ಸಾವಿನ ವದಂತಿ ನಿರಾಕರಿಸಿ ಆಡಿಯೋ ಬಿಡುಗಡೆ ಮಾಡಿದ ತಾಲಿಬಾನ್ ಸಹ ಸಂಸ್ಥಾಪಕ ಅಬ್ದುಲ್ ಘನಿ ಬರಾದರ್
ಕಾಬೂಲ್: ತಾಲಿಬಾನ್ ಸಹ ಸಂಸ್ಥಾಪಕ ಮತ್ತು ಅಫ್ಘಾನಿಸ್ತಾನದ ಇದೀಗ ಉಪ ಪ್ರಧಾನಿ ಅಬ್ದುಲ್ ಘನಿ ಬರಾದರ್ ಸಾವನ್ನಪ್ಪಿರಬೇಕು ಎಂಬಂತಹ ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇಂತಹ ಸುದ್ದಿಗಳ ನಂತರ ಸೋಮವಾರ ಆಡಿಯೋವೊಂದನ್ನು ಬಿಡುಗಡೆ ಮಾಡಿರುವ ಘನಿ, ತಾನು ಜೀವಂತಾಗಿದ್ದು, ಚೆನ್ನಾಗಿರುವುದಾಗಿ ಹೇಳಿದ್ದಾನೆ.
ತನ್ನ ಸಾವು ಕುರಿತ ವದಂತಿ ಸುಳ್ಳು ಪ್ರಚಾರ ಎಂದು ತಾಲಿಬಾನ್ ಫೋಸ್ಟ್ ಮಾಡಿರುವ ಆಡಿಯೋ ಸಂದೇಶದಲ್ಲಿ ಅಬ್ದುಲ್ ಘನಿ ಬರಾದರ್ ಆರೋಪಿಸಿದ್ದಾನೆ. ಅಧ್ಯಕ್ಷೀಯ ಅರಮನೆಯಲ್ಲಿ ತಾಲಿಬಾನ್ ವಿರೋಧಿಗಳ ನಡುವೆ ನಡೆದ ಗುಂಡಿನ ದಾಳಿಯಲ್ಲಿ ಅಬ್ದುಲ್ ಘನಿ ಬರಾದರ್ ಮಾರಣಾಂತಿಕವಾಗಿ ಗಾಯಗೊಂಡಿರುವುದಾಗಿ ವಿಶೇಷವಾಗಿ ಭಾರತದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವದಂತಿ ಹಬ್ಬಿತ್ತು.
ಕಳೆದ ಕೆಲ ರಾತ್ರಿಗಳಲ್ಲಿ ನಾನು ಪ್ರವಾಸದಲ್ಲಿದ್ದೆ, ಈ ಸಮಯದಲ್ಲಿ ನನ್ನ ಸಹೋದರರು, ಸ್ನೇಹಿತರೆಲ್ಲರೂ ಚೆನ್ನಾಗಿದ್ದೇವೆ, ಮಾಧ್ಯಮಗಳು ಯಾವಾಗಲೂ ಸುಳ್ಳು ಪ್ರಚಾರವನ್ನು ಪ್ರಕಟಿಸುತ್ತವೆ. ಆದ್ದರಿಂದ ಈ ಎಲ್ಲಾ ಸುಳ್ಳುಗಳನ್ನು ಧೈರ್ಯವಾಗಿ ತಿರಸ್ಕರಿಸಿ, ಶೇ. 100 ರಷ್ಟು ಅಂತಹ ಯಾವುದೇ ಸಮಸ್ಯೆಗಳಿಲ್ಲ, ನಮಗೆ ಯಾವುದೇ ತೊಂದರೆಯಿಲ್ಲ ಎಂದು ಬರಾದರ್ ಕ್ಲಿಪ್ ನಲ್ಲಿ ತಿಳಿಸಿದ್ದಾನೆ.
ಆಡಿಯೋ ಸಂದೇಶದ ನೈಜ್ಯತೆ ದೃಢಪಟ್ಟಿಲ್ಲ, ಆದರೆ, ಹೊಸ ಸರ್ಕಾರದ ರಾಜಕೀಯ ಕಚೇರಿಯ ವಕ್ತಾರ ಸೇರಿದಂತೆ ತಾಲಿಬಾನ್ ನ ಅಧಿಕೃತ ಖಾತೆಯಲ್ಲಿ ಇದನ್ನು ಫೋಸ್ಟ್ ಮಾಡಲಾಗಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ