ತಾಲಿಬಾನಿಗಳ ದಂಡೇ ದೌಡಾಯಿಸಿರುವ ಪಂಜ್ ಶೀರ್ ರಣರಂಗದಲ್ಲಿ ಆಫ್ಘನ್ ಉಪಾಧ್ಯಕ್ಷರಿಂದ ವಾಲಿಬಾಲ್ ಆಟ!

ಇಡೀ ಆಫ್ಘಾನಿಸ್ತಾನವನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡಿರುವ ತಾಲಿಬಾನ್ ಪಡೆಗೆ ಪುಟ್ಟ ಪಂಜ್ ಶೀರ್ ಪ್ರಾಂತ್ಯ ಮಾತ್ರ ಕಬ್ಬಿಣದ ಕಡಲೆಯಾಗಿದ್ದು, ಇದೇ ಪ್ರದೇಶದಲ್ಲಿ ಆಫ್ಘಾನಿಸ್ತಾನ ಉಪಾಧ್ಯಕ್ಷ ಅಮರುಲ್ಲಾ ಸಾಲೇಹ್ ವಾಲಿಬಾಲ್ ಆಡುತ್ತಿರುವ ವಿಡಿಯೋ ಇದೀಗ ವ್ಯಾಪಕ ವೈರಲ್ ಆಗುತ್ತಿದೆ.
ಅಮರುಲ್ಲಾ ಸಾಲೇಹ್ ವಾಲಿಬಾಲ್ ಆಟ
ಅಮರುಲ್ಲಾ ಸಾಲೇಹ್ ವಾಲಿಬಾಲ್ ಆಟ

ಕಾಬೂಲ್: ಇಡೀ ಆಫ್ಘಾನಿಸ್ತಾನವನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡಿರುವ ತಾಲಿಬಾನ್ ಪಡೆಗೆ ಪುಟ್ಟ ಪಂಜ್ ಶೀರ್ ಪ್ರಾಂತ್ಯ ಮಾತ್ರ ಕಬ್ಬಿಣದ ಕಡಲೆಯಾಗಿದ್ದು, ಇದೇ ಪ್ರದೇಶದಲ್ಲಿ ಆಫ್ಘಾನಿಸ್ತಾನ ಉಪಾಧ್ಯಕ್ಷ ಅಮರುಲ್ಲಾ ಸಾಲೇಹ್ ವಾಲಿಬಾಲ್ ಆಡುತ್ತಿರುವ ವಿಡಿಯೋ ಇದೀಗ ವ್ಯಾಪಕ ವೈರಲ್ ಆಗುತ್ತಿದೆ.

ಹೌದು.. ತಾಲಿಬಾನ್ ವಿರೋಧಿ ಪಡೆಯ ಯೋಧರು ಪಂಜ್ ಶೀರ್ ಪ್ರಾಂತ್ಯವನ್ನು ವಶಕ್ಕೆ ತೆಗೆದುಕೊಳ್ಳಲು ಬಂದ ನೂರಾರು ತಾಲಿಬಾನಿ ಬಂಡುಕೋರರನ್ನು  ಹೊಡೆದುರುಳಿಸಿದ ಬೆನ್ನಲ್ಲೇ ಇತ್ತ ತಾಲಿಬಾನಿ ಮುಖಂಡರು ತಮ್ಮ ನೂರಾರು ಪಡೆಗಳನ್ನು ಪಂಜ್ ಶೀರ್ ನತ್ತ ರವಾನಿಸುತ್ತಿದ್ದಾರೆ. ಇದೇ ಕಾರಣಕ್ಕೆ ಪಂಜ್ ಶೀರ್ ಪ್ರಾಂತ್ಯ ಅಕ್ಷರಶಃ ರಣರಂಗವಾಗಿ ಮಾರ್ಪಟ್ಟಿದ್ದು, ಈ ಕಡಿದಾದ ಪ್ರಾಂತ್ಯವನ್ನು ವಶಕ್ಕೆ ತೆಗೆದುಕೊಳ್ಳಲು ತಾಲಿಬಾನಿಗಳು ಹರಸಾಹಸ ಪಡುತ್ತಿದ್ದರೆ ಅವರಿಗೆ ತಾಲಿಬಾನ್ ವಿರೋಧಿ ಬಣ ಕೂಡ ತಕ್ಕ ತಿರುಗೇಟು ನೀಡುತ್ತಿದೆ.

ಆದರೆ ಇದಾವುದಕ್ಕೂ ತಲೆಯೇ ಕೆಡಿಸಿಕೊಳ್ಳದ ಆಫ್ಘಾನಿಸ್ತಾನ ಉಪಾಧ್ಯಕ್ಷ ಅಮರುಲ್ಲಾ ಸಾಲೇಹ್ ಮಾತ್ರ ಅದೇ ಪಂಜ್ ಶೀರ್ ಪ್ರಾಂತ್ಯದಲ್ಲಿ ತಾಲಿಬಾನ್ ವಿರೋಧಿ ಬಣದ ಯುವ ಹೋರಾಟಗಾರರೊಂದಿಗೆ ವಾಲಿಬಾಲ್ ಆಟವಾಡುತ್ತಿದ್ದಾರೆ. ಇಂತಹುದೊಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ವೈರಲ್ ಆಗುತ್ತಿದೆ. ಆದರೆ ಈ ವಿಡಿಯೋ ಇಂದಿನದ್ದೇ ಅಥವಾ ಹಳೆಯದೇ ಎಂದು ಖಚಿತವಾಗಿಲ್ಲ. 

ಪಂಜ್ ಶೀರ್ ನಲ್ಲಿ ತಾಲಿಬಾನ್‌ಗೆ ದೊಡ್ಡ ಹಿನ್ನಡೆ, ಭಾರಿ ಸಾವುನೋವು: ವರದಿ
ಇನ್ನು ಪಂಜಶೀರ್ ನ ಹೋರಾಟಗಾರರು ತಾಲಿಬಾನ್‌ಗೆ ಕಠಿಣ ಪ್ರತಿಸವಾಲು ಒಡ್ಡುತ್ತಿದ್ದು,  ಇಡೀ ಆಫ್ಘಾನಿಸ್ತಾನವನ್ನು ವಶಪಡಿಸಿಕೊಂಡಿರುವ ತಾಲಿಬಾನಿಗಳಿಗೆ ದೊಡ್ಡ ಸವಾಲಾಗಿದೆ. ಮೂಲಗಳ ಪ್ರಕಾರ ಪಂಜ್ ಶೀರ್ ಅನ್ನು ಶತಾಯಗತಾಯ ವಶಕ್ಕೆ ಪಡೆಯಲೇಬೇಕು ಎಂದು ನುಗ್ಗಿದ್ದ ಬೃಹತ್ ತಾಲಿಬಾನ್ ಪಡೆಯಲ್ಲಿ ತೀವ್ರ ಸಾವುನೋವುಗಳು ಸಂಭವಿಸಿದೆ ಎಂದು  ಹೇಳಲಾಗಿದೆ. ಪ್ರಮುಖವಾಗಿ ಪಂಜಶೀರ್ ನಲ್ಲಿ ತಾಲಿಬಾನ್ ವಿರುದ್ಧ ನಿರ್ಮಿಸಲಾಗಿದ್ದ ಬ್ಯಾರಿಕೇಡ್ ಅನ್ನು ಹತ್ತಿಕ್ಕಲು ತಾಲಿಬಾನ್ ತನ್ನ ಸುಮಾರು 3000 ಹೋರಾಟಗಾರರನ್ನು ಕಳುಹಿಸಿದೆ. ಆದರೆ ತಾಲಿಬಾನ್ ಪಡೆಗಳು ಆಗಮಿಸುತ್ತಿದ್ದಂತೆಯೇ ತಾಲಿಬಾನ್ ವಿರೋಧಿ ಹೋರಾಟಗಾರರು ರಸ್ತೆಗಳನ್ನು ಬಂದ್ ಮಾಡಿ ಗೆರಿಲ್ಲಾ ಮಾದರಿಯಲ್ಲಿ ಅವರ ಮೇಲೆ ಗುಂಡಿನ ಸುರಿಮಳೆಯನ್ನೇ ಮಾಡಿದ್ದಾರೆ. ಪರಿಣಾಮ ತಾಲಿಬಾನ್ ನೂರಾರು ಬಂಡುಕೋರರು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ. 

ಅಲ್ಲದೆ ತಾಲಿಬಾನ್ ವಿರೋಧಿ ಪಡೆಗಳ ದಾಳಿಗೆ ಪರಾರಿಯಾಗಲೂ ಸಾಧ್ಯವಿಲ್ಲದೇ ತಾಲಿಬಾನಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಹೇಳಲಾಗಿದೆ.  ಪಂಜಶೀರ್ ಕಡೆಗೆ ಹೋಗುವ ಅಂದ್ರಾಬ್ ಕಣಿವೆಯಲ್ಲಿ ತಾಲಿಬಾನ್ ಮತ್ತು ರೆಸಿಸ್ಟೆನ್ಸ್ ಫೋರ್ಸ್ ನಡುವೆ ಗುಂಡಿನ ಚಕಮಕಿ ನಡೆದಿದೆ. ಈ ಹೋರಾಟದಲ್ಲಿ ತಾಲಿಬಾನಿಗಳು ಸಾಕಷ್ಟು ತೊಂದರೆ ಅನುಭವಿಸಿದ್ದಾರೆ. ಅಹ್ಮದ್ ಮಸೂದ್ ನೇತೃತ್ವದ ರೆಸಿಸ್ಟೆನ್ಸ್ ಫೋರ್ಸ್, ತಾಲಿಬಾನ್ ಜೊತೆ ಕಠಿಣ ಹೋರಾಟ ನಡೆಸುತ್ತಿದೆ. ಇದಕ್ಕೆ ಇಂಬು ನೀಡುವಂತೆ ಪಂಜ್‌ಶಿರ್ ಹೋರಾಟಗಾರರು ಹೆಚ್ಚಿನ ಸಂಖ್ಯೆಯ ತಾಲಿಬಾನಿಗಳನ್ನು ಕೊಂದಿರುವುದಾಗಿ ಹೇಳಿಕೊಂಡಿದ್ದಾರೆ. ಈ ದಾಳಿಯಲ್ಲಿ ತಾಲಿಬಾನ್‌ಗಳು ಸಾಕಷ್ಟು ತೊಂದರೆ ಅನುಭವಿಸಿದ್ದು, ದೊಡ್ಡ ಪ್ರಮಾಣದಲ್ಲೇ ಸಾವು-ನೋವು ಸಂಭವಿಸಿದೆ ಎಂದು ಹೇಳಲಾಗಿದೆ. 

ಸರಬರಾಜು ಮಾರ್ಗವನ್ನೂ ನಿರ್ಬಂಧಿಸಲಾಗಿದೆ
ಮಾಹಿತಿಯ ಪ್ರಕಾರ, ಕರಿ ಫಾಸಿಹುದ್ ದಿನ್ ಹಫೀಜುಲ್ಲಾ ನೇತೃತ್ವದಲ್ಲಿ ಪಂಜಿಶೀರ್ ಮೇಲೆ ದಾಳಿ ಮಾಡಲು ತಾಲಿಬಾನ್ ನೂರಾರು ಭಯೋತ್ಪಾದಕರನ್ನು ಕಳುಹಿಸಿತ್ತು, ಬಾಗ್ಲಾನ್ ಪ್ರಾಂತ್ಯದ ಅಂದ್ರಾಬ್ ಕಣಿವೆಯಲ್ಲಿ ಹೊಂಚು ಹಾಕಿದ್ದ ಪಂಜಶೀರ್ ದಂಗೆಕೋರರು ಅವರ ಮೇಲೆ ದಾಳಿ ಮಾಡಿದರು. ಈ ದಾಳಿಯಲ್ಲಿ ಹೆಚ್ಚಿನ ಸಂಖ್ಯೆಯ ತಾಲಿಬಾನ್ ಹೋರಾಟಗಾರರು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಕಾರಣದಿಂದಾಗಿ ತಾಲಿಬಾನ್‌ನ ಸರಬರಾಜು ಮಾರ್ಗವನ್ನು ಸಹ ನಿರ್ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.

ಅಮರುಲ್ಲಾ ಸಲೇಹ್ ಟ್ವೀಟ್
ಅದೇ ಸಮಯದಲ್ಲಿ, ಅಫ್ಘಾನಿಸ್ತಾನದ ಉಪಾಧ್ಯಕ್ಷ ಅಮರುಲ್ಲಾ ಸಲೇಹ್ ಕೂಡ ಈ ದಾಳಿಯ ಕುರಿತು ಟ್ವೀಟ್ ಮಾಡಿದ್ದು, ತಾಲಿಬ್‌ಗಳು ಅಂದ್ರಾಬ್ ಕಣಿವೆಯ ಅಂಬುಷ್ ವಲಯದಲ್ಲಿ ಹೊಂಚುದಾಳಿಯಲ್ಲಿ ಸಿಕ್ಕಿಬಿದ್ದ ಒಂದು ದಿನದ ನಂತರ ಪಂಜಶೀರ್ ಪ್ರವೇಶದ್ವಾರದ ಬಳಿ ಪಡೆಗಳನ್ನು ಒಟ್ಟುಗೂಡಿಸಿದರು. ಸಲಾಂಗ್ ಹೆದ್ದಾರಿಯನ್ನು ಪ್ರತಿರೋಧದ ಬಲದಿಂದ ಮುಚ್ಚಲಾಗಿದೆ. ಅವರು ತಪ್ಪಿಸಬೇಕಾದ ಮಾರ್ಗಗಳು ಇವು, ಮತ್ತೆ ಸಿಗೋಣ... ಎಂದು ಬರೆದಿದ್ದಾರೆ
 
ತಾಲಿಬಾನ್ ಗೆ ಆಡಳಿತ ನೀಡುವುದಿಲ್ಲ
ತಾಲಿಬಾನ್ ಅಫ್ಘಾನಿಸ್ತಾನದ ಮೇಲೆ ಹಿಡಿತ ಸಾಧಿಸಿದಾಗಿನಿಂದ, ಬಂಡುಕೋರರು ಪಂಜಶೀರ್ ಕಣಿವೆಯಲ್ಲಿ ಸೇರಲು ಆರಂಭಿಸಿದರು. ಪಂಜ್ ಶೀರ್ ನಾಯಕ ಅಹ್ಮದ್ ಶಾ ಮಸೂದ್ ಅವರ 32 ವರ್ಷದ ಮಗ ಅಹ್ಮದ್ ಶಾ ಅವರು ತಮ್ಮ ವ್ಯಾಪ್ತಿಯ ಪ್ರದೇಶಗಳನ್ನು ತಾಲಿಬಾನ್ ಗೆ ಹಸ್ತಾಂತರಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com