ವಾಷಿಂಗ್ಟನ್ ತಲುಪಿದ ಪ್ರಧಾನಿ ಮೋದಿಗೆ ಭಾರತೀಯ ಸಮುದಾಯದ ಸ್ವಾಗತ; ಕ್ವಾಡ್ ಶೃಂಗಸಭೆ, ವಿಶ್ವಸಂಸ್ಥೆ ಸಭೆಯಲ್ಲಿ ಭಾಗಿ

ಮೂರು ದಿನಗಳ ಅಮೆರಿಕ ಪ್ರವಾಸ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ಸ್ಥಳೀಯ ಕಾಲಮಾನ ಪ್ರಕಾರ ಕಳೆದ ರಾತ್ರಿ ವಾಷಿಂಗ್ಟನ್ ಡಿಸಿಗೆ ಬಂದಿಳಿದಿದ್ದಾರೆ.
ವಾಷಿಂಗ್ಟನ್ ಗೆ ಬಂದಿಳಿದ ಪ್ರಧಾನಿ ನರೇಂದ್ರ ಮೋದಿ
ವಾಷಿಂಗ್ಟನ್ ಗೆ ಬಂದಿಳಿದ ಪ್ರಧಾನಿ ನರೇಂದ್ರ ಮೋದಿ

ವಾಷಿಂಗ್ಟನ್: ಮೂರು ದಿನಗಳ ಅಮೆರಿಕ ಪ್ರವಾಸ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ಸ್ಥಳೀಯ ಕಾಲಮಾನ ಪ್ರಕಾರ ಕಳೆದ ರಾತ್ರಿ ವಾಷಿಂಗ್ಟನ್ ಡಿಸಿಗೆ ಬಂದಿಳಿದಿದ್ದಾರೆ.

ವಾಷಿಂಗ್ಟನ್ ಡಿಸಿಯಲ್ಲಿನ ಜಾಯಿಂಟ್ ಬೇಸ್ ಆಂಡ್ರ್ಯೂಸ್ ನಲ್ಲಿ ಅಮೆರಿಕ ರಾಜ್ಯ ಇಲಾಖೆ ಅಧಿಕಾರಿಗಳು ಪ್ರಧಾನಿ ಮೋದಿಯವರನ್ನು ಬರಮಾಡಿಕೊಂಡರು. ಭಾರತದ ಅಮೆರಿಕ ರಾಯಭಾರಿ ತರಂಜಿತ್ ಸಿಂಗ್ ಸಂಧು, ಬ್ರಿಗೇಡಿಯರ್ ಅನೂಪ್ ಸಿಂಘಾಲ್, ಏರ್ ಕಮಾಂಡರ್ ಅಂಜನ್ ಭದ್ರ ಮತ್ತು ನೌಕಾ ಅಟ್ಯಾಚ್ ಕಮೋಡೋರ್ ನಿರ್ಭಯಾ ಬಪ್ನಾ ಸೇರಿದಂತೆ ರಕ್ಷಣಾ ಅಧಿಕಾರಿಗಳು ಉಪಸ್ಥಿತರಿದ್ದರು.

ಅವರ ಭೇಟಿಯ ಸಮಯದಲ್ಲಿ, ಕ್ವಾಡ್ ಲೀಡರ್ಸ್ ಶೃಂಗಸಭೆಯಲ್ಲಿ ಭಾಗವಹಿಸುತ್ತಾರೆ, ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ಭಾಗವಹಿಸಿದ ನಂತರ ಶ್ವೇತಭವನದಲ್ಲಿ ಅಮೆರಿಕ ಅಧ್ಯಕ್ಷ ಜೊ ಬೈಡನ್ ಜೊತೆ ದ್ವಿಪಕ್ಷೀಯ ಸಭೆ ನಡೆಸಲಿದ್ದಾರೆ.

ಪ್ರಧಾನಿ ಸ್ವಾಗತಿಸಿದ ಭಾರತೀಯ ಸಮುದಾಯ: ಭಾರತೀಯ ಸಮುದಾಯದ ನೂರಕ್ಕೂ ಹೆಚ್ಚು ಸದಸ್ಯರು ಪ್ರಧಾನಿ ಮೋದಿಯವರನ್ನು ಸ್ವಾಗತಿಸಲು ವಿಮಾನ ನಿಲ್ದಾಣದಲ್ಲಿ ಜಮಾಯಿಸಿದರು. ಪಿಎಂ ಮೋದಿಯವರ ವಿಮಾನ ವಾಷಿಂಗ್ಟನ್‌ನಲ್ಲಿ ಇಳಿಯುತ್ತಿದ್ದಂತೆ, ಭಾರತೀಯ ವಲಸಿಗರ ಸದಸ್ಯರು ಹರ್ಷೋದ್ಗಾರ ಮಾಡಿದರು. ಮಳೆಯ ಹೊರತಾಗಿಯೂ, ಭಾರತೀಯ ವಲಸಿಗರು ಪ್ರಧಾನಿ ಮೋದಿಯವರ ಆಗಮನಕ್ಕಾಗಿ ತಾಳ್ಮೆಯಿಂದ ಕಾಯುತ್ತಿದ್ದರು.

ಬೋಯಿಂಗ್ 777 ವಿಮಾನ: ಸಾಮಾನ್ಯವಾಗಿ ದೆಹಲಿಯಿಂದ ವಾಷಿಂಗ್ಟನ್‌ಗೆ 12ರಿಂದ 15 ಗಂಟೆಯ ಪ್ರಯಾಣ ಮಾಡಬೇಕಾಗುತ್ತದೆ. ಹೀಗಾಗಿ ಈ ಮೊದಲು ಫ್ರಾಂಕ್‌ಫರ್ಟ್‌ನಲ್ಲಿ ಲ್ಯಾಂಡಿಂಗ್ ಆಗುತ್ತಿತ್ತು. ಜರ್ಮನಿಯ ಫ್ರಾಂಕ್‌ಫರ್ಟ್‌ನಲ್ಲಿ ಇಂಧನ ತುಂಬಿಸಿಕೊಳ್ಳಲಾಗುತ್ತಿತ್ತು.

ಪ್ರಧಾನಮಂತ್ರಿಯವರು ಇತ್ತೀಚೆಗೆ ಪರಿಚಯಿಸಿದ ಕಸ್ಟಮ್ ನಿರ್ಮಿತ ಬೋಯಿಂಗ್ 777 ವಿಮಾನದಲ್ಲಿ ಈ ಬಾರಿ ಅಮೆರಿಕಕ್ಕೆ ಪ್ರಯಾಣ ಬೆಳೆಸಿದರು. ಹೊಸ ಏರ್ ಇಂಡಿಯಾ ಒನ್ ಬೋಯಿಂಗ್ ವಿಮಾನದಿಂದಾಗಿ ಸಾಧ್ಯವಾಗಿದೆ. ಇದು ದೀರ್ಘಾವಧಿಯ ಹಾರಾಟದ ಸಾಮರ್ಥ್ಯ ಹೊಂದಿದೆ. ಮಾರ್ಗ ಮಧ್ಯೆ ಇಂಧನ ಮರುಭರ್ತಿಯ ಅಗತ್ಯ ಇರುವುದಿಲ್ಲ.

ಪ್ರಧಾನಿ ಮೋದಿಗಾಗಿ ಕಳೆದ ವರ್ಷ 4 ಸಾವಿರದ 500 ಕೋಟಿ ರೂಪಾಯಿ ವೆಚ್ಚದಲ್ಲಿ ಬೋಯಿಂಗ್ ವಿಮಾನ ಖರೀದಿ ಮಾಡಲಾಗಿತ್ತು. ಅಂದಹಾಗೆ, ಈ ವಿಮಾನದಲ್ಲಿ 2ನೇ ಬಾರಿಗೆ ಪ್ರಧಾನಿ ಮೋದಿ ವಿದೇಶ ಪ್ರಯಾಣ ಮಾಡಿದ್ದಾರೆ. ಪ್ರಸಕ್ತ ವರ್ಷ ಮಾರ್ಚ್‌ನಲ್ಲಿ ಬಾಂಗ್ಲಾದೇಶಕ್ಕೆ ಪ್ರಯಾಣ ಬೆಳೆಸಿದ್ದರು. ಇದೀಗ ಅಮೆರಿಕಕ್ಕೆ ತೆರಳಿದ್ದಾರೆ.

ನಾಳೆ ಜೊ ಬೈಡನ್ ಭೇಟಿ: ಅಮೆರಿಕ ಅಧ್ಯಕ್ಷ ಬೈಡನ್ ಅವರು ನಾಳೆ ಶ್ವೇತಭವನದಲ್ಲಿ ಪಿಎಂ ಮೋದಿಗೆ ಆತಿಥ್ಯ ವಹಿಸಲಿದ್ದಾರೆ, ಜನವರಿ 20ರಂದು ಬೈಡನ್ ಅಮೆರಿಕ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ಉಭಯ ನಾಯಕರ ನಡುವಿನ ಮೊದಲ ವೈಯಕ್ತಿಕ ಭೇಟಿ ಇದಾಗಿದೆ. ಕೋವಿಡ್-19 ಎರಡನೇ ಅಲೆ ನಂತರ ಇದು ಪ್ರಧಾನಿ ಮೋದಿಯವರ ಮೊದಲ ವಿದೇಶ ಪ್ರವಾಸವಾಗಿದೆ.

ಕ್ವಾಡ್ ಲೀಡರ್ಸ್ ಶೃಂಗಸಭೆಯಲ್ಲಿ ಭಾಗವಹಿಸಲು ಅಮೆರಿಕಕ್ಕೆ ತೆರಳುವ ಮುನ್ನ, ಪ್ರಧಾನಿ ನರೇಂದ್ರ ಮೋದಿ ನಿನ್ನೆ ತಮ್ಮ ಭೇಟಿ ಯುನೈಟೆಡ್ ಸ್ಟೇಟ್ಸ್, ಜಪಾನ್ ಮತ್ತು ಆಸ್ಟ್ರೇಲಿಯಾದೊಂದಿಗೆ ಕಾರ್ಯತಂತ್ರದ ಪಾಲುದಾರಿಕೆಯನ್ನು ಬಲಪಡಿಸುವ ಸಂದರ್ಭವಾಗಿದೆ ಎಂದು ಹೇಳಿದ್ದರು.

ಸೆಪ್ಟೆಂಬರ್ 25 ರಂದು ನ್ಯೂಯಾರ್ಕ್ ನಲ್ಲಿ ವಿಶ್ವಸಂಸ್ಥೆ ಸಾಮಾನ್ಯ ಸಭೆಯ (ಯುಎನ್ ಜಿಎ) 76ನೇ ಅಧಿವೇಶನದ ಉನ್ನತ ಮಟ್ಟದ ವಿಭಾಗದ ಸಾಮಾನ್ಯ ಚರ್ಚೆಯಲ್ಲಿ ಪ್ರಧಾನಿ ಮೋದಿ ಭಾಷಣ ಮಾಡಲಿದ್ದಾರೆ. ಈ ವರ್ಷದ ಸಾಮಾನ್ಯ ಚರ್ಚೆಯ ವಿಷಯವೆಂದರೆ ಕೋವಿಡ್-19ನಿಂದ ಚೇತರಿಸಿಕೊಳ್ಳುವ ಭರವಸೆಯ ಮೂಲಕ ಸ್ಥಿತಿಸ್ಥಾಪಕತ್ವವನ್ನು ನಿರ್ಮಿಸುವುದು, ಸುಸ್ಥಿರತೆಯನ್ನು ಪುನರ್ನಿರ್ಮಿಸುವುದು, ಭೂಮಿಯ ಅಗತ್ಯಗಳಿಗೆ ಸ್ಪಂದಿಸುವುದು, ಜನರ ಹಕ್ಕುಗಳನ್ನು ಗೌರವಿಸುವುದು ಮತ್ತು ವಿಶ್ವಸಂಸ್ಥೆಯನ್ನು ಪುನರುಜ್ಜೀವನಗೊಳಿಸುವುದಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com