ಉಕ್ರೇನ್, ರಷ್ಯಾ ನಡುವೆ ಶಾಂತಿ ಸ್ಥಾಪನೆಗೆ ಪ್ರಧಾನಿ ಮೋದಿ ಒಳಗೊಂಡ ಸಮಿತಿ ರಚಿಸಿ: ವಿಶ್ವಸಂಸ್ಥೆಗೆ ಮೆಕ್ಸಿಕೋ ಸಲಹೆ
ನ್ಯೂಯಾರ್ಕ್: ರಷ್ಯಾ ಮತ್ತು ಉಕ್ರೇನ್ ನಡುವೆ ಶಾಶ್ವತ ಶಾಂತಿಗೆ ಮಧ್ಯಸ್ಥಿಕೆ ವಹಿಸಲು ಭಾರತದ ಪ್ರಧಾನಿ ನರೇಂದ್ರ ಮೋದಿ, ಪೋಪ್ ಫ್ರಾನ್ಸಿಸ್ ಮತ್ತು ಯುಎನ್ ಸೆಕ್ರೆಟರಿ ಜನರಲ್ ಆಂಟೋನಿಯೊ ಗುಟೆರಸ್ ಅವರನ್ನು ಒಳಗೊಂಡ ಸಮಿತಿ ಸ್ಥಾಪಿಸುವಂತೆ ಮೆಕ್ಸಿಕೋ ವಿಶ್ವಸಂಸ್ಥೆಗೆ ಸಲಹೆ ನೀಡಿದೆ.
ನ್ಯೂಯಾರ್ಕ್‌ನಲ್ಲಿ ನಡೆದ ಯುಎನ್ ಸೆಕ್ಯುರಿಟಿ ಕೌನ್ಸಿಲ್ ಸಭೆಯಲ್ಲಿ ಉಕ್ರೇನ್ ಕುರಿತು ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಮೆಕ್ಸಿಕೋದ ವಿದೇಶಾಂಗ ಸಚಿವ ಮಾರ್ಸೆಲೊ ಲೂಯಿಸ್ ಎಬ್ರಾಡ್ ಕ್ಯಾಸೌಬಾನ್ ಅವರು ಈ ಪ್ರಸ್ತಾಪವನ್ನು ಮುಂದಿಟ್ಟರು.
ಉಜ್ಬೇಕಿಸ್ತಾನ್‌ನ ಸಮರ್ ಕಂಡ್ ನಲ್ಲಿ ನಡೆದ ಶಾಂಘೈ ಸಹಕಾರ ಸಂಘಟನೆಯ 22ನೇ ಸಭೆಯ ನೇಪಥ್ಯದಲ್ಲಿ ಪುಟಿನ್ ಅವರನ್ನು ಭೇಟಿಯಾದ ಮೋದಿ ಅವರು, “ಇದು ಯುದ್ಧದ ಯುಗವಲ್ಲ” ಎಂಬ ಸಂದೇಶ ಸಾರಿದ ಕೆಲವು ದಿನಗಳ ನಂತರ ಈ ಬೆಳವಣಿಗೆ ನಡೆದಿದೆ. ಭಾರತದ ಪ್ರಧಾನಿಯವರ ಹೇಳಿಕೆಯನ್ನು ಯುನೈಟೆಡ್ ಸ್ಟೇಟ್ಸ್, ಫ್ರಾನ್ಸ್ ಮತ್ತು ಯುನೈಟೆಡ್ ಕಿಂಗ್‌ಡಮ್ ಸೇರಿದಂತೆ ಪಾಶ್ಚಿಮಾತ್ಯ ಜಗತ್ತು ಸ್ವಾಗತಿಸಿತ್ತು.
“ಈ ನಿಟ್ಟಿನಲ್ಲಿ, ಉಕ್ರೇನ್‌ನಲ್ಲಿ ಮಾತುಕತೆ ಮತ್ತು ಶಾಂತಿಗಾಗಿ ಸಮಿತಿ ರಚನೆಯ ಮೂಲಕ ಯುಎನ್ ಸೆಕ್ರೆಟರಿ ಜನರಲ್ ಆಂಟೋನಿಯೊ ಗುಟೆರೆಸ್ ಅವರ ಮಧ್ಯಸ್ಥಿಕೆ ಪ್ರಯತ್ನಗಳನ್ನು ಬಲಪಡಿಸಲು ಮೆಕ್ಸಿಕೊದ ಅಧ್ಯಕ್ಷ ಆಂಡ್ರೆಸ್ ಮ್ಯಾನುಯೆಲ್ ಲೋಪೆಜ್ ಒಬ್ರಡಾರ್ ಅವರ ಪ್ರಸ್ತಾಪವನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ನಾನು ಬಯಸುತ್ತೇನೆ. ಸಾಧ್ಯವಾದರೆ, ನರೇಂದ್ರ ಮೋದಿ ಮತ್ತು ಅವರ ಹೋಲಿನೆಸ್ ಪೋಪ್ ಫ್ರಾನ್ಸಿಸ್ ಸೇರಿದಂತೆ ಇತರ ದೇಶ ಮತ್ತು ಸರ್ಕಾರದ ಮುಖ್ಯಸ್ಥರನ್ನೊಳಗೊಂಡ ಸಮಿತಿ ರಚಿಸಿ ಎಂದು ಹೇಳಿದ್ದಾರೆ.
ಸಂವಾದಕ್ಕೆ ಹೊಸ ಕಾರ್ಯವಿಧಾನಗಳನ್ನು ರಚಿಸುವುದು ಮತ್ತು ಆತ್ಮವಿಶ್ವಾಸವನ್ನು ಬೆಳೆಸಲು, ಉದ್ವಿಗ್ನತೆಯನ್ನು ಕಡಿಮೆ ಮಾಡಲು ಮತ್ತು ಶಾಶ್ವತ ಶಾಂತಿಗೆ ಅವಕಾಶ ನೀಡಲು ಮಧ್ಯಸ್ಥಿಕೆಗೆ ಪೂರಕ ಸ್ಥಳಗಳನ್ನು ಸೃಷ್ಟಿಸುವುದು ಸಮಿತಿಯ ಉದ್ದೇಶವಾಗಿದೆ ಎಂದು ಅವರು ಹೇಳಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ