ಢಾಕಾ: ಬಾಂಗ್ಲಾ ದೇಶದಲ್ಲಿರುವ ಹಿಂದೂ ಸಮುದಾಯಕ್ಕೆ ನನಗೆ ಇರುವಷ್ಟೇ ಹಕ್ಕುಗಳೇ ಇವೆ ಎಂದು ಪ್ರಧಾನಿ ಶೇಖ್ ಹಸೀನಾ ಹೇಳಿದ್ದಾರೆ.
ದುರ್ಗಾ ಪೂಜೆ ಹಬ್ಬದ ಆಚರಣೆಯಲ್ಲಿ ಪಶ್ಚಿಮ ಬಂಗಾಳಕ್ಕಿಂತಲೂ ಢಾಕಾದಲ್ಲಿ ಹೆಚ್ಚಿನ ದುರ್ಗಾ ಮಂಟಪಗಳಿರುತ್ತದೆ ಎಂದು ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ಪ್ರತಿಪಾದಿಸಿದ್ದಾರೆ.
ಕೃಷ್ಣ ಜನ್ಮಾಷ್ಟಮಿಯ ಅಂಗವಾಗಿ ಹಿಂದೂ ಸಮುದಾಯದೊಂದಿಗೆ ಸಂವಹನ ನಡೆಸಿರುವ ಹಸೀನಾ, ಸಮುದಾಯದ ಮಂದಿ ಅಲ್ಪಸಂಖ್ಯಾತರೆಂದು ಭಾವಿಸಿಕೊಳ್ಳಬಾರದು, ಬಾಂಗ್ಲಾದೇಶದಲ್ಲಿ ಧರ್ಮಗಳನ್ನು ಲೆಕ್ಕಿಸದೇ ಎಲ್ಲರೂ ಸಮಾನ ಹಕ್ಕುಗಳನ್ನು ಹೊಂದಿದ್ದಾರೆ ಎಂದು ಹೇಳಿದ್ದಾರೆ.
ನಾವು ಎಲ್ಲಾ ಧರ್ಮ, ಮತೀಯರೂ ಸಮಾನ ಹಕ್ಕುಗಳನ್ನು ಹೊಂದಿರುವುದನ್ನು ಬಯಸುತ್ತೇವೆ. ನೀವು ಈ ದೇಶದ ಜನರು, ನನಗೆ ಎಷ್ಟು ಹಕ್ಕು ಇದೆಯೋ ಅಷ್ಟೇ ಹಕ್ಕು ಇಲ್ಲಿ ನಿಮಗೂ ಇದೆ ಎಂದು ಹಿಂದೂ ಸಮುದಾಯಕ್ಕೆ ಶೇಖ್ ಹಸೀನಾ ಹೇಳಿರುವುದನ್ನು ಢಾಕಾ ಟ್ರಿಬ್ಯೂನ್ ಪತ್ರಿಕೆ ವರದಿ ಮಾಡಿದೆ.
ಢಾಕಾದಲ್ಲಿರುವ ಢಾಕೇಶ್ವರಿ ಮಂದಿರದಲ್ಲಿ ಹಾಗೂ ಚಟ್ಟೋಗ್ರಾಮ್ ನಲ್ಲಿರುವ ಜೆಎಂ ಸೇನ್ ಹಾಲ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಾಂಗ್ಲಾ ಪ್ರಧಾನಿ ವರ್ಚ್ಯುಯಲ್ ಆಗಿ ಭಾಗವಹಿಸಿದ್ದರು.
ದುರ್ಗಾ ಪೂಜೆ ಹಬ್ಬದ ಆಚರಣೆಯಲ್ಲಿ ಪಶ್ಚಿಮ ಬಂಗಾಳಕ್ಕಿಂತಲೂ ಢಾಕಾದಲ್ಲಿ ಹೆಚ್ಚಿನ ದುರ್ಗಾ ಮಂಟಪಗಳಿರುತ್ತದೆ ಎಂದು ಹೇಳಿರುವ ಬಾಂಗ್ಲಾ ಪ್ರಧಾನಿ, ಯಾವುದೇ ಅಹಿತಕರ ಘಟನೆ ಸಂಭವಿಸಿದಾಗಲೆಲ್ಲಾ, ಅದನ್ನು ಬಾಂಗ್ಲಾದೇಶದಲ್ಲಿ ಹಿಂದೂಗಳಿಗೆ ಯಾವುದೇ ಹಕ್ಕುಗಳಿಲ್ಲ ಎಂಬಂತೆ ತೋರಿಸಲಾಗುತ್ತದೆ ಎಂದು ಬಾಂಗ್ಲಾ ಪ್ರಧಾನಿ ವಿಷಾದ ವ್ಯಕ್ತಪಡಿಸಿದ್ದಾರೆ.
Advertisement