133 ಮಂದಿಯನ್ನು ಬಲಿ ಪಡೆದ ಫುಟ್ಬಾಲ್ ಕ್ರೀಡಾಂಗಣ ನೆಲಸಮ: ಇಂಡೋನೇಷ್ಯಾ ಅಧ್ಯಕ್ಷ
ಜಕಾರ್ತ: ಈ ತಿಂಗಳ ಆರಂಭದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ 133 ಜನ ಸಾವನ್ನಪ್ಪಿದ ಇಂಡೋನೇಷ್ಯಾದ ಫುಟ್‌ಬಾಲ್ ಕ್ರೀಡಾಂಗಣವನ್ನು ನೆಲಸಮ ಮಾಡಿ ಮರುನಿರ್ಮಾಣ ಮಾಡಲಾಗುವುದು ಎಂದು ಇಂಡೋನೇಷ್ಯಾ ಅಧ್ಯಕ್ಷ ಜೊಕೊ ವಿಡೊಡೊ ಅವರು ಮಂಗಳವಾರ ಹೇಳಿದ್ದಾರೆ.
"ಮಲಂಗ್‌ನಲ್ಲಿರುವ ಕಂಜುರುಹಾನ್ ಕ್ರೀಡಾಂಗಣವನ್ನು ನಾವು ಫೀಫಾ ಮಾನದಂಡಗಳ ಪ್ರಕಾರ ಕೆಡವುತ್ತೇವೆ ಮತ್ತು ಮರುನಿರ್ಮಾಣ ಮಾಡುತ್ತೇವೆ" ಎಂದು ಫೀಫಾ ಅಧ್ಯಕ್ಷ ಗಿಯಾನಿ ಇನ್‌ಫಾಂಟಿನೊ ಅವರನ್ನು ಭೇಟಿಯಾದ ನಂತರ ಜೊಕೊ ವಿಡೊಡೊ ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.
ಅಕ್ಟೋಬರ್ 1 ರಂದು ಪೂರ್ವ ಜಾವಾದ ಮಲಂಗ್ ನಗರದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ 40 ಕ್ಕೂ ಹೆಚ್ಚು ಮಕ್ಕಳು ಸೇರಿದಂತೆ 133 ಮಂದಿ ಮೃತಪಟ್ಟಿದ್ದರು. ಇದು "ಫುಟ್‌ಬಾಲ್‌ಗೆ ಕರಾಳ ದಿನ" ಎಂದು ಇನ್ಫಾಂಟಿನೊ ವಿವರಿಸಿದ್ದಾರೆ.
ಅರೆಮಾ ಎಫ್‌ಸಿ ಮತ್ತು ಪರ್ಸೆಬಯಾ ಸುರಬಯಾ ನಡುವಿನ ಪಂದ್ಯ ಮುಗಿದ ನಂತರ, ಸೋತ ತಂಡದ ಬೆಂಬಲಿಗರು ಪಿಚ್‌ಗೆ ನುಗ್ಗಿ ಗಲಾಟೆ ಮಾಡಿದ್ದರು. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಅಶ್ರುವಾಯು ಪ್ರಯೋಗಿಸಿದರು. ಈ ವೇಳೆ ನೂಕುನುಗ್ಗಲು ಉಂಟಾಗಿ ಕಾಲ್ತುಳಿತ ಮತ್ತು ಉಸಿರುಗಟ್ಟುವಿಕೆಯಿಂದ 133 ಜನರು ಮೃತಪಟ್ಟಿದ್ದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ