ಸಚಿವಾಲಯ ಪ್ರವೇಶಕ್ಕೆ ಮಹಿಳಾ ಉದ್ಯೋಗಿಗಳಿಗೆ ತಾಲಿಬಾನ್ ನಿಷೇಧ
ಆಫ್ಧಾನಿಸ್ತಾನವನ್ನು ವಶಪಡಿಸಿಕೊಂಡ ಬೆನ್ನಲ್ಲೇ ತಾಲಿಬಾನ್ ನಿಧಾನವಾಗಿ ತನ್ನ ಸಿದ್ದಾಂತವನ್ನು ಆಫ್ಗನ್ ನಾಗರೀಕರ ಮೇಲೆ ಹೇರುತ್ತಿದ್ದು, ಇದೀಗ ಆಫ್ಘನ್ ಮಹಿಳಾ ಉದ್ಯೋಗಿಗಳಿಗೆ ಸಚಿವಾಲಯ ಪ್ರವೇಶಕ್ಕೆ ನಿಷೇಧ ಹೇರಿದೆ.
Published: 17th September 2021 01:34 PM | Last Updated: 17th September 2021 01:44 PM | A+A A-

ತಾಲಿಬಾನ್ ಮತ್ತು ಮಹಿಳಾ ಉದ್ಯೋಗಿಗಳು
ಕಾಬೂಲ್: ಆಫ್ಧಾನಿಸ್ತಾನವನ್ನು ವಶಪಡಿಸಿಕೊಂಡ ಬೆನ್ನಲ್ಲೇ ತಾಲಿಬಾನ್ ನಿಧಾನವಾಗಿ ತನ್ನ ಸಿದ್ದಾಂತವನ್ನು ಆಫ್ಗನ್ ನಾಗರೀಕರ ಮೇಲೆ ಹೇರುತ್ತಿದ್ದು, ಇದೀಗ ಆಫ್ಘನ್ ಮಹಿಳಾ ಉದ್ಯೋಗಿಗಳಿಗೆ ಸಚಿವಾಲಯ ಪ್ರವೇಶಕ್ಕೆ ನಿಷೇಧ ಹೇರಿದೆ.
ಅಫ್ಘಾನಿಸ್ತಾನದ ಮಹಿಳಾ ವ್ಯವಹಾರಗಳ ಸಚಿವಾಲಯದೊಳಕ್ಕೆ ಮಹಿಳಾ ಉದ್ಯೋಗಿಗಳು ಪ್ರವೇಶಿಸದಂತೆ ತಾಲಿಬಾನ್ ನಿರ್ಬಂಧ ಹೇರಿದ್ದು, ಸಚಿವಾಲಯದೊಳಕ್ಕೆ ಕೇವಲ ಪುರುಷ ಉದ್ಯೋಗಿಗಳ ಪ್ರವೇಶಕ್ಕೆ ಮಾತ್ರ ಅನುಮತಿ ಕಲ್ಪಿಸಿಕೊಟ್ಟಿರುವುದಾಗಿ ಸಚಿವಾಲಯ ತಿಳಿಸಿದೆ.
ಇದನ್ನೂ ಓದಿ: ಸಾವಿನ ವದಂತಿ ನಿರಾಕರಿಸಿ ಆಡಿಯೋ ಬಿಡುಗಡೆ ಮಾಡಿದ ತಾಲಿಬಾನ್ ಸಹ ಸಂಸ್ಥಾಪಕ ಅಬ್ದುಲ್ ಘನಿ ಬರಾದರ್
ಈ ಬಗ್ಗೆ ರಷ್ಯಾ ಮೂಲದ ಸುದ್ದಿ ಸಂಸ್ಥೆ ಸ್ಪುಟ್ನಿಕ್ ನ್ಯೂಸ್ ಏಜೆನ್ಸಿ ವರದಿ ಮಾಡಿದ್ದು, 'ನಾಲ್ವರು ಮಹಿಳಾ ಉದ್ಯೋಗಿಗಳಿಗೆ ಸಚಿವಾಲಯದೊಳಕ್ಕೆ ಪ್ರವೇಶಿಸಲು ಅನುಮತಿ ನೀಡಿಲ್ಲ. ತಾಲಿಬಾನ್ ನಿರ್ಧಾರದ ವಿರುದ್ಧ ಮಹಿಳೆಯರು ಸಚಿವಾಲಯದ ಸಮೀಪ ಪ್ರತಿಭಟನೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಈ ಹಿಂದೆ, ತಾಲಿಬಾನ್ ವಕ್ತಾರ ಜಬಿಹುಲ್ಲಾ ಮುಜಾಹಿದ್ ಇಸ್ಲಾಂ ತತ್ವಗಳ ಆಧಾರದ ಮೇಲೆ ಮಹಿಳೆಯರಿಗೆ ತಮ್ಮ ಹಕ್ಕುಗಳನ್ನು ನೀಡಲು ಬದ್ಧರಾಗಿರುವುದಾಗಿ ಜನರಿಗೆ ಭರವಸೆ ನೀಡಿದ್ದರು. ಮಹಿಳೆಯರಿಗೆ ಆರೋಗ್ಯ ಕ್ಷೇತ್ರಗಳಲ್ಲಿ ಮತ್ತು ಇತರೆ ಕ್ಷೇತ್ರಗಳಲ್ಲಿ ಕೆಲಸ ಮಾಡಲು ಅವಕಾಶ ನೀಡಲಾಗುವುದು ಮತ್ತು ಅವರ ವಿರುದ್ಧ ಯಾವುದೇ ತಾರತಮ್ಯ ಇರುವುದಿಲ್ಲ ಎಂದು ಅವರು ಹೇಳಿಕೊಂಡಿದ್ದರು.
ಇದನ್ನೂ ಓದಿ: ವಿರೋಧಿಗಳ ಸರ್ಕಾರವಿದ್ದಾಗಲೂ ಜೀವಭಯದಲ್ಲಿ ಕಾಬೂಲ್ನಲ್ಲೇ ಅಡಗಿದ್ದೆ: ತಾಲಿಬಾನ್ ವಕ್ತಾರ
ಅಫ್ಘಾನಿಸ್ತಾನದಲ್ಲಿ ಅಮೆರಿಕ ನೇತೃತ್ವದ ಮೈತ್ರಿ ಪಡೆ ಕಾರ್ಯಾಚರಣೆ ನಡೆಸುತ್ತಿದ್ದ ಸಂದರ್ಭದಲ್ಲಿ ತಾಲಿಬಾನ್ ಅಸ್ತಿತ್ವ ಕಳೆದುಕೊಂಡಿತ್ತು. ಅಮೆರಿಕ ನೂತನ ಅಧ್ಯಕ್ಷ ಜೋ ಬೈಡೆನ್ ಅವರು ಅಫ್ಘಾನಿಸ್ತಾನದಲ್ಲಿನ ಅಮೆರಿಕ ಸೇನಾ ಪಡೆಯನ್ನು ವಾಪಸ್ ಕರೆಯಿಸಿಕೊಳ್ಳುವುದಾಗಿ ಘೋಷಿಸಿದ್ದರು. ಅಫ್ಘಾನಿಸ್ತಾನದಿಂದ ಅಮೆರಿಕ ಸೇನಾಪಡೆ ವಾಪಸ್ ಆಗುತ್ತಿದ್ದಂತೆಯೇ ತಾಲಿಬಾನ್ ಉಗ್ರರು ಅಫ್ಘನ್ ಆಡಳಿತವನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡಿದ್ದರು.