90 ದಿನಗಳಲ್ಲಿ ಕಾಬೂಲ್ ತಾಲಿಬಾನ್ ವಶಕ್ಕೆ: ಅಮೆರಿಕ ಗುಪ್ತಚರ ಸಂಸ್ಥೆ ಭವಿಷ್ಯ

ಮುಂದಿನ 30 ದಿನಗಳಲ್ಲಿ ಕಾಬೂಲ್ ಅನ್ನು ತಾಲಿಬಾನ್ ಸುತ್ತುವರಿಯಲಿದ್ದು, ಯಾವುದೇ ರೀತಿಯ ನೆರವು ರಾಜಧಾನಿ ಕಾಬೂಲಿಗೆ ತಲುಪದಂತೆ ಮಾಡುವ ಹುನ್ನಾರವನ್ನು ತಾಲಿಬಾನ್ ಈಗಾಗಲೇ ನಡೆಸುತ್ತಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಕಾಬೂಲ್: ಅಫ್ಘಾನಿಸ್ತಾನ ರಾಜಧಾನಿ ಇನ್ನು 90 ದಿನಗಳಲ್ಲಿ ತಾಲಿಬಾನ್ ವಶವಾಗಲಿದೆ ಎಂದು ಅಮೆರಿಕ ಗುಪ್ತಚರ ಸಂಸ್ಥೆ ಸಿಐಎ ಭವಿಷ್ಯ ನುಡಿದಿದೆ. ಕಟ್ಟರ್ ಇಸ್ಲಾಂ ಮೂಲಭೂತವಾದಿಗಳೆಂಬ ಹಣೆಪಟ್ಟಿ ಹೊತ್ತಿರುವ ತಾಲಿಬಾನ್ ಈಗಾಗಲೇ ಶೇ.65 ಪ್ರತಿಶತ ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡಿದೆ ಎಂದು ರಾಜಕೀಯ ಪರಿಣತರು ಆತಂಕ ವ್ಯಕ್ತಪಡಿಸಿರುವುದರ ನಡುವೆಯೇ 11 ಪ್ರಾಂತೀಯ ರಾಜಧಾನಿಗಳನ್ನು ತಾಲಿಬಾನ್ ಆಕ್ರಮಿಸಿಕೊಂಡಿದೆ. 

ಮುಂದಿನ 30 ದಿನಗಳಲ್ಲಿ ಕಾಬೂಲ್ ಅನ್ನು ತಾಲಿಬಾನ್ ಸುತ್ತುವರಿಯಲಿದ್ದು, ಯಾವುದೇ ರೀತಿಯ ನೆರವು ರಾಜಧಾನಿ ಕಾಬೂಲಿಗೆ ತಲುಪದಂತೆ ಮಾಡುವ ಹುನ್ನಾರವನ್ನು ತಾಲಿಬಾನ್ ಈಗಾಗಲೇ ನಡೆಸುತ್ತಿದೆ ಎಂದು ಅಮೆರಿಕ ಗುಪ್ತಚರ ಸಂಸ್ಥೆಯ ಅಧಿಕಾರಿಗಳು ಹೇಳಿದ್ದಾರೆ. 

ತಾಲಿಬಾನ್ ಕ್ಷಿಪ್ರ ಗತಿಯಲ್ಲಿ ಇಷ್ಟೊಂದು ಆಕ್ರಮಣಕಾರಿಯಾಗಿ ಮುನ್ನುಗ್ಗುವುದಾಗಿ ಆಫ್ಘನ್ ಭದ್ರತಾಪಡೆಗಳು ಊಹಿಸಿರಲಿಲ್ಲ. 1996-2001ರ ತನಕ ದೇಶದ ಬಹುಭಾಗವನ್ನು ಆಕ್ರಮಿಸಿಕೊಂಡಿದ್ದ ತಾಲಿಬಾನ್ ಅಮೆರಿಕ ಮಧ್ಯಪ್ರವೇಶಿಸಿದ ನಂತರ ಹಿಮ್ಮೆಟ್ಟಿತ್ತು. ಅಂದಿನಿಂದಲೂ ಅಮೆರಿಕ ಬೆಂಬಲದೊಂದಿಗೆ ರಚನೆಯಾಗಿದ್ದ ಪ್ರಜಾಪ್ರಭುತ್ವ ಸರ್ಕಾರದ ವಿರುದ್ಧ ತಾಲಿಬಾನ್ ಕತ್ತಿ ಮಸೆಯುತ್ತಲೇ ಇತ್ತು. ಇದೀಗ ಅಮೆರಿಕ ಭದ್ರತಾಪಡೆಗಳ ನಿರ್ಗಮನದೊಂದಿಗೆ ತಾಲಿಬಾನ್ ಮತ್ತೆ ದೇಶವನ್ನು ತನ್ನ ತೆಕ್ಕೆಗೆ ವಶಪಡಿಸಿಕೊಳ್ಳಲು ಮುಂದಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com