ರಷ್ಯಾ: ಕಲ್ಲಿದ್ದಲು ಗಣಿಯಲ್ಲಿ ಮೀಥೇನ್ ಅನಿಲ ಸ್ಪೋಟ, 52 ಕಾರ್ಮಿಕರ ದಾರುಣ ಸಾವು
ಸೈಬೀರಿಯನ್ ಕಲ್ಲಿದ್ದಲು ಗಣಿಯಲ್ಲಿ ಸಂಭವಿಸಿದ ಅಗ್ನಿ ಅವಗಡದಲ್ಲಿ 52 ಗಣಿಕಾರ್ಮಿಕರು ಸಾವನ್ನಪ್ಪಿದ್ದಾರೆ. ಗಣಿಯಲ್ಲಿ ವಿಷಕಾರಿ ಮೀಥೇನ್ ಅನಿಲ ಸ್ಫೋಟದಿಂದ ಬೆಂಕಿ ಕಾಣಿಸಿಕೊಂಡು 52 ಗಣಿ ಕಾರ್ಮಿಕರು ಸಾವನ್ನಪ್ಪಿದ್ದಾರೆ.
Published: 26th November 2021 10:43 AM | Last Updated: 26th November 2021 01:11 PM | A+A A-

ಸಾಂದರ್ಭಿಕ ಚಿತ್ರ
ಮಾಸ್ಕೋ: ಸೈಬೀರಿಯನ್ ಕಲ್ಲಿದ್ದಲು ಗಣಿಯಲ್ಲಿ ಸಂಭವಿಸಿದ ಅಗ್ನಿ ಅವಗಡದಲ್ಲಿ 52 ಗಣಿಕಾರ್ಮಿಕರು ಸಾವನ್ನಪ್ಪಿದ್ದಾರೆ. ಗಣಿಯಲ್ಲಿ ವಿಷಕಾರಿ ಮೀಥೇನ್ ಅನಿಲ ಸ್ಫೋಟದಿಂದ ಬೆಂಕಿ ಕಾಣಿಸಿಕೊಂಡು 52 ಗಣಿ ಕಾರ್ಮಿಕರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಅವಗಡ ನಡೆದ ಸ್ಥಳದಿಂದ 14 ಶವಗಳನ್ನು ಹೊರತೆಗೆಯಲಾಗಿದ್ದು, ವಿಷಕಾರಿ ಹೊಗೆ ಕಾರಣ ಉಳಿದವರ ಹುಡುಕಾಟ ಸ್ಥಗಿತಗೊಳಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ನೈಋತ್ಯ ಸೈಬೀರಿಯಾದ ಕೆಮೆರೊವೊ ಪ್ರದೇಶದ ಲಿಸ್ಟ್ವ್ಯಾಜ್ನಾಯದ ಗಣಿಯಲ್ಲಿ ಒಟ್ಟು 285 ಜನರು ಕಾರ್ಯ ನಿರ್ವಹಿಸುತ್ತಿದ್ದರು.
ಮೀಥೇನ್ ಅನಿಲ ಸ್ಫೋಟಗೊಂಡು ಬೆಂಕಿ ಕಾಣಿಸಿಕೊಂಡಿದ್ದು, ವಿಷಕಾರಿ ಹೊಗೆ ದಟ್ಟವಾಗಿ ಆವರಿಸುತ್ತಿದ್ದಂತೆಯ ರಕ್ಷಣಾ ಸಿಬ್ಬಂದಿಗಳು 239 ಕಾರ್ಮಿಕರನ್ನ ಸುರಕ್ಷಿತ ಸ್ಥಳಕ್ಕೆ ವರ್ಗಾಯಿಸಿದರು. ಈ ವೇಳೆ 49 ಮಂದಿ ಗಾಯಗೊಂಡಿದ್ದು, ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಲ್ಲಿದ್ದಲು ಗಣಿಯ 250 ಮೀಟರ್ ಆಳದ ವರೆಗೆ ಹೊಗೆ ಆವರಿಸಿದ ಪರಿಣಾಮ 11 ಗಣಿ ಕಾರ್ಮಿಕರು ಮೃತಪಟ್ಟಿರುವುದಾಗಿ ಈ ಮೊದಲು ವರದಿಯಾಗಿತ್ತು. ಅಂತಿಮವಾಗಿ 52 ಮಂದಿ ಮೃತಪಟ್ಟಿರುವುದಾಗಿ ಖಚಿತವಾಗಿದೆ. ಸುರಕ್ಷತಾ ಕ್ರಮಗಳ ಉಲ್ಲಂಘನೆ ಆರೋಪದಲ್ಲಿ ಗಣಿಯ ಹಿರಿಯ ವ್ಯವಸ್ಥಾಪಕನನ್ನು ಬಂಧಿಸಲಾಗಿದೆ ಎಂದು ಸುದ್ದಿ ಸಂಸ್ಥೆ ಎಎಫ್‌ಪಿ ವರದಿ ಮಾಡಿದೆ.
ಗಣಿ ದುರಂತಕ್ಕೆ ರಷ್ಯಾ ಆಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ದುರಂತ ನಡೆದ ಕೆಮೆರೊವೊ ಪ್ರದೇಶದಲ್ಲಿ ಶುಕ್ರವಾರದಿಂದ ಭಾನುವಾರದವರೆಗೆ ಮೂರು ದಿನಗಳ ಶೋಕಾಚರಣೆ ಘೋಷಿಸಲಾಗಿದೆ