ಲಾಹೋರ್: ಡಾಕ್ಟರ್ ಎಂದು ಹೇಳಿ ಶಸ್ತ್ರ ಚಿಕಿತ್ಸೆ ನಡೆಸಿದ ಮಾಜಿ ಸೆಕ್ಯುರಿಟಿ ಗಾರ್ಡ್; ಮಹಿಳೆ ಸಾವು!

ನುರಿತ ವೈದ್ಯನೆಂದು ಹೇಳಿಕೊಂಡು ಹಿರಿಯ ಮಹಿಳಾ ರೋಗಿಗೆ ಮಾಜಿ ಸೆಕ್ಯುರಿಟಿ ಗಾರ್ಡ್ ಶಸ್ತ್ರ ಚಿಕಿತ್ಸೆ ನಡೆಸಿ ಆಕೆಯ ಸಾವಿಗೆ ಕಾರಣವಾಗಿರುವ ಘಟನೆ ಪಾಕಿಸ್ತಾನದ ಲಾಹೋರ್ ನಲ್ಲಿ ನಡೆದಿದೆ.
ಆಪರೇಶನ್ ಥಿಯೇಟರ್
ಆಪರೇಶನ್ ಥಿಯೇಟರ್

ಲಾಹೋರ್: ನುರಿತ ವೈದ್ಯನೆಂದು ಹೇಳಿಕೊಂಡು ಹಿರಿಯ ಮಹಿಳಾ ರೋಗಿಗೆ ಮಾಜಿ ಸೆಕ್ಯುರಿಟಿ ಗಾರ್ಡ್ ಶಸ್ತ್ರ ಚಿಕಿತ್ಸೆ ನಡೆಸಿ ಆಕೆಯ ಸಾವಿಗೆ ಕಾರಣವಾಗಿರುವ ಘಟನೆ ಪಾಕಿಸ್ತಾನದ ಲಾಹೋರ್ ನಲ್ಲಿ ನಡೆದಿದೆ.

ಲಾಹೋರ್‌ನ ಮಾಯೊ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದ್ದು, 80 ವರ್ಷದ ಶಮೀಮಾ ಬೇಗಂ ಎಂಬ ಮಹಿಳೆ ಸಾವನ್ನಪ್ಪಿದ್ದಾರೆ. ಮೂಲಗಳ ಪ್ರಕಾರ ಮುಹಮ್ಮದ್ ವಹೀದ್ ಬಟ್ ಎಂಬಾತ ತಾನು ನುರಿತ ವೈದ್ಯ ಎಂದು ಹೇಳಿಕೊಂಡು ಶಮೀಮಾ ಬೇಗಂ ಅವರ ಶಸ್ತ್ರ ಚಿಕಿತ್ಸೆ ನಡೆಸಿ ಅವರ ಸಾವಿಗೆ  ಕಾರಣನಾಗಿದ್ದಾನೆ. 

ಈ ಬಗ್ಗೆ ಮಾಹಿತಿ ನೀಡಿರುವ ಮಾಯೋ ಆಸ್ಪತ್ರೆ ಅಧಿಕಾರಿಗಳು, 'ಮಹಿಳೆ ಶಮೀಮಾ ಬೇಗಂ ಬೆನ್ನು ಮೂಳೆ ಸಮಸ್ಯೆಯಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಈ ವೇಳೆ ಆಕೆಗೆ ಶಸ್ತ್ರ ಚಕಿತ್ಸೆ ನಡೆಸಿ ಮನೆಗೆ ಕಳುಹಿಸಲಾಗಿತ್ತು. ಆದರೆ ಎರಡು ದಿನಗಳ ನಂತರ ಶಸ್ತ್ರ ಚಿಕಿತ್ಸೆ ನಡೆದ ಜಾಗದಲ್ಲಿ ರಕ್ತಸ್ರಾವ ತೀವ್ರವಾಗಿ  ನೋವು ಕೂಡ ತೀವ್ರವಾಗಿದೆ. ಈ ವೇಳೆ ಕುಟುಂಬಸ್ಥರು ಮತ್ತೆ ಅವರನ್ನು ಆಸ್ಪತ್ರೆಗೆ ಕರೆತಂದಿದ್ದಾರೆ. ಈ ವೇಳೆ ಆಕೆ ಮೃತಪಟ್ಟಿದ್ದಾರೆ. ಇನ್ನು ಶಸ್ತ್ರಚಿಕಿತ್ಸೆ ಮೂಲದ ಬಗ್ಗೆ ಶೋಧ ನಡೆಸಿದಾಗ ಆಸ್ಪತ್ರೆಯಲ್ಲಿ ಈ ಹಿಂದೆ ಸೆಕ್ಯುರಿಟಿ ಗಾರ್ಡ್ ಆಗಿದ್ದ ಮುಹಮ್ಮದ್ ವಹೀದ್ ಬಟ್ ತಾನೇ ವೈದ್ಯನೆಂದು ಸುಳ್ಳು  ಹೇಳಿಕೊಂಡು ಶಸ್ತ್ರಚಿಕಿತ್ಸೆ ನಡೆಸಿದ್ದಾನೆ. ಆದರೆ ಆ ಶಸ್ತ್ರಚಿಕಿತ್ಸೆ ವೇಳೆ ಇತರೆ ನುರಿತ ವೈದ್ಯರೂ ಕೂಡ ಹಾಜರಿದ್ದರು ಎಂದು ಹೇಳಿದ್ದಾರೆ.

ಇದು ದೊಡ್ಡ ಆಸ್ಪತ್ರೆಯಾಗಿದ್ದು, ವೈದ್ಯರು ಮತ್ತು ಸಿಬ್ಬಂದಿಗಳು ಏನು ಮಾಡುತ್ತಿದ್ದಾರೆ ಎಂಬುದನ್ನು ಸದಾಕಾಲ ವೀಕ್ಷಣೆ ಮಾಡಲು ಸಾಧ್ಯವಿಲ್ಲ. ಬಟ್ ಆಗಾಗ ರೋಗಿಗಳ ಕುಟಂಬಸ್ಥರನ್ನು ಭೇಟಿ ಮಾಡಿ ಚಿಕಿತ್ಸೆಗಾಗಿ ಹಣ ಪಡೆದಿದ್ದ. ಬಳಿಕ ತಾನೇ ವೈದ್ಯನೆಂದು ಸುಳ್ಳು ಹೇಳಿಕೊಂಡು ಶಸ್ತ್ರ ಚಿಕಿತ್ಸೆ ನಡೆಸಿದ್ದಾನೆ,  ಪ್ರಸ್ತುತ ಹೆಚ್ಚಿನ ಮಾಹಿತಿಗಾಗಿ ಮಹಿಳೆಯ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಇರಿಸಿಕೊಳ್ಳಲಾಗಿದೆ. ಪ್ರಸ್ತುತ ಬಟ್ ನನ್ನು ಲಾಹೋರ್ ಪೊಲೀಸರು ಬಂಧಿಸಿದ್ದು, ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ ಎಂದು ಹೇಳಲಾಗಿದೆ.

2 ವರ್ಷಗಳ ಹಿಂದೆಯೇ ಕೆಲಸದಿಂದ ಕಿತ್ತೊಗೆದಿದ್ದ ಆಸ್ಪತ್ರೆ
ಇನ್ನು ಬಂಧಿತ ಆರೋಪಿ ಬಟ್ ಆಸ್ಪತ್ರೆ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ. ರೋಗಿಗಳಿಗೆ ಚಿಕಿತ್ಸೆ ಕೊಡಿಸಲು ಹಣ ಪಡೆಯುತ್ತಿದ್ದ. ಬಳಿಕ ಆಸ್ಪತ್ರೆಯ ವೈದ್ಯರೊಂದಿಗೆ ಸಮನ್ವಯ ಸಾಧಿಸಿ ಚಿಕಿತ್ಸೆ ಕೊಡಿಸುತ್ತಿದ್ದ. ಇದೇ ಕಾರಣಕ್ಕೆ ಆತನನ್ನು 2 ವರ್ಷಗಳ ಹಿಂದೆಯೇ ಕೆಲಸದಿಂದ ಕೆತ್ತೊಗೆಯಲಾಗಿತ್ತು. 

ಮೊದಲ ಪ್ರಕರಣವೇನೂ ಅಲ್ಲ
ಲಾಹೋರ್ ನಲ್ಲಿ ಇಂತಹ ಪ್ರಕರಣಗಳು ಇದೇ ಮೊದಲೇನಲ್ಲ. ಈ ಹಿಂದೆ ಇದೇ ಲಾಹೋರ್ ಸರ್ವಿಸಸ್ ಆಸ್ಪತ್ರೆಯಲ್ಲಿ ವ್ಯಕ್ತಿಯೊಬ್ಬ ವೈದ್ಯನೆಂದು ಹೇಳಿಕೊಂಡು ರೋಗಿಗಳಿಂದ ಚಿಕಿತ್ಸೆಗೆ ಹಣ ಪಡೆದು ಸಿಕ್ಕಿಬಿದ್ದಿದ್ದ. ಬಳಿಕ 2016ರಲ್ಲಿ ಇದೇ ಸರ್ವಿಸಸ್ ಆಸ್ಪತ್ರೆಯಲ್ಲಿ ಮಹಿಳೆಯೊಬ್ಬರು ತಾನು ವೈದ್ಯೆ ಎಂದು  ಹೇಳಿಕೊಂಡು ಸತತ 8 ತಿಂಗಳ ಕಾಲ ನುರಿತ ವೈದ್ಯರೊಂದಿಗೆ ಸೇರಿ ಶಸ್ತ್ರ ಚಿಕಿತ್ಸೆ ನಡೆಸಿದ್ದರು. ಅಲ್ಲದೆ ರೋಗಿಗಳಿಂದ ಹಣ ಕೂಡ ಪಡೆಯುತ್ತಿದ್ದರು. ಅವರನ್ನೂ ಕೂಡ ಪೊಲೀಸರು ಬಂಧಿಸಿದ್ದರು. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com