ವಿಎಸ್ಎಸ್ ಯುನಿಟಿ ನೌಕೆ ಯಶಸ್ವಿ ಉಡಾವಣೆ
ವಿಎಸ್ಎಸ್ ಯುನಿಟಿ ನೌಕೆ ಯಶಸ್ವಿ ಉಡಾವಣೆ

ರಿಚರ್ಡ್​ ಬ್ರಾನ್ಸನ್​, ಭಾರತದ ಮೂಲದ ಸಿರೀಷಾ ಬಾಂದ್ಲಾ ಹೊತ್ತ ವಿಎಸ್ಎಸ್ ಯುನಿಟಿ ನೌಕೆ ಯಶಸ್ವಿ ಉಡಾವಣೆ, ಬಾಹ್ಯಾಕಾಶ ತಲುಪಿದ ಗಗನಯಾನಿಗಳು!

ಬ್ರಿಟನ್​ನ ಕೋಟ್ಯಧಿಪತಿ, ಉದ್ಯಮಿ ರಿಚರ್ಡ್​ ಬ್ರಾನ್ಸನ್ ರ ಬಾಹ್ಯಾಕಾಶ ಪ್ರವಾಸದ ಕನಸು ನನಸಾಗಿದ್ದು, ಭಾರತ ಮೂಲದ ಸಿರೀಷಾ ಬಾಂದ್ಲಾ ಸೇರಿದಂತೆ 6 ಮಂದಿ ಗಗನಯಾನಿಗಳನ್ನು ಹೊತ್ತು ಉಡಾವಣೆಯಾಗಿದ್ದ ವರ್ಜಿನ್ ಗ್ಯಾಲಾಕ್ಟಿಕ್ ಸ್ಪೇಸ್ ರಾಕೆಟ್ ವಿಎಸ್‍ಎಸ್ ಯುನಿಟಿ-22  ಉಡಾವಣೆಯಾಗಿ ಬಾಹ್ಯಾಕಾಶ ತಲುಪಿದೆ.
Published on

ವಾಷಿಂಗ್ಟನ್: ಬ್ರಿಟನ್​ನ ಕೋಟ್ಯಧಿಪತಿ, ಉದ್ಯಮಿ ರಿಚರ್ಡ್​ ಬ್ರಾನ್ಸನ್ ರ ಬಾಹ್ಯಾಕಾಶ ಪ್ರವಾಸದ ಕನಸು ನನಸಾಗಿದ್ದು, ಭಾರತ ಮೂಲದ ಸಿರೀಷಾ ಬಾಂದ್ಲಾ ಸೇರಿದಂತೆ 6 ಮಂದಿ ಗಗನಯಾನಿಗಳನ್ನು ಹೊತ್ತು ಉಡಾವಣೆಯಾಗಿದ್ದ ವರ್ಜಿನ್ ಗ್ಯಾಲಾಕ್ಟಿಕ್ ಸ್ಪೇಸ್ ರಾಕೆಟ್ ವಿಎಸ್‍ಎಸ್ ಯುನಿಟಿ-22  ಉಡಾವಣೆಯಾಗಿ ಬಾಹ್ಯಾಕಾಶ ತಲುಪಿದೆ.

ಇಂದು ವರ್ಜಿನ್ ಗ್ಯಾಲಾಕ್ಟಿಕ್ ಸ್ಪೇಸ್ ರಾಕೆಟ್ ವಿಎಸ್‍ಎಸ್ ಯುನಿಟಿ-22 ಯಶಸ್ವಿಯಾಗಿ ರಾತ್ರಿ 8 ಗಂಟೆಗೆ ಉಡಾವಣೆಯಾಗಿದ್ದು, 9.20ರ ಸುಮಾರಿಗೆ ಬಾಹ್ಯಾಕಾಶ ತಲುಪಿದೆ ಎಂದು ವರ್ಜಿನ್ ಗ್ಯಾಲಾಕ್ಟಿಕ್ ಮಾಹಿತಿ ನೀಡಿದೆ ಎನ್ನಲಾಗಿದೆ. ರಿಚರ್ಡ್ ಬ್ರಾನ್ಸನ್ ಅವರೇ ಸಂಸ್ಥಾಪಿಸಿದ ವರ್ಜಿನ್​ ಗ್ಯಾಲಕ್ಟಿಕ್ (Virgin Galactic) ​ ಸ್ಪೇಸ್​ಫ್ಲೈಟ್​ ಕಂಪನಿಯೇ ತಯಾರಿಸಿದ ವಿಎಸ್​ಎಸ್​ ಯುನಿಟಿ (VSS Unity) ಗಗನ ನೌಕೆಯಲ್ಲಿ ಇಂದು ರಿಚರ್ಡ್​ ಬ್ರಾನ್ಸನ್​ ಸೇರಿ ಒಟ್ಟು ಆರು ಮಂದಿ ಬಾಹ್ಯಾಕಾಶವನ್ನು ತಲುಪಿದ್ದಾರೆ. ಆರು ಯಾನಿಗಳ ಪೈಕಿ ಆಂಧ್ರ ಮೂಲದ ಶಿರಿಷಾ ಬಾಂದ್ಲಾ ಸಹ ಒಬ್ಬರಾಗಿದ್ದಾರೆ. ಆಂಧ್ರ  ಪ್ರದೇಶದ ಗುಂಟೂರು ಮೂಲದ ಶಿರಿಷಾ ವರ್ಜಿನ್ ಗ್ಯಾಲಾಕ್ಟಿಕ್ ಸ್ಪೇಸ್ ನಲ್ಲಿ ಗವರ್ನ್‍ಮೆಂಟ್ ಅಫೇರ್ಸ್ ಮತ್ತು ರಿಸರ್ಚ್ ಆಪರೇಷನ್ ಉಪಾಧ್ಯಕ್ಷೆ ಆಗಿದ್ದಾರೆ.

90 ನಿಮಿಷಗಳ ಪ್ರಯಾಣ ಮುಗಿಸಿ ಅಮೆರಿಕದ ನ್ಯೂ ಮೆಕ್ಸಿಕೋ ಸ್ಪೇಸ್‍ಪಾರ್ಟ್ ನಲ್ಲಿ ಲ್ಯಾಂಡ್ ಆಗಲಿದೆ. ಇದು ವಿಎಂಎಸ್ ಇವ್ ನಿಂದ ಮೇಲಕ್ಕೆ ಅಂದ್ರೆ ಭೂಮಿಯ ಪರಿಧಿಯಿಂದ 50 ಸಾವಿರ ಅಡಿಗಳಷ್ಟು ಎತ್ತರಕ್ಕೆ ತೆಗೆದುಕೊಂಡು ಹೋಗಲಿದೆ. ತದನಂತರ ಸ್ಪೇಸ್‍ಕ್ರಾಫ್ಟ್ ಸ್ವತಃ ಬಾಹ್ಯಾಕಾಶದತ್ತ ಚಲಿಸುತ್ತದೆ.  ಅಂತರಿಕ್ಷದ ಈ ಯಾತ್ರೆ 1 ಗಂಟೆ 5 ನಿಮಿಷ ಇರಲಿದೆ. ನಂತರ ವಿಎಸ್‍ಎಸ್ ಯುನಿಟಿ ವಾಪಸ್ ಸ್ಪೇಸ್‍ಪಾರ್ಟ್ ನಲ್ಲಿ ಲ್ಯಾಂಡ್ ಆಗಲಿದೆ. ಸ್ಪೇಸ್‍ಪಾರ್ಟ್ ಲಾಂಚ್ ನಿಂದ ಲ್ಯಾಂಡಿಂಗ್ ನಡುವಿನ ಸಮಯ ಒಟ್ಟು 90 ನಿಮಿಷ. ವಿಎಸ್‍ಎಸ್ ಯುನಿಟಿ ಬರೋಬ್ಬರಿ 4 ನಿಮಿಷ ಅಂತರಿಕ್ಷ ಯಾತ್ರಿಗಳಿಗೆ ಝೀರೋ  ಗ್ರೆವಿಟಿಯ ಅನುಭವವಾಗುತ್ತದೆ. ರಿಚರ್ಡ್ ಜೊತೆಯಲ್ಲಿ ಚೀಫ್ ಎಸ್ಟ್ರೋನಾಟ್ ಇನ್‍ಸ್ಟ್ರಕ್ಟರರ್ ಬೆಥ್ ಮೊಸೆಸ್, ಲೀಡ್ ಆಪರೇಷನ್ ಇಂಜಿನೀಯರ್ ಕೋಲಿನ್ ಬೆನ್ನೆಟ್, ಗವರ್ನ್‍ಮೆಂಟ್ ಅಫೇರ್ಸ್ ಮತ್ತು ರಿಸರ್ಚ್ ಆಪರೇಷನ್ ಉಪಾಧ್ಯಕ್ಷೆ ಶಿರೀಷಾ ಬಾಂದ್ಲಾ ಸಹ ಪ್ರಯಾಣಿಸಿದ್ದಾರೆ.

ವಿಎಸ್​ಎಸ್​ ಯುನಿಟಿ ಒಂದು ಪ್ರಯಾಣಿಕರ ರಾಕೆಟ್​ ಆಗಿದ್ದು, ಬಾಹ್ಯಾಕಾಶ ಪ್ರವಾಸಕ್ಕಾಗಿಯೇ ವರ್ಜಿನ್​ ಗ್ಯಾಲಕ್ಟಿಕ್ ಕಂಪನಿಯಿಂದ ವಿನ್ಯಾಸಗೊಳಿಸಲ್ಪಟ್ಟ, ಸಬೋರ್ಬಿಟಲ್​ ಬಾಹ್ಯಾಕಾಶ ರಾಕೆಟ್ ಆಗಿದೆ. ವಿಎಸ್​ಎಸ್​ ಯುನಿಟಿ ಒಂದು ಬಿಳಿಬಣ್ಣದ ಬಾಹ್ಯಾಕಾಶ ನೌಕೆಯಾಗಿದ್ದು, ಅವಳಿ ಫ್ಯೂಸ್ಲೇಜ್ ಕ್ಯಾರಿಯರ್  ಜೆಟ್​​​ನಿಂದ ತಳ್ಳಲ್ಪಟ್ಟು ಮೇಲಕ್ಕೆ ಚಿಮ್ಮಲಿದೆ. ಈ ಜೆಟ್​​ಗೆ VMS Eve (ರಿಚರ್ಡ್ ಬ್ರಾನ್ಸನ್​ ತಾಯಿ ಹೆಸರು) ಎಂದು ನಾಮಕರಣ ಮಾಡಲಾಗಿದೆ. ವಿಎಸ್​ಎಸ್​ ನೌಕೆ, ಭೂಮಿಯ ವಾತಾವರಣದ ಹೊರಗಿನ ಅಂಚಿನ ಹಿಂದೆ ಲಂಬವಾದ ಆರೋಹಣದಲ್ಲಿ ಸುಮಾರು 50 ಸಾವಿರ ಅಡಿ ಎತ್ತರದವರೆಗೂ ಈ VMS  Eve ಫ್ಲ್ಯೂಸೇಜ್​ ಕ್ಯಾರಿಯರ್​ ಜೆಟ್​ನಿಂದಲೇ ಮುಂದೂಡಲ್ಪಡಲಿದೆ. ನ್ಯೂ ಮೆಕ್ಸಿಕೊ ಮರುಭೂಮಿಗಿಂತ 89 ಕಿಮೀ ಎತ್ತರದಲ್ಲಿ ಕೆಲವು ನಿಮಿಷಗಳ ಕಾಲ ಗಗನಯಾತ್ರಿಗಳು ತೂಕವಿಲ್ಲದ ಸ್ಥಿತಿಯನ್ನು ಅನುಭವಿಸುವ ನಿರೀಕ್ಷೆ ಇದೆ ಎಂದೂ ಹೇಳಲಾಗಿದೆ. ಹಾಗೇ, ಎಲ್ಲವೂ ಅಂದುಕೊಂಡಂತೆ ಆದರೆ ನ್ಯೂ ಮೆಕ್ಸಿಕೋ  ಮರುಭೂಮಿಗಿಂತ 89 ಕಿಮೀ ಎತ್ತರದಲ್ಲಿ ಸುಮಾರು 90 ನಿಮಿಷಗಳ ಕಾಲ ರಾಕೆಟ್​​ ಹಾರಾಟ ನಡೆಯಲಿದೆ.

ಭಾರತದ ಗಗನಯಾನಿ ಸಿರಿಷಾ ಬಾಂದ್ಲಾ
ಉದ್ಯಮಿ ರಿಚರ್ಡ್​ ಬ್ರಾನ್ಸನ್ ಜತೆ ಬಾಹ್ಯಾಕಾಶಕ್ಕೆ ತೆರಳುತ್ತಿರುವ ಮಹಿಳೆ ಸಿರೀಶಾ ಬಾಂದ್ಲಾ ಮೂಲತಃ ಭಾರತದ ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯವರು. ಟೆಕ್ಸಾಸ್​​ನ ಹೂಸ್ಟನ್​​ನಲ್ಲಿ ಬೆಳೆದು ವಿದ್ಯಾಭ್ಯಾಸ ಮಾಡಿದ್ದಾರೆ. ಈ ಬಾಹ್ಯಾಕಾಶ ಪಯಣದ ಮೂಲಕ ಸಿರಿಷಾ ಭಾರತ ಮೂಲದ ಕಲ್ಪನಾ ಚಾವ್ಲಾ, ಸುನಿತಾ  ವಿಲಿಯಮ್ಸ್​ ಸಾಲಿಗೆ ಸೇರ್ಪಡೆಯಾಗುತ್ತಿದ್ದಾರೆ. 34ವರ್ಷದ ಇವರು ಏರೋನಾಟಿಕಲ್ ಎಂಜಿನಿಯರ್. ಈ ಗಗನಯಾತ್ರೆಯಲ್ಲಿ ನಾನೂ ಒಬ್ಬಳು ಪಾಲ್ಗೊಳ್ಳುತ್ತಿದ್ದೇನೆ ಎಂಬ ಬಗ್ಗೆ ತುಂಬ ಹೆಮ್ಮೆ ಇದೆ ಎಂದು ಹೇಳಿಕೊಂಡಿದ್ದಾರೆ. ಇಂದು ಬಾಹ್ಯಾಕಾಶಕ್ಕೆ ಹಾರುತ್ತಿರುವ ಸಿರೀಷಾರಿಗೆ ಆಂಧ್ರ ಮಾಜಿ ಸಿಎಂ ಚಂದ್ರಬಾಬು  ನಾಯ್ಡು ಶುಭ ಹಾರೈಸಿದ್ದು, ಇಡೀ ಭಾರತಕ್ಕೆ ಹೆಮ್ಮೆ ತಂದ ವಿಚಾರ ಇದು ಎಂದಿದ್ದಾರೆ.
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com