ಪಾಕಿಸ್ತಾನದ ಭದ್ರತಾ ಸಲಹೆಗಾರ ಯೂಸುಫ್
ವಿದೇಶ
ಇದಕ್ಕಿಂತ ಹೆಚ್ಚಿನ ಆಫ್ಘನ್ ನಿರಾಶ್ರಿತರಿಗೆ ಆಶ್ರಯ ನೀಡುವ ಸಾಮರ್ಥ್ಯ ಪಾಕಿಸ್ತಾನಕ್ಕಿಲ್ಲ: ಪಾಕ್ ಭದ್ರತಾ ಸಲಹೆಗಾರ
ಪಾಕಿಸ್ತಾನ ಈಗಾಗಲೇ 30 ಲಕ್ಷ ಆಫ್ಘನ್ ವಲಸಿಗರಿಗೆ ಆಶ್ರಯ ನೀಡಿದೆ. ಇನ್ನುಮುಂದೆ ಇದಕ್ಕಿಂತ ಹೆಚ್ಚಿನ ವಲಸಿಗರನ್ನು ಸ್ವೀಕರಿಸಲು ದೇಶದ ಆರ್ಥಿಕ ಪರಿಸ್ಥಿತಿ ತಡೆಯೊಡ್ಡುತ್ತಿದೆ ಎಂದು ಮೊಯೀದ್ ಯೂಸುಫ್ ಅಸಹಾಯಕತೆ ತೋರ್ಪಡಿಸಿದ್ದಾರೆ.
ಇಸ್ಲಾಮಾಬಾದ್: ಪಾಕಿಸ್ತಾನದ ರಾಷ್ಟ್ರೀಯ ಭದ್ರತಾ ಸಲಹೆಗಾರ ಯೂಸುಫ್ ಇನ್ನುಮುಂದೆ ಆಫ್ಘನ್ ವಲಸಿಗರಿಗೆ ತಮ್ಮ ದೇಶ ನೆಲೆ ಒದಗಿಸಲು ಆಗುವುದಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ಅದಕ್ಕೆ ಹಲವು ಕಾರಣಗಳನ್ನು ಅವರು ನೀಡಿದ್ದಾರೆ.
ಈಗಾಗಲೇ ಪಾಕ್ 30 ಲಕ್ಷ ಆಫ್ಘನ್ ವಲಸಿಗರನ್ನು ಸ್ವೀಕರಿಸಿದೆ. ಈಗಾಗಲೇ ಆರ್ಥಿಕ ಸಂಕಷ್ಟದಿಂದ ನಲುಗುತ್ತಿರುವ ಪಾಕ್ ಗೆ ಆಫ್ಘನ್ ವಲಸಿಗ ಸಮಸ್ಯೆ ತಲೆನೋವಾಗಿ ಪರಿಣಮಿಸಿದೆ. ಅವರೆಲ್ಲರನ್ನೂ ಸಲಹುವ ಸಾಮರ್ಥ್ಯ ತಮಗಿಲ್ಲ ಎಂದು ಯೂಸುಫ್ ಸೂಚ್ಯವಾಗಿ ತಿಳಿಸಿದ್ದಾರೆ.
ಇದೇ ವೇಳೆ ಅವರು ಅಫ್ಘಾನಿಸ್ತಾನ ಜನತೆಯ ಸಹಾಯಕ್ಕೆ ಅಂತಾರಾಷ್ಟ್ರೀಯ ಸಮುದಾಯ ಮುಂದೆ ಬರಬೇಕು. ಆಫ್ಘನ್ ಜನರನ್ನು ವಿಶ್ವ ಕೈಬಿಡಬಾರದು. ಉಗ್ರಗಾಮಿಗಳು ಅಲ್ಲಿನ ಪರಿಸ್ಥಿತಿ ಲಾಭ ಪಡೆಯಲು ಹೊಂಚು ಹಾಕಿದ್ದಾರೆ. ಅದಕ್ಕೆ ಅಂತಾರಾಷ್ಟ್ರೀಯ ಸಮುದಾಯ ಅವಕಾಶ ಕೊಡಬಾರದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

