ಭಾರತದ ಮೇಲೆ ನಿಗಾ ಉದ್ದೇಶ: ಅಫ್ಘಾನಿಸ್ತಾನದ ಬಾಗ್ರಂ ವಾಯುನೆಲೆ ಸುಪರ್ದಿಗೆ ಚೀನಾ ಸಂಚು!
ಅಮೆರಿಕಾಧ್ಯಕ್ಷ ಜೋ ಬೈಡನ್ ಅವರ ಸರ್ಕಾರ ಈ ಸಂದರ್ಭದಲ್ಲಿ ತನ್ನ ಗೆಳೆಯರಾದ ಭಾರತ, ಜಪಾನ್, ಆಸ್ಟ್ರೇಲಿಯಾ ಬೆಂಬಲಕ್ಕೆ ನಿಲ್ಲಬೇಕು ಎಂದು ಅಮೆರಿಕದ ರಾಜತಾಂತ್ರಿಕ ಅಧಿಕಾರಿ ನಿಕ್ಕಿ ಹಾಲೆ ಪ್ರತಿಪಾದಿಸಿದ್ದಾರೆ.
Published: 02nd September 2021 12:14 PM | Last Updated: 02nd September 2021 01:09 PM | A+A A-

ಸಂಗ್ರಹ ಚಿತ್ರ
ವಾಷಿಂಗ್ಟನ್: ಅಫ್ಘಾನಿಸ್ತಾನದ ಬಾಗ್ರಂ ವಾಯುನೆಲೆ ಕಳೆದ 20 ವರ್ಷಗಳಿಂದ ಅಮೆರಿಕದ ಪ್ರಮುಖ ವಾಯುನೆಲೆಯಾಗಿತ್ತು. ಅಮೆರಿಕ ಈಗ ಜಾಗ ಖಾಲಿ ಮಾಡಿರುವುದರಿಂದ ಬಾಗ್ರಂ ವಾಯುನೆಲೆ ತಾಲಿಬಾನ್ ವಶವಾಗಿತ್ತು.
ಇದೀಗ ಇದೇ ಬಾಗ್ರಂ ವಾಯುನೆಲೆಯನ್ನು ಚೀನಾ ತನ್ನ ಸುಪರ್ದಿಗೆ ಪಡೆದುಕೊಳ್ಳಲು ಸಂಚು ನಡೆಸಿದೆ ಎನ್ನುವ ಸ್ಫೋಟಕ ಮಾಹಿತಿಯನ್ನು ಅಮೆರಿಕದ ರಾಜತಾಂತ್ರಿಕ ಅಧಿಕಾರಿ ನಿಕ್ಕಿ ಹಾಲೆ ಹೊರ ಹಾಕಿದ್ದಾರೆ.
ಭಾರತದ ಮೇಲೆ ನಿಗಾ ಇರಿಸುವ ಉದ್ದೇಶದಿಂದ ಚೀನಾ ಬಾಗ್ರಂ ವಾಯುನೆಲೆಯ ಮೇಲೆ ಕಣ್ಣಿಟ್ಟಿದೆ. ಅಲ್ಲದೆ ಪಾಕಿಸ್ತಾನವನ್ನು ಭಾರತ ವಿರುದ್ಧ ಎತ್ತಿಕಟ್ಟುವ ಕೆಲಸದಲ್ಲಿ ನಿರತವಾಗಿದೆ. ಈ ಬಗ್ಗೆ ಎಚ್ಚರ ವಹಿಸಬೇಕಾಗಿದೆ ಎಂದವರು ಇದೇ ಸಂದರ್ಭದಲ್ಲಿ ಹೇಳಿದ್ದಾರೆ. ನಿಕ್ಕಿ ಹಾಲೆ ಅವರು ಈ ಹಿಂದೆ ವಿಶ್ವಸಂಸ್ಥೆಯಲ್ಲಿ ಅಮೆರಿಕದ ಪ್ರತಿನಿಧಿಯಾಗಿದ್ದರು.
ಅಮೆರಿಕಾಧ್ಯಕ್ಷ ಜೋ ಬೈಡನ್ ಅವರ ಸರ್ಕಾರ ಈ ಸಂದರ್ಭದಲ್ಲಿ ತನ್ನ ಗೆಳೆಯರಾದ ಭಾರತ, ಜಪಾನ್, ಆಸ್ಟ್ರೇಲಿಯಾ ಬೆಂಬಲಕ್ಕೆ ನಿಲ್ಲಬೇಕು ಎಂದು ನಿಕ್ಕಿ ಹಾಲೆ ಪ್ರತಿಪಾದಿಸಿದ್ದಾರೆ. ಅಲ್ಲದೆ ಭಯೋತ್ಪಾದನೆ ವಿರುದ್ಧದ ಸಮರವನ್ನು ಜಾಗತಿಕ ಮಟ್ತಕ್ಕೆ ವಿಸ್ತರಿಸುವ ಸಮಯವಿದು ಎಂದವರು ಹೇಳಿದ್ದಾರೆ.
ಅಫ್ಗಾನಿಸ್ತಾನ ತಾಲಿಬಾನ್ ವಶವಾಗಿರುವುದನ್ನು ಜಿಹಾದಿ ಉಗ್ರರು ಸಂಭಮಿಸುತ್ತಿದ್ದಾರೆ. ಹೀಗಾಗಿ ಮುಂಬರುವ ದಿನಗಳಲ್ಲಿ ಜಗತ್ತಿನಾದ್ಯಂತ ಉಗ್ರಸಂಘಟನೆಗಳು ನೇಮಕಾತಿ ಪ್ರಕ್ರಿಯೆಗೆ ಚಾಲನೆ ನೀಡುವ ಆತಂಕವನ್ನು ನಿಕ್ಕಿ ವ್ಯಕ್ತಪಡಿಸಿದ್ದಾರೆ.