'ಸಕ್ಕರೆ ಬಾಂಬ್'ಗೆ ಜನ ಕಂಗಾಲ್: 1 ಕೆಜಿ ಸಕ್ಕರೆ ಬೆಲೆ ಪೆಟ್ರೋಲ್‌ಗಿಂತ ಹೆಚ್ಚು; ಇಮ್ರಾನ್ ಖಾನ್‌ಗೆ ಜನರ ಹಿಡಿ ಶಾಪ!
ಭಾರೀ ಪ್ರಮಾಣದ ಸಾಲ ಪಾಕಿಸ್ತಾನವನ್ನು ತತ್ತರಿಸುವಂತೆ ಮಾಡಿದೆ. ಡಾಲರ್ ಎದುರು ಪಾಕಿಸ್ತಾನ ರೂಪಾಯಿ ಮೌಲ್ಯ ಭಾರಿ ಪ್ರಮಾಣದಲ್ಲಿ ಕುಸಿತ ಕಂಡಿದ್ದು, 1 ಡಾಲರ್ 170+ ಪಾಕಿಸ್ತಾನಿ ರೂಪಾಯಿಯಾಗಿದೆ.
Published: 06th November 2021 04:47 PM | Last Updated: 06th November 2021 04:55 PM | A+A A-

ಇಮ್ರಾನ್ ಖಾನ್
ಇಸ್ಲಾಮಾಬಾದ್: ಭಾರೀ ಪ್ರಮಾಣದ ಸಾಲ ಪಾಕಿಸ್ತಾನವನ್ನು ತತ್ತರಿಸುವಂತೆ ಮಾಡಿದೆ. ಡಾಲರ್ ಎದುರು ಪಾಕಿಸ್ತಾನ ರೂಪಾಯಿ ಮೌಲ್ಯ ಭಾರಿ ಪ್ರಮಾಣದಲ್ಲಿ ಕುಸಿತ ಕಂಡಿದ್ದು, 1 ಡಾಲರ್ 170+ ಪಾಕಿಸ್ತಾನಿ ರೂಪಾಯಿಯಾಗಿದೆ.
ಅವಶ್ಯಕ ವಸ್ತುಗಳ ಬೆಲೆಗಳು ಗಗನಕ್ಕೇರಿದ್ದು, ಅಲ್ಲಿನ ನಾಗರಿಕರು ಇಮ್ರಾನ್ ಖಾನ್ ನೇತೃತ್ವದ ಸರ್ಕಾರವನ್ನು ತೀವ್ರವಾಗಿ ಟೀಕಿಸುತ್ತಿದ್ದಾರೆ.
ಪಾಕಿಸ್ತಾನದ ಪರಿಸ್ಥಿತಿ ಎಷ್ಟರಮಟ್ಟಿಗೆ ಹದಗೆಟ್ಟಿದೆ ಅಂದರೆ, ಅಲ್ಲಿನ ಪ್ರಜೆಗಳು ಒಂದು ಕೆಜಿ ಸಕ್ಕರೆ ತೆಗೆದುಕೊಳ್ಳಬೇಕೆಂದರೆ 150 ರೂಪಾಯಿ ಪಾವತಿಸಬೇಕಾಗುತ್ತದೆ. ಆದರೆ ಇದೇ ಸಂದರ್ಭದಲ್ಲಿ ಪೆಟ್ರೋಲ್ ಪ್ರತಿ ಲೀಟರ್ ಗೆ 138 ರೂಪಾಯಿ ಆಸುಪಾಸಿನಲ್ಲಿ ಬಿಕರಿಯಾಗುತ್ತಿದೆ.
ಪಾಕಿಸ್ತಾನದ ಮಾಧ್ಯಮ ಜಿಯೋ ನ್ಯೂಸ್ ಪ್ರಕಾರ, ದೇಶದಲ್ಲಿ ಅಗತ್ಯ ವಸ್ತುಗಳ ಬೆಲೆ ತೀವ್ರ ಏರಿಕೆಯಾಗಿದೆ. ಇತ್ತೀಚೆಗಷ್ಟೇ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್, ಬೆಲೆ ಏರಿಕೆ ನಿಯಂತ್ರಿಸುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದರು. ಆದರೂ ಸಹ ಸಕ್ಕರೆ ಬೆಲೆ 150 ರೂಪಾಯಿ ಗಡಿ ದಾಟಿದೆ.
ಪಾಕಿಸ್ತಾನದ ಡೀಲರ್ಸ್ ಅಸೋಸಿಯೇಷನ್ ಪ್ರಕಾರ, ಪೇಶಾವರದಲ್ಲಿ ಪ್ರತಿ ಕೆಜಿ ಸಕ್ಕರೆ 140 ರೂಪಾಯಿ ರೇಟ್ ನಲ್ಲಿ ಮಾರಾಟವಾಗುತ್ತಿದೆ. ಆದರೆ, ಇದು ಚಿಲ್ಲರೆ ವ್ಯಾಪಾರಿಗಳ ಕೈಯಲ್ಲಿ 145-150 ರೂಪಾಯಿಗೆ ಏರಿಕೆಯಾಗಿದೆ ಅಂತಾ ತಿಳಿಸಿದೆ.