ಟ್ರಂಪ್ ಅವಧಿಯ ಹೆಚ್-1ಬಿ ವೀಸಾ ಆಯ್ಕೆ ಪ್ರಕ್ರಿಯೆ ಪ್ರಸ್ತಾವ ವಜಾಗೊಳಿಸಿದ ಯುಎಸ್ ಕೋರ್ಟ್

ಅಮೆರಿಕದ ಹೆಚ್-1 ಬಿ ವೀಸಾ ಆಯ್ಕೆ ಪ್ರಕ್ರಿಯೆಯಲ್ಲಿ ನಿಕಟಪೂರ್ವ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಅವಧಿಯ ಕಾನೂನು ಪ್ರಸ್ತಾವವನ್ನು ಅಮೆರಿಕದ ಫೆಡರಲ್ ನ್ಯಾಯಾಧೀಶರು ವಜಾಗೊಳಿಸಿದ್ದಾರೆ. 
ಹೆಚ್-1 ಬಿ ವೀಸಾ
ಹೆಚ್-1 ಬಿ ವೀಸಾ

ವಾಷಿಂಗ್ ಟನ್: ಅಮೆರಿಕದ ಹೆಚ್-1 ಬಿ ವೀಸಾ ಆಯ್ಕೆ ಪ್ರಕ್ರಿಯೆಯಲ್ಲಿ ನಿಕಟಪೂರ್ವ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಅವಧಿಯ ಕಾನೂನು ಪ್ರಸ್ತಾವವನ್ನು ಅಮೆರಿಕದ ಫೆಡರಲ್ ನ್ಯಾಯಾಧೀಶರು ವಜಾಗೊಳಿಸಿದ್ದಾರೆ. 

ಅಮೆರಿಕದ ಈಗಿನ ಹೆಚ್-1 ಬಿ ಲಾಟರಿ ವ್ಯವಸ್ಥೆಯ ಬದಲಿಗೆ ವೇತನ ಮಟ್ಟವನ್ನು ಆಧರಿಸಿ ವೀಸಾ ಆಯ್ಕೆ ಪ್ರಕ್ರಿಯೆಯನ್ನು ಜಾರಿಗೆ ಟ್ರಂಪ್ ಅವಧಿಯ ಕಾನೂನು ಉದ್ದೇಶಿಸಿತ್ತು.  

ಅಮೆರಿಕದ ಕ್ಯಾಲಿಫೋರ್ನಿಯಾದ ಉತ್ತರ ಜಿಲ್ಲೆಯ ನ್ಯಾಯಾಧೀಶ ಜೆಫ್ರಿ ಎಸ್ ವೈಟ್, ಈ ಕಾನೂನು ಘೋಷಣೆಯ ಸಂದರ್ಭದಲ್ಲಿ ಆಗಿನ ಹಂಗಾಮಿ ಹೋಮ್ ಲ್ಯಾಂಡ್ ಭದ್ರತೆ ಕಾರ್ಯದರ್ಶಿ (ಸಚಿವ) ಚಾಡ್ ವುಲ್ಫ್ ಕಾನೂನಾತ್ಮಕವಾಗಿ ತಮ್ಮ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿರಲಿಲ್ಲ. ಈ ಆಧಾರದಲ್ಲಿ ಟ್ರಂಪ್ ಅವಧಿಯ ಕಾನೂನನ್ನು ವಜಾಗೊಳಿಸುತ್ತಿರುವುದಾಗಿ ಹೇಳಿದ್ದಾರೆ.

ಟ್ರಂಪ್ ಅವಧಿಯ ಕಾನೂನನ್ನು ಪ್ರಶ್ನಿಸಿದ್ದ ಪ್ರಕರಣದಲ್ಲಿ ಅಮೆರಿಕದ ಚೇಂಬರ್ ಆಫ್ ಕಾಮರ್ಸ್ ನ ನಿರ್ಣಯವನ್ನು ಕೋರ್ಟ್ ತನ್ನ ಆದೇಶದಲ್ಲಿ ಉಲ್ಲೇಖಿಸಿದೆ. 

ಹೆಚ್-1 ಬಿ ವೀಸಾ ವಲಸೆಯೇತರ ವೀಸಾ ಆಗಿದ್ದು, ವಿದೇಶಿ ನೌಕರನನ್ನು ತಾಂತ್ರಿಕ ಪರಿಣತಿಯ ಅಗತ್ಯವಿರುವ ವಿಶೇಷ ಉದ್ಯೋಗಗಳಿಗೆ ನೇಮಕ ಮಾಡಿಕೊಳ್ಳುವುದಕ್ಕೆ ಅಮೆರಿಕ ಸಂಸ್ಥೆಗಳಿಗೆ ಅನುವು ಮಾಡಿಕೊಡುವ ವೀಸಾ ಆಗಿದೆ.

ಭಾರತ- ಚೀನಾದಂತಹ ರಾಷ್ಟ್ರಗಳಿಂದ ಸಾವಿರಾರು ನೌಕರರನ್ನು ನೇಮಕ ಮಾಡಿಕೊಳ್ಳುವುದಕ್ಕೆ ಈ ವೀಸಾದ ಮೇಲೆ ಅನೇಕ ಅಮೆರಿಕದ ಸಂಸ್ಥೆಗಳು ಅವಲಂಬಿತವಾಗಿವೆ.

ವಾರ್ಷಿಕವಾಗಿ 65,000 ಹೆಚ್-1 ಬಿ ವೀಸಾಗಳಿಗೆ ಅಮೆರಿಕ ಮಿತಿ ಹಾಕಿಕೊಂಡಿದ್ದು, ಅಮೆರಿಕದಲ್ಲೇ ಉನ್ನತ ಪದವಿಯನ್ನು ಪಡೆದ ವಿದೇಶಿಗರಿಗಾಗಿ ಹೆಚ್ಚುವರಿ 20,000 ಹೆಚ್-1 ಬಿ ವೀಸಾಗಳನ್ನು ಮೀಸಲಿಟ್ಟಿದೆ.

ಹೆಚ್-1 ಬಿ ವೀಸಾ ಪಡೆಯುವುದಕ್ಕೆ ಅರ್ಜಿಯನ್ನು ಪರಿಗಣಿಸಲು ಈಗ ಮೊದಲು ಬಂದವರಿಗೆ ಮೊದಲ ಆದ್ಯತೆ ಹಾಗೂ ಲಾಟರಿ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲಾಗಿದೆ.

ಅಮೆರಿಕದ ನಿಕಟಪೂರ್ವ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಅಧಿಕಾರಾವಧಿಯ ಕೊನೆಯ ದಿನಗಳಲ್ಲಿ ಅಮೆರಿಕದ ಪೌರತ್ವ ಹಾಗೂ ವಲಸೆ ಸೇವೆಗಳ ಇಲಾಖೆ (ಯುಎಸ್ ಸಿಐಎಸ್) ಹೆಚ್-1 ಬಿ ವೀಸಾ ಅರ್ಜಿಗಳನ್ನು ಆಯ್ಕೆ ಮಾಡಲು ಸಾಂಪ್ರದಾಯಿಕ ಲಾಟರಿ ವ್ಯವಸ್ಥೆಯನ್ನು ತೆಗೆದುಹಾಕುತ್ತಿರುವುದಾಗಿ ಘೋಷಿಸಿತ್ತು.

ಹೊಸ ಆದೇಶದಲ್ಲಿ ಅಮೆರಿಕದ ನೌಕರರ ಹಿತಾಸಕ್ತಿಯನ್ನು ಕಾಪಾಡಲು ವೇತನ ಆಧಾರದಲ್ಲಿ ಹೆಚ್-1 ಬಿ ವೀಸಾ ಆಯ್ಕೆ ಪ್ರಕ್ರಿಯೆ ಜಾರಿಗೊಳಿಸುವುದಾಗಿ ತಿಳಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com