ಚೀನಾದಲ್ಲಿ H10N3 ಹಕ್ಕಿ ಜ್ವರ ಮನುಷ್ಯರಲ್ಲಿ ಪತ್ತೆಯಾದ ಮೊದಲ ಪ್ರಕರಣ ವರದಿ
ಚೀನಾದ ಈಶಾನ್ಯ ಭಾಗದ ಜಿಯಾಂಗ್ಸು ಪ್ರಾಂತ್ಯದಲ್ಲಿ H10N3 ಹಕ್ಕಿ ಜ್ವರ ಮನುಷ್ಯರಲ್ಲಿ ಪತ್ತೆಯಾದ ಮೊದಲ ಪ್ರಕರಣ ವರದಿಯಾಗಿದೆ ಎಂದು ಅಲ್ಲಿನ ರಾಷ್ಟ್ರೀಯ ಆರೋಗ್ಯ ಆಯೋಗ ಜೂ.1 ರಂದು ಮಾಹಿತಿ ನೀಡಿದೆ.
Published: 01st June 2021 01:26 PM | Last Updated: 01st June 2021 01:26 PM | A+A A-

ಚೀನಾದಲ್ಲಿನ ಪೌಲ್ಟ್ರಿ (ಸಂಗ್ರಹ ಚಿತ್ರ)
ಬೀಜಿಂಗ್: ಚೀನಾದ ಈಶಾನ್ಯ ಭಾಗದ ಜಿಯಾಂಗ್ಸು ಪ್ರಾಂತ್ಯದಲ್ಲಿ H10N3 ಹಕ್ಕಿ ಜ್ವರ ಮನುಷ್ಯರಲ್ಲಿ ಪತ್ತೆಯಾದ ಮೊದಲ ಪ್ರಕರಣ ವರದಿಯಾಗಿದೆ ಎಂದು ಅಲ್ಲಿನ ರಾಷ್ಟ್ರೀಯ ಆರೋಗ್ಯ ಆಯೋಗ ಜೂ.1 ರಂದು ಮಾಹಿತಿ ನೀಡಿದೆ.
H10N3 ಹಕ್ಕಿ ಜ್ವರದ ಒಂದು ತಳಿಯಾಗಿದ್ದು, ಝೆನ್ಜಿಯಾಂಗ್ ನಗರದ 41 ವರ್ಷದ ವ್ಯಕ್ತಿಯಲ್ಲಿ ಈ ಸೋಂಕು ಪತ್ತೆಯಾಗಿದ್ದು, ಪರಿಸ್ಥಿತಿ ಸ್ಥಿರವಾಗಿದೆ ಎಂದು ಅಲ್ಲಿನ ಸರ್ಕಾರಿ ಸ್ವಾಮ್ಯದ ಸಿಜಿಟಿಎನ್ ಟಿವಿ ವರದಿ ಪ್ರಕಟಿಸಿದೆ.
ಆರೋಗ್ಯ ಅಧಿಕಾರಿಗಳು ಈ ಸೋಂಕು ತೀವ್ರವಾಗಿ ಹರಡುವ ಸಾಧ್ಯತೆಯನ್ನು ತಳ್ಳಿಹಾಕಿದ್ದು, ಪೌಲ್ಟ್ರಿಗಳಿಂದ ಮನುಷ್ಯರಿಗೆ ಹರಡುವ ವಿರಳವಾದ ಸೋಂಕು ಎಂದು ವಿಶ್ಲೇಷಿಸಿದ್ದಾರೆ ಹಾಗೂ ಇದು ಸಾಂಕ್ರಾಮಿಕವಾಗುವ ಸಾಧ್ಯತೆ ತೀರಾ ಕಡಿಮೆ ಎಂದು ಹೇಳಿದ್ದಾರೆ.
ಮೇ.28 ರಂದು H10N3 ಏವಿಯನ್ ವೈರಾಣು ಸೋಂಕು ವ್ಯಕ್ತಿಯಲ್ಲಿ ಪತ್ತೆಯಾಗಿದೆ ಎಂದಷ್ಟೇ ಹೇಳಿರುವ ಚೀನಾ ಇದು ಹೇಗೆ ಹರಡಿತು ಎಂಬುದರ ಬಗ್ಗೆ ವಿವರಣೆ ಮಾತ್ರ ನೀಡಿಲ್ಲ.
ಈ ವರೆಗೂ ಜಾಗತಿಕ ಮಟ್ಟದಲ್ಲಿ ಈ ರೀತಿಯ H10N3 ಹಕ್ಕಿ ಜ್ವರದ ವೈರಾಣು ಸೋಂಕು ಹರಡಿರುವ ಬಗ್ಗೆ ವರದಿಯಾಗಿಲ್ಲ ಎಂದು ಚೀನಾ ಹೇಳಿದೆ. H10N3 ಕಡಿಮೆ ರೋಗಕಾರಕ ವೈರಾಣುವಾಗಿದ್ದು, ಪೌಲ್ಟ್ರಿಗಳಲ್ಲಿ ಕಂಡುಬರುತ್ತದೆ ಹಾಗೂ ಹೆಚ್ಚು ಹರಡುವ ಅಪಾಯ ಕಡಿಮೆ ಎಂದು ಚೀನಾ ಹೇಳಿದೆ.
ಚೀನಾದಲ್ಲಿ ಏವಿಯನ್ ಶೀತಜ್ವರದ ಹಲವು ತಳಿಗಳಿದ್ದು, ಕೆಲವೊಂದು ವೈರಾಣುಗಳು ಪೌಲ್ಟ್ರಿಗಳಲ್ಲಿ ಕೆಲಸ ಮಾಡುವ ವ್ಯಕ್ತಿಗಳಿಗೆ ವಿರಳವಾಗಿ ಹರಡುತ್ತದೆ. ಏಪ್ರಿಲ್ ತಿಂಗಳಲ್ಲಿ ಹೆಚ್ಚು ರೋಗಕಾರಕವಾಗಿದ್ದ H5N6 ಏವಿಯನ್ ಫ್ಲೂ ಚೀನಾದ ಶೆನ್ಯಾಂಗ್ ನಗರದಲ್ಲಿನ ಕಾಡು ಪಕ್ಷಿಗಳಲ್ಲಿ ಪತ್ತೆಯಾಗಿ ಆತಂಕ ಮೂಡಿಸಿತ್ತು.