ರಷ್ಯಾದ ಖಾಸಗಿ ಮಿಲಿಟರಿ ಕಂಪನಿ, ವ್ಯಾಗ್ನರ್ ಗ್ರೂಪ್ ಉಕ್ರೇನಿನಲ್ಲಿ ಏನು ಮಾಡುತ್ತಿದೆ?

ವ್ಯಾಗ್ನರ್ ಪ್ರಮುಖವಾಗಿ ಸೇನೆಯಿಂದ ನಿವೃತ್ತಿ ಹೊಂದಿರುವ, ಇನ್ನೂ ಸಾಲಗಳನ್ನು ತೀರಿಸಲು ದುಡಿಯುವ ಅನಿವಾರ್ಯತೆ ಹೊಂದಿರುವ ನಿವೃತ್ತ ಯೋಧರನ್ನೇ ಪ್ರಮುಖವಾಗಿ ಸೇರಿಸಿಕೊಳ್ಳುತ್ತದೆ ಎಂದು ರಾಯಲ್ ಯುನೈಟೆಡ್ ಸರ್ವಿಸಸ್ ಇನ್ಸ್ಟಿಟ್ಯೂಟಿನ ಅಸೋಸಿಯೇಟ್ ಫೆಲೋ ಸ್ಯಾಮ್ಯುಯೆಲ್ ರಾಮಾನಿ ಅಭಿಪ್ರಾಯಪಡುತ್ತಾರೆ.
ಉಕ್ರೇನ್ ನಲ್ಲಿ ರಷ್ಯಾದ ಮಿಲಿಟರಿ ವಾಹನ
ಉಕ್ರೇನ್ ನಲ್ಲಿ ರಷ್ಯಾದ ಮಿಲಿಟರಿ ವಾಹನ

- ಗಿರೀಶ್ ಲಿಂಗಣ್ಣ
ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ

ಬ್ರಿಟಿಷ್ ಮಿಲಿಟರಿ ಗುಪ್ತಚರ ಇಲಾಖೆಯ ಪ್ರಕಾರ, ರಷ್ಯಾದ ಖಾಸಗಿ ಮಿಲಿಟರಿ ಸಂಸ್ಥೆಯಾದ ವ್ಯಾಗ್ನರ್ ಗ್ರೂಪ್‌ನ 1,000 ಸೈನಿಕರು ಪ್ರಸ್ತುತ ಪೂರ್ವ ಉಕ್ರೇನಿನಲ್ಲಿ ನಿಯೋಜನೆಗೊಂಡಿದ್ದಾರೆ. ಈ ಸಂಸ್ಥೆ ಕಳೆದ ಎಂಟು ವರ್ಷಗಳಿಂದ ಉಕ್ರೇನ್, ಸಿರಿಯಾ, ಹಾಗೂ ಆಫ್ರಿಕಾದ ದೇಶಗಳಲ್ಲಿ ಕಾರ್ಯ ನಿರ್ವಹಿಸುತ್ತಾ ಬಂದಿದೆ. ಇದು ಸತತವಾಗಿ ಮಾನವ ಹಕ್ಕುಗಳ ಉಲ್ಲಂಘನೆ ಮತ್ತು ಯುದ್ಧ ಅಪರಾಧಗಳ ಆರೋಪಗಳನ್ನೂ ಎದುರಿಸುತ್ತಾ ಬಂದಿದೆ.

ಹಿನ್ನೆಲೆ:
51 ವರ್ಷ ವಯಸ್ಸಿನ, ಮಾಜಿ ರಷ್ಯನ್ ಸೇನಾಧಿಕಾರಿ ಡಿಮಿಟ್ರಿ ಉಟ್ಕಿನ್ ಅವರು ವ್ಯಾಗ್ನರ್ ಗ್ರೂಪನ್ನು ಸ್ಥಾಪಿಸಿದ್ದಾರೆ ಎನ್ನಲಾಗುತ್ತದೆ. ಅವರು ಕೇವಲ ಮಾಜಿ ವಿಶೇಷ ಪಡೆಗಳ ಅಧಿಕಾರಿ ಮಾತ್ರವಷ್ಟೇ ಅಲ್ಲದೆ, ಸ್ವತಃ ಚೆಚೆನ್ ಯುದ್ಧಗಳಲ್ಲಿ ಭಾಗಿಯಾಗಿರುವ ಯೋಧ‌ ಹಾಗೂ ರಷ್ಯಾದ ಮಿಲಿಟರಿ ಗುಪ್ತಚರ ಸಂಸ್ಥೆಯಾದ ಗ್ರುನ ಲೆಫ್ಟಿನೆಂಟ್ ಕರ್ನಲ್ ಸಹ ಆಗಿದ್ದವರು.

ಲಂಡನ್ನಿನ‌ ಕಿಂಗ್ಸ್ ಕಾಲೇಜಿನಲ್ಲಿ ಸಂಘರ್ಷ ಮತ್ತು ಭದ್ರತೆ ಉಪನ್ಯಾಸಕಿಯಾಗಿರುವ ಟ್ರೇಸಿ ಜರ್ಮನ್ ಅವರ ಪ್ರಕಾರ, 2014ರಲ್ಲಿ ರಷ್ಯಾ ಕ್ರಿಮಿಯಾ ಮೇಲೆ ದಾಳಿ ಮಾಡಿ ಅದನ್ನು ವಶಪಡಿಸಿಕೊಂಡಾಗ ವ್ಯಾಗ್ನರ್ ಸಂಸ್ಥೆ ಮೊದಲ ಬಾರಿಗೆ ಕಣಕ್ಕಿಳಿದಿತ್ತು. "ವ್ಯಾಗ್ನರ್ ಗ್ರೂಪಿನ ಸೈನಿಕರನ್ನು 'ಲಿಟಲ್ ಗ್ರೀನ್ ಮೆನ್' ಎಂದು ಗುರುತಿಸಲಾಗಿತ್ತು. ಅವರು ಆ ಪ್ರಾಂತ್ಯವನ್ನು ಅತಿಕ್ರಮಿಸಿಕೊಂಡಿದ್ದರು. ಅಂದಾಜು 1,000 ಜನ ವ್ಯಾಗ್ನರ್ ಗ್ರೂಪ್ ಸದಸ್ಯರು ಲುಹಾನ್ಸ್ಕ್ ಮತ್ತು ಡೊನೆಟ್ಸ್ಕ್ ಪ್ರಾಂತ್ಯಗಳನ್ನು ಕೈವಶ ಮಾಡಿಕೊಳ್ಳಲು ಹೋರಾಡುತ್ತಿದ್ದ ರಷ್ಯಾ ಪರ ಸೇನಾಪಡೆಗಳಿಗೆ ಬೆಂಬಲ ನೀಡುತ್ತಿದ್ದರು. ಆದರೆ ಈ ರೀತಿ ಒಂದು ಖಾಸಗಿ ಸೈನಿಕರ ಸೈನ್ಯವನ್ನು ಹೊಂದುವುದು ರಷ್ಯಾದ ಸಂವಿಧಾನಕ್ಕೆ ವಿರುದ್ಧವಾದುದು" ಎಂದು ಅವರು ಹೇಳುತ್ತಾರೆ.

ವ್ಯಾಗ್ನರ್ ಪ್ರಮುಖವಾಗಿ ಸೇನೆಯಿಂದ ನಿವೃತ್ತಿ ಹೊಂದಿರುವ, ಇನ್ನೂ ಸಾಲಗಳನ್ನು ತೀರಿಸಲು ದುಡಿಯುವ ಅನಿವಾರ್ಯತೆ ಹೊಂದಿರುವ ನಿವೃತ್ತ ಯೋಧರನ್ನೇ ಪ್ರಮುಖವಾಗಿ ಸೇರಿಸಿಕೊಳ್ಳುತ್ತದೆ ಎಂದು ರಾಯಲ್ ಯುನೈಟೆಡ್ ಸರ್ವಿಸಸ್ ಇನ್ಸ್ಟಿಟ್ಯೂಟಿನ ಅಸೋಸಿಯೇಟ್ ಫೆಲೋ ಸ್ಯಾಮ್ಯುಯೆಲ್ ರಾಮಾನಿ ಅಭಿಪ್ರಾಯಪಡುತ್ತಾರೆ.

ವ್ಯಾಗ್ನರ್ ಗ್ರೂಪ್ ಎದುರಿಸುತ್ತಿರುವ ಆರೋಪಗಳು:

  • ವ್ಯಾಗ್ನರ್ ಗ್ರೂಪ್ ಯೋಧರ ಮೇಲೆ ವಿಶ್ವಸಂಸ್ಥೆ ಮತ್ತು ಫ್ರೆಂಚ್ ಸರ್ಕಾರಗಳು ಸಿಎಆರ್ ಪ್ರಾಂತ್ಯದಲ್ಲಿ ನಾಗರಿಕರ ಮೇಲೆ ಅತ್ಯಾಚಾರ ಮತ್ತು ದರೋಡೆ ನಡೆಸಿದ ಆರೋಪಗಳನ್ನು ಹೊರಿಸಿವೆ. ಯುರೋಪಿಯನ್ ಯೂನಿಯನ್ ಇದೇ ಆರೋಪದ ಮೇಲೆ ಗ್ರೂಪ್ ಮೇಲೆ ನಿರ್ಬಂಧಗಳನ್ನೂ ಹೇರಿದೆ.
  • ಅಮೆರಿಕಾದ ಸೇನೆಯೂ ಸಹ ವ್ತಾಗ್ನರ್ ಗ್ರೂಪಿನ ಮೇಲೆ 2020ರಲ್ಲಿ ಲಿಬಿಯಾದ ರಾಜಧಾನಿ ಟ್ರಿಪೋಯದಲ್ಲಿ ಲ್ಯಾಂಡ್ ಮೈನ್‌ಗಳು ಮತ್ತು ಇನ್ನಿತರ ಆಧುನಿಕ ಸ್ಫೋಟಕಗಳನ್ನು ಇಟ್ಟ ಆರೋಪಗಳನ್ನು ಹೊರಿಸಿತ್ತು.
  • "ವ್ಯಾಗ್ನರ್ ಗ್ರೂಪ್ ಅಜಾಗರೂಕತೆಯಿಂದ ಲ್ಯಾಂಡ್ ಮೈನ್ಸ್ ಮತ್ತು ಇನ್ನಿತರ ಸ್ಫೋಟಕಗಳನ್ನು ಬಳಸಿ, ಆ ಮೂಲಕ ಅಮಾಯಕ ನಾಗರಿಕರಿಗೆ ತೊಂದರೆ ಉಂಟು ಮಾಡುತ್ತಿದೆ" ಎಂದು ಅಮೆರಿಕಾ ಸೇನೆಯ ಆಫ್ರಿಕಾದಲ್ಲಿನ ವಿಭಾಗದ ಡೈರೆಕ್ಟರ್ ಆಫ್ ಇಂಟಲಿಜೆನ್ಸ್ ಹೈಡಿ ಬರ್ಗ್ ಹೇಳಿದ್ದಾರೆ.

ರಷ್ಯಾ ಉಕ್ರೇನ್ ಯುದ್ಧದಲ್ಲಿ ವ್ಯಾಗ್ನರ್ ಗ್ರೂಪ್ ಪಾತ್ರವೇನು?

ಟ್ರೇಸಿ ಜರ್ಮನ್ ಅವರ ಪ್ರಕಾರ, ರಷ್ಯಾ ಉಕ್ರೇನ್ ಮೇಲೆ ದಾಳಿ ಮಾಡಿದ ಕೆಲವು ವಾರಗಳಲ್ಲಿ ವ್ಯಾಗ್ನರ್ ಗ್ರೂಪ್ ರಷ್ಯಾಗೆ ದಾಳಿ ನಡೆಸಲು ಅನುಕೂಲವಾಗುವಂತಹ ವಾತಾವರಣ ಸೃಷ್ಟಿಸಿತ್ತು.

ರಷ್ಯಾದಲ್ಲಿ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸಂದೇಶಗಳ ಪ್ರಕಾರ, ವ್ಯಾಗ್ನರ್ ಗ್ರೂಪ್ ತನಗೆ ಬೇಕಾದ ನೂತನ ನೇಮಕಾತಿಗಳನ್ನು ನಡೆಸುತ್ತಿದ್ದು, ಉಕ್ರೇನ್‌ಗೆ ಪಿಕ್‌ನಿಕ್ ಹೋಗಲು ಬನ್ನಿ ಎಂದು ಅವರನ್ನು ಆಮಂತ್ರಿಸುತ್ತಿದೆ ಎನ್ನಲಾಗಿದೆ. ಅದೂ ಅಲ್ಲದೆ ಈ ತಂಡಗಳು ಬೇರೆ ಬೇರೆ ಹೆಸರುಗಳಿಂದಲೂ ಗುರುತಿಸಲ್ಪಟ್ಟಿದ್ದು, ದ ಹಾಕ್ಸ್ ಮತ್ತಿತರ ಹೆಸರುಗಳಿಂದ ಕರೆಯಲ್ಪಡುತ್ತದೆ. ವ್ಯಾಗ್ನರ್ ಗ್ರೂಪ್ ಹೆಸರು‌ ಕಳಂಕಿತಗೊಂಡಿರುವ ಕಾರಣ, ಅದರ ಬದಲಾಗಿ ಬೇರೆ ಹೆಸರುಗಳನ್ನು ಬಳಸಿ, ಆ ಹೆಸರನ್ನು ದೂರ ಮಾಡುವ ಪ್ರಯತ್ನವೂ ಇದಾಗಿರಬಹುದು ಎಂದು ಕ್ಯಾಂಡೇಸ್ ರಾಂಡೀಕ್ಸ್ ಎಂಬ ಅರಿಜೋನಾ ಯುನಿವರ್ಸಿಟಿಯ ಈಸ್ಟರ್ನ್ ಯುರೋಪಿಯನ್ ಸ್ಟಡೀಸ್ ವಿಭಾಗದ, ರಷ್ಯನ್ ಭಾಷಾ ಪ್ರೊಫೆಸರ್ ಅಭಿಪ್ರಾಯಪಡುತ್ತಾರೆ.

<strong>ಗಿರೀಶ್ ಲಿಂಗಣ್ಣ </strong>
ಗಿರೀಶ್ ಲಿಂಗಣ್ಣ 

ಈ ಬರಹದ ಲೇಖಕರು ರಕ್ಷಣಾ ವಿಶ್ಲೇಷಕ ಮತ್ತು ಜರ್ಮನಿಯ ADD Engineering GmbH ನ ಅಂಗಸಂಸ್ಥೆಯಾದ ಆಡ್ ಎಂಜಿನಿಯರಿಂಗ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com