ನಮ್ಮ ನೆಲದಲ್ಲಿ ವಿದೇಶಿ ಮಿಲಿಟರಿ ನೆಲೆಗಳಿಗೆ ಅನುಮತಿ ನೀಡುವುದಿಲ್ಲ: ಪಾಕ್ ವಿದೇಶಾಂಗ ಸಚಿವ ಖುರೇಷಿ

ನಮ್ಮ ಭೂಪ್ರದೇಶದಲ್ಲಿ ಅಥವಾ ನಮ್ಮ ನೆಲದಲ್ಲಿ ವಿದೇಶಿ ಮಿಲಿಟರಿ ನೆಲೆಗಳಿಗೆ ಅನುಮತಿಸುವುದಿಲ್ಲ ಎಂದು ಪಾಕಿಸ್ತಾನ ವಿದೇಶಾಂಗ ಸಚಿವ ಷಾ ಮಹಮೂದ್ ಖುರೇಷಿ ಮಾಧ್ಯಮಗಳಿಗೆ ತಿಳಿಸಿದರು.
ಪಾಕಿಸ್ತಾನದ ವಿದೇಶಾಂಗ ಸಚಿವ ಷಾ ಮಹಮೂದ್ ಖುರೇಷಿ
ಪಾಕಿಸ್ತಾನದ ವಿದೇಶಾಂಗ ಸಚಿವ ಷಾ ಮಹಮೂದ್ ಖುರೇಷಿ

ಇಸ್ಲಾಮಾಬಾದ್: ಅಫ್ಘಾನಿಸ್ತಾನದಿಂದ ಅಮೆರಿಕಾ ಮತ್ತು ನ್ಯಾಟೋ ಪಡೆ ಹಿಂತೆಗೆತದ ಪ್ರಕ್ರಿಯೆ ಮಧ್ಯೆ ನೆರೆಯ ದೇಶದಿಂದ ವಿದೇಶಿ ಪಡೆಗಳನ್ನು ಹಿಂತೆಗೆದುಕೊಂಡ ನಂತರ ತನ್ನ ನೆಲದಲ್ಲಿ ಯಾವುದೇ ವಿದೇಶಿ ಮಿಲಿಟರಿ ನೆಲೆಗಳಿಗೆ ಅನುಮತಿಸುವುದಿಲ್ಲ ಎಂದು ಪಾಕಿಸ್ತಾನ ಸ್ಪಷ್ಟಪಡಿಸಿದೆ.

ಅಫ್ಘಾನಿಸ್ತಾನವು ಅಲ್-ಖೈದಾದಂತಹ ಭಯೋತ್ಪಾದಕ ಗುಂಪುಗಳಿಗೆ ನೆಲೆಯಾಗುವುದನ್ನು ತಡೆಯಲು ಯೋಧರನ್ನು ಮರು ನಿಯೋಜಿಸುವ ಬಗ್ಗೆ ಅಮೆರಿಕಾ ಅಧ್ಯಕ್ಷ ಜೋ ಬಿಡೆನ್ ಸರ್ಕಾರ ಮಧ್ಯ ಏಷ್ಯಾದ ಹಲವಾರು ದೇಶಗಳೊಂದಿಗೆ ಮಾತುಕತೆ ನಡೆಸುತ್ತಿದೆ ಎಂದು ವರದಿಯಾಗುತ್ತಿದ್ದು ಇದರ ಬೆನ್ನಲ್ಲೇ "ನಮ್ಮ ಭೂಪ್ರದೇಶದಲ್ಲಿ ಅಥವಾ ನಮ್ಮ ನೆಲದಲ್ಲಿ ವಿದೇಶಿ ಮಿಲಿಟರಿ ನೆಲೆಗಳಿಗೆ ಅನುಮತಿಸುವುದಿಲ್ಲ ಎಂದು ಪಾಕಿಸ್ತಾನ ವಿದೇಶಾಂಗ ಸಚಿವ ಷಾ ಮಹಮೂದ್ ಖುರೇಷಿ ಮಾಧ್ಯಮಗಳಿಗೆ ತಿಳಿಸಿದರು. 

ಶಾಂತಿ, ಸಮೃದ್ಧಿ ಮತ್ತು ರಾಷ್ಟ್ರೀಯ ಸಾಮರಸ್ಯಕ್ಕಾಗಿ ಆಫ್ಗಾನ್ ನಡೆಸುತ್ತಿರುವ ಪ್ರಯತ್ನಗಳೊಂದಿಗೆ ಪಾಕಿಸ್ತಾನ ದೃಢವಾಗಿ ನಿಲ್ಲುತ್ತದೆ ಎಂದು ಪಾಕಿಸ್ತಾನ ವಿದೇಶಾಂಗ ಸಚಿವರು ಹೇಳಿದರು. ನಾವು ಅಫ್ಘಾನಿಸ್ತಾನದೊಂದಿಗೆ ಶಾಂತಿಯ ಪಾಲುದಾರರಾಗಿ ಉಳಿಯುತ್ತೇವೆ. ಜೊತೆಗೆ ಫೆಸಿಲಿಟೇಟರ್ ಆಗಿ ನಮ್ಮ ಪಾತ್ರವನ್ನು ಮುಂದುವರಿಸುತ್ತೇವೆ ಎಂದು ಖುರೇಷಿ ಹೇಳಿದರು.

ಅಫ್ಘಾನಿಸ್ತಾನದ ಹಿತದೃಷ್ಟಿಯಿಂದ ಸಂಧಾನದ ರಾಜಕೀಯ ಪರಿಹಾರವು ಒಳ್ಳೆಯದ್ದು ಎಂದು ಹೇಳಿದ್ದು ಇದೇ ವೇಳೆ, ತಾಲಿಬಾನ್ ಮತ್ತು ಆಫ್ಗಾನ್ ಸರ್ಕಾರದ ನಡುವಿನ ಇತ್ತೀಚಿನ ಕದನ ವಿರಾಮವನ್ನು ಅವರು ಸ್ವಾಗತಿಸಿದರು. ಅಲ್ಲದೆ ಇತ್ತೀಚಿನ ಈ ಬೆಳವಣಿಗೆಯು ಮಾತುಕತೆಗೆ ಅನುಕೂಲಕರ ವಾತಾವರಣವನ್ನು ಸೃಷ್ಟಿಸುತ್ತದೆ ಎಂದು ಆಶಿಸಿದರು.

ಪರಸ್ಪರ ಗೌರವ, ಉತ್ತಮ ನೆರೆಹೊರೆಯ ಮತ್ತು ಆರ್ಥಿಕ ಸಹಕಾರವನ್ನು ಆರಿಸುವುದನ್ನು ಹೊರತುಪಡಿಸಿ ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನಗಳಿಗೆ ಬೇರೆ ಆಯ್ಕೆಗಳಿಲ್ಲ ಎಂದು ಪಾಕಿಸ್ತಾನದ ಭೇಟಿ ವೇಳೆ ಆಫ್ಗಾನ್ ಅಧ್ಯಕ್ಷ ಅಶ್ರಫ್ ಘನಿ ಹೇಳಿದ್ದರು. ಅಫ್ಘಾನಿಸ್ತಾನದಲ್ಲಿ ನಿರಂತರ ಶಾಂತಿಯನ್ನು ಸ್ಥಾಪಿಸಲು ಪಾಕಿಸ್ತಾನವು ಪರಿಣಾಮಕಾರಿ ಮತ್ತು ಪ್ರಾಮಾಣಿಕ ಪಾತ್ರವನ್ನು ವಹಿಸಬೇಕೆಂದು ಕರೆ ನೀಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com