಮುಲ್ಲಾ ಅಬ್ದುಲ್ ಘನಿ ಬರದಾರ್ ಕಾಬುಲ್ ತಲುಪಿದ್ದು, ತಮ್ಮ ಸಂಘಟನೆಯ ಸದಸ್ಯರು ಹಾಗೂ ಇತರೆ ರಾಜಕಾರಣಿಗಳೊಂದಿಗೆ ಹೊಸ ಸರ್ಕಾರ ರಚನೆ ಕುರಿತು ಮಾತುಕತೆ ನಡೆಸುತ್ತಿದ್ದಾರೆಂದು ತಿಳಿದುಬಂದಿದೆ. 
ತಾಲಿಬಾನ್ ಸಹ-ಸಂಸ್ಥಾಪಕ ಮುಲ್ಲಾ ಅಬ್ದುಲ್ ಘನಿ ಬರದಾರ್
ತಾಲಿಬಾನ್ ಸಹ-ಸಂಸ್ಥಾಪಕ ಮುಲ್ಲಾ ಅಬ್ದುಲ್ ಘನಿ ಬರದಾರ್

ಕಾಬುಲ್: ತಾಲಿಬಾನ್ ಸಹ ಸಂಸ್ಥಾಪಕ ಮುಲ್ಲಾ ಅಬ್ದುಲ್ ಘನಿ ಬರದಾರ್ ಕಾಬುಲ್ ತಲುಪಿದ್ದು, ತಮ್ಮ ಸಂಘಟನೆಯ ಸದಸ್ಯರು ಹಾಗೂ ಇತರೆ ರಾಜಕಾರಣಿಗಳೊಂದಿಗೆ ಹೊಸ ಸರ್ಕಾರ ರಚನೆ ಕುರಿತು ಮಾತುಕತೆ ನಡೆಸುತ್ತಿದ್ದಾರೆಂದು ತಿಳಿದುಬಂದಿದೆ. 

ಸರ್ಕಾರ ರಚನೆ ಕುರಿತು ಮುಲ್ಲಾ ಅಬ್ದುಲ್ ಘನಿ ಬರದಾರ್ ಅವರು ಕಾಬುಲ್'ಗೆ ಆಗಮಿಸಿದ್ದು, ಜಿಹಾದಿ ನಾಯಕರು ಹಾಗೂ ರಾಜಕೀಯ ನಾಯಕರೊಂದಿಗೆ ಮಾತುಕತೆ ನಡೆಸಲಿದ್ದಾರೆಂದು ತಾಲಿಬಾನ್'ನ ನಾಯಕರು ಮಾಹಿತಿ ನೀಡಿದ್ದಾರೆ. 

1968ರಲ್ಲಿ ಅಫ್ಘಾನಿಸ್ತಾನದ ಉರುಜ್ಗಾನ್ ಪ್ರಾಂತ್ಯದಲ್ಲಿ ಜನಿಸಿದ ಬರದಾರ್, ತಾಲಿಬಾನ್ ಉಗ್ರ ಸಂಘಟನೆಯ ಸಹ ಸಂಸ್ಥಾಪಕ. ಹೈಬತುಲ್ಲಾ ಅಖುಂಡಜಾದ ನಂತರ ತಾಲಿಬಾನ್ ಶ್ರೇಣಿಯಲ್ಲಿ ಅವರು 2ನೇ ಅತ್ಯಂತ ಹಿರಿಯ ನಾಯಕ. 

3 ವರ್ಷಗಳ ಹಿಂದೆ ಅಮೆರಿಕದ ಕೋರಿಕೆಯ ಮೇರೆಗೆ ಆತನನ್ನು ಪಾಕಿಸ್ತಾನದ ಜೈಲಿನಿಂದ ಬಿಡುಗಡೆ ಮಾಡಲಾಯಿತು. ಬರದಾರ್ ಇಂದು ರಾಜಕೀಯ ಮುಖ್ಯಸ್ಥ ಮತ್ತು ತಾಲಿಬಾನ್‌ನ ಅತ್ಯಂತ ಗಮನಾರ್ಹ ಸಾರ್ವಜನಿಕ ಮುಖವಾಗಿ ಗುರುತಿಸಿಕೊಂಡಿದ್ದಾನೆ.

1980ರಲ್ಲಿ ಸೋವಿಯತ್ ಸೇನೆಯ ವಿರುದ್ಧ ಅಫ್ಘಾನ್ ಮುಜಾಹಿದ್ದೀನ್ ನಲ್ಲಿ ಬರದಾರ್ ಹೋರಾಡಿದ್ದರು. 1992ರಲ್ಲಿ ರಷ್ಯನ್ನರ ನಿರ್ಗಮನದ ನಂತರ ಪ್ರತಿಸ್ಪರ್ಧಿ ಸೇನಾಧಿಕಾರಿಗಳ ನಡುವೆ ಅಂತರ್ಯುದ್ಧ ಸ್ಫೋಟಗೊಂಡಿತ್ತು.  

ಆ ಸಮಯದಲ್ಲಿ ಬರದಾರ್ ಮಾಜಿ ಕಮಾಂಡರ್ ಮತ್ತು ತನ್ನ ಸೋದರಮಾವ ಮೊಹಮ್ಮದ್ ಒಮರ್‌ನೊಂದಿಗೆ ಕಂದಹಾರ್‌ನಲ್ಲಿ ಮದರಸಾವನ್ನು ಸ್ಥಾಪಿಸಿದ್ದ. ಈ ಇಬ್ಬರು ಒಟ್ಟಾಗಿ ತಾಲಿಬಾನ್ ಭಯೋತ್ಪಾದಕ ಸಂಘಟನೆ ಯನ್ನು ಹುಟ್ಟುಹಾಕಿದ್ದರು. ಈ ಯುವ ಇಸ್ಲಾಮಿಕ್ ನಾಯಕರು ದೇಶದ ಧಾರ್ಮಿಕ ಶುದ್ಧೀಕರಣ ಮತ್ತು ಎಮಿರೇಟ್‌ನ ಸೃಷ್ಟಿಗೆ ಮೀಸಲಾದ ಚಳುವಳಿಯನ್ನು ಮುನ್ನಡೆಸಿದರು. ಅಫ್ಘನ್ನರಲ್ಲಿ ಸೇನಾಧಿಪತಿಗಳ ವಿರುದ್ಧ ದ್ವೇಷ ಮತ್ತು ಪಾಕಿಸ್ತಾನದ ಇಂಟರ್-ಸರ್ವಿಸಸ್ ಇಂಟೆಲಿಜೆನ್ಸ್ ಏಜೆನ್ಸಿಯ ಬೆಂಬಲದಿಂದಾಗಿ 1996ರಲ್ಲಿ ಪ್ರಾಂತೀಯ ರಾಜಧಾನಿಗಳ ಅದ್ಭುತ ವಿಜಯಗಳ ನಂತರ ತಾಲಿಬಾನ್ ಅಧಿಕಾರಕ್ಕೆ ಬಂದಿತ್ತು.

ಮುಲ್ಲಾ ಒಮರ್ ನಂತರದ ಸ್ಥಾನದಲ್ಲಿದ್ದ ಬರದಾರ್ ಪರಿಣಾಮಕಾರಿ ಕಾರ್ಯತಂತ್ರ ರೂಪಿಸಿದ್ದರು. ಪರಿಣಾಮ ತಾಲಿಬಾನ್ ವಿಜಯಗಳಲ್ಲಿ ಅವರು ಪ್ರಮುಖ ಪಾತ್ರ ನಿರ್ವಹಿಸಿದ್ದರು. ಅಫ್ಘಾನಿಸ್ತಾನದ 5 ವರ್ಷಗಳ ತಾಲಿಬಾನ್ ಆಡಳಿತದಲ್ಲಿ ರಕ್ಷಣಾ ಉಪಮಂತ್ರಿಯಾಗಿ ಬರದಾರ್ ಮಿಲಿಟರಿ ಮತ್ತು ಆಡಳಿತಾತ್ಮಕ ಪಾತ್ರಗಳನ್ನು ನಿರ್ವಹಿಸಿದರು. ಇದೀಗ ತಾಲಿಬಾನ್ ಮುಖ್ಯಸ್ಥ ಬರದಾರ್ ಅಫ್ಘಾನಿಸ್ತಾನದ ಅಧ್ಯಕ್ಷಗಾದಿಗೆ ಏರಲು ಸಜ್ಜಾಗಿದ್ದಾರೆ.

1996ರಿಂದ 2001ರವರೆಗಿನ ತನ್ನ ಆಡಳಿತದಲ್ಲಿ ತಾಲಿಬಾನ್ ಅತ್ಯಂತ ಕಠಿಣ ನೀತಿಗಳೊಂದಿಗೆ ಆಡಳಿತ ನಡೆಸಿತ್ತು. ಮಹಿಳೆಯರಿಗೆ ಕಠಿಣ ನಿಬಂಧನೆಗಳನ್ನು ಹೇರಿತ್ತು. ಇಪ್ಪತ್ತು ವರ್ಷಗಳ ಬಳಿಕ ಇದೀಗ ಮತ್ತೆ ಅಫ್ಘಾನಿಸ್ತಾನವನ್ನು ತನ್ನ ವಶಕ್ಕೆ ಪಡೆದಿರುವ ತಾಲಿಬಾನಿಗಳು, ಈ ಬಾರಿಯ ಆಡಳಿತ ವಿಭಿನ್ನವಾಗಿರುತ್ತದೆ ಎಂದು ಹೇಳಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com