'ಸ್ನೇಹಿತೆ ಬಾಬರಾ ಇಂಡಿಯನ್ ಎಜೆಂಟ್' ಎಂದ ವಜ್ರದ ವ್ಯಾಪಾರಿ; ಚೋಕ್ಸಿ ಹಕ್ಕುಗಳನ್ನು ಗೌರವಿಸಲಾಗುವುದು: ಡೊಮಿನಿಕಾ ಪಿಎಂ

ವಜ್ರದ ವ್ಯಾಪಾರಿ ಮೆಹುಲ್ ಚೋಕ್ಸಿಯ ಭಾರತೀಯ ನಾಗರಿಕ ಹಕ್ಕುಗಳನ್ನು ಗೌರವಿಸಲಾಗುವುದು, ಮುಂದಿನ ಕ್ರಮಗಳ ಬಗ್ಗೆ ನ್ಯಾಯಾಲಯ ನಿರ್ಧರಿಸಲಿದೆ ಎಂದು ಡೊಮಿನಿಕಾದ ಪ್ರಧಾನಿ ರೂಸ್ ವೆಲ್ಟ್ ಸ್ಕೆರಿಟ್ ಹೇಳಿದ್ದಾರೆ.
ಮೆಹುಲ್ ಚೋಕ್ಸಿ
ಮೆಹುಲ್ ಚೋಕ್ಸಿ
Updated on

ನವದೆಹಲಿ: ವಜ್ರದ ವ್ಯಾಪಾರಿ ಮೆಹುಲ್ ಚೋಕ್ಸಿಯ ಭಾರತೀಯ ನಾಗರಿಕ ಹಕ್ಕುಗಳನ್ನು ಗೌರವಿಸಲಾಗುವುದು, ಮುಂದಿನ ಕ್ರಮಗಳ ಬಗ್ಗೆ ನ್ಯಾಯಾಲಯ ನಿರ್ಧರಿಸಲಿದೆ ಎಂದು ಡೊಮಿನಿಕಾದ ಪ್ರಧಾನಿ ರೂಸ್ ವೆಲ್ಟ್ ಸ್ಕೆರಿಟ್ ಹೇಳಿದ್ದಾರೆ.

 13,500 ಕೋಟಿ ಬ್ಯಾಂಕ್ ವಂಚನೆ ಕೇಸ್ ನಲ್ಲಿ ಭಾರತಕ್ಕೆ ಬೇಕಾಗಿರುವ ಚೋಕ್ಸಿ, ಮೇ 23 ರಂದು ಆಂಟಿಗುವಾ ಮತ್ತು ಬರ್ಬುಡಾದಿಂದ ಕಣ್ಮರೆಯಾದ ನಂತರ ದ್ವೀಪ ರಾಷ್ಟ್ರ ಕೆರಿಬಿಯನ್ ನಲ್ಲಿ ಬಂಧಿಸಲಾಗಿತ್ತು. ಈ ಬಂಧನ ಕುರಿತಂತೆ ಇದೇ ಮೊದಲ ಬಾರಿಗೆ ಸಾರ್ವಜನಿಕವಾಗಿ ಮಾತನಾಡಿರುವ ಡೊಮಿನಿಕಾ ಪ್ರಧಾನಿ ಸ್ಕೆರಿಟ್, ಮೆಹುಲ್ ಚೋಕ್ಸಿಯ ಹಕ್ಕುಗಳನ್ನು ಗೌರವಿಸಲಾಗುವುದು ಎಂದಿದ್ದಾರೆ.

ಮೆಹುಲ್ ಚೋಕ್ಸಿ ಭಾರತೀಯ ಪೌರತ್ವ ಕುರಿತ ವಿಚಾರ ನ್ಯಾಯಾಲಯದ ಮುಂದಿದೆ. ಸಂಭಾವಿತ ವ್ಯಕ್ತಿಗೆ ಏನಾಗುತ್ತದೆ ಎಂದು ನ್ಯಾಯಾಲಯ ನಿರ್ಧರಿಸುತ್ತದೆ ಮತ್ತು ನ್ಯಾಯಾಲಯದಲ್ಲಿ ಪ್ರಕ್ರಿಯೆಯನ್ನು ಮುಂದುವರಿಸಲು ನಾವು ಅವಕಾಶ ನೀಡುತ್ತೇವೆ. ಈ ವಿಷಯಗಳಲ್ಲಿ ಸಾರ್ವಜನಿಕ ಹೇಳಿಕೆಗಳನ್ನು ನೀಡುವ ಮೂಲಕ ನಾನು ಇದರಲ್ಲಿ ತೊಡಗಿಸಿಕೊಳ್ಳಲು ಇಷ್ಟಪಡುವುದಿಲ್ಲ. ನಾವು ನಮ್ಮ ಸ್ವಂತ ದೇಶದ ಭಾಗವಾಗಿದ್ದು, ಈ ಸಂಬಂಧ ನಮ್ಮ ಕರ್ತವ್ಯಗಳು ಮತ್ತು ಜವಾಬ್ದಾರಿಗಳನ್ನು ಮಾತ್ರ  ಗುರಿತಬೇಕು ಎಂದು ಸ್ಕೆರಿಟ್ ಹೇಳಿರುವುದಾಗಿ ವೆಬ್ ಸೈಟ್ ಒಂದು ವರದಿ ಮಾಡಿದೆ.

2018ರಿಂದಲೂ ಆಂಟಿಗುವಾ ಮತ್ತು ಬರ್ಬುಡಾದ ನಾಗರಿಕನಾಗಿ ವಾಸಿಸುತ್ತಿದ್ದ ಚೋಕ್ಸಿ,ಮೇ 23 ರಂದು ನಿಗೂಢ ರೀತಿಯಲ್ಲಿ ಕಣ್ಮರೆಯಾಗಿದ್ದ. ತನ್ನ ಗೆಳತಿಯೊಂದಿಗೆ ಪರಾರಿಯಾಗಲು ಯತ್ನಿಸಿದ ನಂತರ ಅಕ್ರಮ ಪ್ರವೇಶದ ಕಾರಣದ ಹಿನ್ನೆಲೆಯಲ್ಲಿ ನೆರೆಯ ದ್ವೀಪರಾಷ್ಟ್ರ ಡೊಮಿನಿಕಾದಲ್ಲಿ ಆತನನ್ನು ಬಂಧಿಸಲಾಗಿತ್ತು. ಆಂಟಿಗುವಾದ ಜಾಲಿ ಹಾರ್ಬರ್‌ನಿಂದ ಆಂಟಿಗುವಾ ಮತ್ತು ಭಾರತೀಯರಂತೆ ಕಾಣುವ ಪೊಲೀಸರು ಆತನನ್ನು ಅಪಹರಿಸಿ ದೋಣಿಯಲ್ಲಿ ಡೊಮಿನಿಕಾಗೆ ಕರೆತಂದರು ಎಂದು ಚೋಕ್ಸಿ ಪರ  ವಕೀಲರು ಆರೋಪಿಸಿದ್ದಾರೆ.

ಅಕ್ರಮ ಪ್ರವೇಶದ ಆರೋಪಗಳಿಗೆ ಉತ್ತರಿಸಲು ಡೊಮಿನಿಕಾ ಹೈಕೋರ್ಟ್‌ನ ಆದೇಶದ ಮೇರೆಗೆ ಮೆಹುಲ್ ನನ್ನು ರೋಸೌ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಯಿತು, ಅಲ್ಲಿ ಅವರು ತಪ್ಪಿತಸ್ಥರೆಂದು ಒಪ್ಪಿಕೊಂಡರು ಆದರೆ ಜಾಮೀನು ನಿರಾಕರಿಸಿದರು. ಭಾರತಕ್ಕೆ ಚೋಕ್ಸಿಯನ್ನು ಗಡಿಪಾರು ಪ್ರಯತ್ನಕ್ಕಾಗಿ ಭಾರತೀಯ ಅಧಿಕಾರಿಗಳನ್ನೊಳಗೊಂಡ ತಂಡವೊಂದು ಡೊಮಿನಿಕಾಗೆ ತೆರಳಿತ್ತು. ಆದರೆ, ಹೈಕೋರ್ಟ್ ಈ ವಿಚಾರಣೆಯನ್ನು ಮುಂದೂಡಿದ್ದರಿಂದ ವಾಪಸ್ಸಾದರು.

ಆಂಟಿಗುವಾ, ಭಾರತೀಯರಂತೆ ಕಾಣುತ್ತಿದ್ದ ಪೊಲೀಸರಿಂದ ತನ್ನ ಅಪಹರಣವಾಗಿರುವುದಾಗಿ ಹೇಳಿರುವ ಚೋಕ್ಸಿ, ಇದರಲ್ಲಿ ತನ್ನ ಸ್ನೇಹಿತೆ ಬಾಬರಾ ಜಬರಿಕಾ  ಪಾತ್ರವಿದೆ ಎಂದು ಆರೋಪಿಸಿದ್ದಾರೆ. ಚೋಕ್ಸಿಯಿಂದ ದೂರು ಸ್ವೀಕರಿಸಿದ ನಂತರ ಪೊಲೀಸರು ವಿಚಾರಣೆ ಆರಂಭಿಸಿದ್ದಾರೆ ಎಂದು ಆಂಟಿಗುವಾ ಪ್ರಧಾನ ಮಂತ್ರಿ ಗ್ಯಾಸ್ಟನ್ ಬ್ರೌನ್ ಹೇಳಿದ್ದಾರೆ.

ಆಂಟಿಗುವಾದ ಮಾರಿನಾದಲ್ಲಿರುವ ಜಬರಿಕಾಳ  ಮನೆಗೆ ಮೇ 23 ಸಂಜೆ 5 ಗಂಟೆಗೆ ಹೋದಾಗ ಆಕೆ ನನಗೆ ಕುಡಿಯಲು ವೈನ್ ನೀಡಿ ಅದನ್ನು ಕುಡಿದ ಬಳಿಕ ಹೊರಗೆ ಹೋಗೋಣ ಎಂದು ಹೇಳಿದರು. ನಾವಿಬ್ಬರು ಮಾತನಾಡುತ್ತಿದ್ದಾಗಲೇ ಮನೆ ಬಾಗಿಲ ಬಳಿಗೆ 8 ರಿಂದ 10 ಮಂದಿ ಬಂದು ನನಗೆ ಮಾರಣಾಂತಿಕವಾಗಿ ಥಳಿಸಿದರು. ಬಳಿಕ ನನ್ನ ರೋಲೆಕ್ಸ್ ವಾಚ್ ಮತ್ತು ವಾಲೆಟ್ ಅನ್ನು ಕಸಿದುಕೊಂಡರು. ಬಳಿಕ ನನ್ನ ಕೈಗಳನ್ನು ಕಟ್ಟಿ, ಮುಖಕ್ಕೆ ಮಾಸ್ಕ್ ಹಾಕಿ ನನ್ನ ಕಣ್ಣಿಗೆ ಬಟ್ಟೆ ವೀಲ್ ಚೇರ್ ನಲ್ಲಿ ಕೂರಿಸಿಕೊಂಡು ವಾಹನವೊಂದರಲ್ಲಿ ಕರೆದೊಯ್ದರು. ಆ ಹೊತ್ತಿಗಾಗಲೇ ನಾನು ಪ್ರಜ್ಞಾ ಹೀನ ಸ್ಥಿತಿ ತಲುಪಿದ್ದೆ. ಕೊಂಚ ಸಮಯದ ಬಳಿಕ ಬೋಟ್ ನಲ್ಲಿ ಕರೆದೊಯ್ದರು. 

ಬೋಟ್ ನಲ್ಲಿ ನನ್ನ ಮುಖವಾಡ ತೆಗೆದರು.ಬಳಿಕ ನಾನು ಎಲ್ಲಿಗೆ ಕರೆದೊಯ್ಯಿತ್ತಿದ್ದೀರಿ ಎಂದು ಕೇಳಿದಾಗ ಅವರು ನಿರ್ಲಕ್ಷ್ಯದ ಉತ್ತರಗಳನ್ನು ನೀಡಿ ನನಗೆ ಮೌನವಾಗಿರುವಂತೆ ಎಚ್ಚರಿಕೆ ನೀಡಿದರು, ನನಗೆ ಚಾಕು ತೋರಿಸಿ ಬೆದರಿಕೆ ಹಾಕಿದರು. ಹೀಗಾಗಿ ನಾನು ಸಂದರ್ಭದಲ್ಲಿ ನಾನು ಮೌನಕ್ಕೆ ಶರಣಾಗಿದ್ದೆ ಎಂದು ಚೋಕ್ಸಿ ಹೇಳಿದ್ದಾನೆ. 

ಬಳಿಕ  ಭಾರತ ಮತ್ತು ವಿಂಡೀಸ್ ಮೂಲದ ಇಬ್ಬರು ವ್ಯಕ್ತಿಗಳು ಕಾಣಿಸಿಕೊಂಡರು. ಈ ಪೈಕಿ ಭಾರತ ಮೂಲದ ನರೀಂದರ್ ಸಿಂಗ್ ಎಂಬಾತ ತಾನು ನನ್ನ ಪ್ರಕರಣದ ಉಸ್ತುವಾರಿ ಏಜೆಂಟ್ ಎಂದು ಪರಿಚಯಿಸಿಕೊಂಡ. ಉನ್ನತ ಶ್ರೇಣಿಯ ಭಾರತೀಯ ರಾಜಕಾರಣಿ ಗೆ ಸಂದರ್ಶನ ನೀಡಲು ನನ್ನನ್ನು ಈ ಸ್ಥಳಕ್ಕೆ  ಕರೆತರಲಾಗಿದೆ ಎಂದು ನನಗೆ ತಿಳಿಸಲಾಯಿತು. ಅಂತೆಯೇ ನನ್ನನ್ನು ಭಾರತಕ್ಕೆ ವಾಪಸ್ ಕಳುಹಿಸಲಾಗುತ್ತದೆ ಎಂದು ಅವರು ಹೇಳಿದರು ಎಂದು ಚೋಕ್ಸಿ ಹೇಳಿಕೊಂಡಿದ್ದಾರೆ.

ತದನಂತರ ಧೀರ್ಘ ಹೊತ್ತು ಕಾಯಿಸಿದ ನಂತರ ಇಂಟರ್ ಫೋಲ್ ನೋಟಿಸ್ ಹಿನ್ನೆಲೆಯಲ್ಲಿ ಬಂಧಿಸಿರುವುದಾಗಿ ಕರಾವಳಿ ಭದ್ರತಾ ಸಿಬ್ಬಂದಿ ಜೊತೆಗಿದ್ದ ಡೊಮಿನಿಕಾ ಮುಖ್ಯ ಪೊಲೀಸರು ಮಾಹಿತಿ ನೀಡಿದರು. ಬಂದರಿನಲ್ಲಿ ಸೆಂಟ್ರಲ್ ಪೊಲೀಸ್ ಠಾಣೆ ವಶಕ್ಕೆ ನೀಡಲಾಯಿತು. ತನ್ನ ವಕೀಲರಿಗೂ ಕರೆ ಮಾಡಲು ಅವಕಾಶ ನೀಡಲಿಲ್ಲ, ಬಟ್ಟೆ ಬದಲಿಸಲು ನಿರಾಕರಿಸಲಾಯಿತು. ಪೊಲೀಸ್ ಠಾಣೆಯಲ್ಲಿ ವೈದ್ಯಕೀಯ ಚಿಕಿತ್ಸೆಯನ್ನು ಸಹ ನಿರಾಕರಿಸಲಾಯಿತು ಎಂದು ಮೆಹುಲ್ ಚೋಕ್ಸಿ ಹೇಳಿಕೊಂಡಿದ್ದಾನೆ.
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com