'ಪಿಎನ್ ಬಿ' ವಂಚನೆ ಪ್ರಕರಣ: ಮೆಹುಲ್ ಚೋಕ್ಸಿಗೆ ಡೊಮೆನಿಕಾ ಕೋರ್ಟ್ ಜಾಮೀನು ನಿರಾಕರಣೆ

ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ ಸಾವಿರಾರು ಕೋಟಿ ವಂಚಿಸಿ ವಿದೇಶಕ್ಕೆ ಪರಾರಿಯಾಗಿದ್ದ ಉದ್ಯಮಿ ಮೆಹುಲ್ ಚೋಕ್ಸಿಯ ಜಾಮೀನು ಅನ್ನು ಡೊಮೆನಿಕಾ ಕೋರ್ಟ್ ನಿರಾಕರಿಸಿದೆ.
ಮೆಹುಲ್ ಚೋಕ್ಸಿ
ಮೆಹುಲ್ ಚೋಕ್ಸಿ

ನವದೆಹಲಿ: ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ ಸಾವಿರಾರು ಕೋಟಿ ವಂಚಿಸಿ ವಿದೇಶಕ್ಕೆ ಪರಾರಿಯಾಗಿದ್ದ ಉದ್ಯಮಿ ಮೆಹುಲ್ ಚೋಕ್ಸಿಯ ಜಾಮೀನು ಅನ್ನು ಡೊಮೆನಿಕಾ ಕೋರ್ಟ್ ನಿರಾಕರಿಸಿದೆ.

ಆಂಟಿಗುವಾದಿಂದ ಡೊಮಿನಿಕಾಕ್ಕೆ ಅಕ್ರಮವಾಗಿ ನುಸುಳಿರುವ ಬಗ್ಗೆ ಡೊಮಿನಿಕಾ ಕೋರ್ಟ್​​ನಲ್ಲಿ ಬುಧವಾರ ವಿಚಾರಣೆ ನಡೆದಿತ್ತು. ಈ ಪ್ರಕರಣ ಸಂಬಂಧ ಅವರಿಗೆ ಜಾಮೀನು ನಿರಾಕರಿಸಿದೆ ಎಂದು ಅವರ ವಕೀಲ ವಿಜಯ್ ಅಗರ್ವಾಲ್ ಗುರುವಾರ ತಿಳಿಸಿದ್ದಾರೆ. ಅಂತೆಯೇ ಮೆಹುಲ್ ಚೋಕ್ಸಿಯನ್ನು ಭಾರತಕ್ಕೆ  ಗಡಿಪಾರು ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ಮತ್ತೊಂದು ವಿಚಾರಣೆ ಕೂಡ ನಡೆಯಲಿದ್ದು, ಈ ವಿಚಾರಣೆಗೆ ಚೋಕ್ಸಿ ಕೂಡ ಹಾಜರಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಚೋಕ್ಸಿ ನಿನ್ನೆ ಕಾರಿನಲ್ಲಿ ಬಂದು, ವೀಲ್​ಚೇರ್​ ನಲ್ಲೇ ಕೋರ್ಟ್​​ನೊಳಗೆ ಹೋಗಿದ್ದಾರೆ. ಇಂದೂ ಕೂಡ ತಮ್ಮ ತಪ್ಪನ್ನು ಚೋಕ್ಸಿ ಒಪ್ಪಿಕೊಳ್ಳದೆ ಹೋದರೆ ಪ್ರತ್ಯೇಕ ವಿಚಾರಣೆ ಶುರುವಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಕಳೆದ ಮೇ 23 ರಂದು ಊಟಕ್ಕೆಂದು ಹೊರಟಿದ್ದ ಮೆಹುಲ್ ಚೋಕ್ಸಿ ಆಂಟಿಗುವಾದಿಂದ ನಾಪತ್ತೆಯಾಗಿದ್ದರು. ಬಳಿಕ ಆಂಟಿಗುವಾ ಪೊಲೀಸರು ಚೋಕ್ಸಿಗಾಗಿ ತೀವ್ರ ಶೋಧ ನಡೆಸಿದ್ದರು. ಈ ವೇಳೆ ಚೋಕ್ಸಿ ಡೊಮೆನಿಕಾದಲ್ಲಿ ಬಂಧನಕ್ಕೀಡಾಗಿದ್ದರು. ಡೊಮೆನಿಕಾಗೆ ಅಕ್ರಮವಾಗಿ ಪ್ರವೇಶ ಮಾಡಿದ ಆರೋಪದ ಮೇಲೆ  ಅವರನ್ನು ಬಂಧಿಸಲಾಗಿತ್ತು ಎನ್ನಲಾಗಿದೆ.

ಅಪಹರಿಸಲಾಗಿತ್ತೇ ಹೊರತು, ಸ್ವಯಂ ಪ್ರೇರಿತರಾಗಿ ಡೊಮೆನಿಕಾಗೆ ಬಂದಿಲ್ಲ: ವಕೀಲರ ವಾದ
ಇದೇ ವೇಳೆ ಡೊಮಿನಿಕನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ವಾದ ಮಂಡಿಸಿದ ಚೋಕ್ಸಿ ಪರ ವಕೀಲರು ಚೋಕ್ಸಿ ಅವರನ್ನು ಅಪಹರಣ ಮಾಡಲಾಗಿತ್ತು. ಅವರು ಸ್ವಯಂ ಪ್ರೇರಿತರಾಗಿ ಡೊಮೆನಿಕಾಗೆ ಬಂದಿಲ್ಲ ಎಂದು ವಾದ ಮಂಡಿಸಿದರು. ಆದರೆ ಈ ವಾದಗಳನ್ನು ಆಲಿಸಿದ ಡೊಮಿನಿಕನ್ ನ್ಯಾಯಾಧೀಶ ಬರ್ನಿ  ಸ್ಟೀಫನ್ಸನ್ ಜಾಮೀನು ನಿರಾಕರಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com