ಏರ್ ಇಂಡಿಯಾ ಕುರಿತು ಸರ್ಕಾರ ಇದುವರೆಗೂ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ: ಪಿಯೂಷ್ ಗೋಯಲ್
ದುಬೈ: ಏರ್ ಇಂಡಿಯಾ ಕುರಿತು ಕೇಂದ್ರ ಸರ್ಕಾರ ಇನ್ನೂ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಮತ್ತು ಬಿಡ್ ನ ಅಂತಿಮ ವಿಜೇತರನ್ನು ಉತ್ತಮವಾದ ಪ್ರಕ್ರಿಯೆಯ ಮೂಲಕ ಆಯ್ಕೆ ಮಾಡಲಾಗುವುದು ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಅವರು ಶನಿವಾರ ಹೇಳಿದ್ದಾರೆ.
"ನಾನು ಹಿಂದಿನ ದಿನದಿಂದ ದುಬೈನಲ್ಲಿದ್ದೇನೆ. ಹೀಗಾಗಿ ಏರ್ ಇಂಡಿಯಾ ಕುರಿತು ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಎಂದು ನಾನು ಭಾವಿಸುತ್ತೇನೆ. ಖಂಡಿತವಾಗಿಯೂ ಬಿಡ್‌ಗಳನ್ನು ಆಹ್ವಾನಿಸಲಾಗಿದೆ ಮತ್ತು ಅದನ್ನು ಅಧಿಕಾರಿಗಳು ಮೌಲ್ಯಮಾಪನ ಮಾಡುತ್ತಾರೆ ಮತ್ತು ಸರಿಯಾದ ಸಮಯದಲ್ಲಿ ಬಿಡ್ ನ ಅಂತಿಮ ವಿಜೇತರನ್ನು ಆಯ್ಕೆ ಮಾಡಲಾಗುವುದು" ಎಂದು ಗೋಯಲ್ ದುಬೈನಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಟಾಟಾ ಸಂಸ್ಥೆಯು ಸಾಲದ ಹೊರೆ ಹೊತ್ತಿರುವ ಏರ್ ಇಂಡಿಯಾವನ್ನು ಸ್ವಾಧೀನಪಡಿಸಿಕೊಳ್ಳಲು ಅಗ್ರ ಬಿಡ್ಡರ್ ಆಗಿ ಹೊರಹೊಮ್ಮಿದೆ ಎಂದು ಮಾಧ್ಯಮ ವರದಿಗಳ ಕುರಿತ ಪ್ರಶ್ನೆಗೆ, ಆ ಬಗ್ಗೆ ಇನ್ನೂ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಎಂದರು.
ಈ ಮಧ್ಯೆ, ಏರ್ ಇಂಡಿಯಾ ಖಾಸಗೀಕರಣದ ಹೊಣೆ ಹೊತ್ತಿರುವ ಹೂಡಿಕೆ ಮತ್ತು ಸಾರ್ವಜನಿಕ ಆಸ್ತಿ ನಿರ್ವಹಣೆ(ಡಿಐಪಿಎಎಂ) ಇಲಾಖೆ ಕಾರ್ಯದರ್ಶಿ ತುಹಿನ್ ಕಾಂತಾ ಪಾಂಡೆ ಶುಕ್ರವಾರ ಟ್ವೀಟ್ ಮಾಡಿದ್ದು, ಏರ್ ಇಂಡಿಯಾ ಕುರಿತಂತೆ ಕೇಂದ್ರ ಸರ್ಕಾರ ಇನ್ನೂ ಯಾವುದೇ ಹಣಕಾಸಿನ ಬಿಡ್ ಅನುಮೋದಿಸಿಲ್ಲ ಎಂದು ಹೇಳಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ