ಪೆಲೋಸಿ ನಿರ್ಗಮನದ ನಂತರ ತೈವಾನ್ ವಾಯು ರಕ್ಷಣಾ ವಲಯಕ್ಕೆ ಚೀನಾದ 27 ಯುದ್ಧ ವಿಮಾನಗಳ ಪ್ರವೇಶ
ಅಮೆರಿಕ ಹೌಸ್ ಸ್ಪೀಕರ್ ನ್ಯಾನ್ಸಿ ಪೆಲೋಸಿ ಅವರು ತೈವಾನ್ ಗೆ ಭೇಟಿ ನೀಡಿ ವಾಪಸ್ ಆದ ಬೆನ್ನಲ್ಲೇ ಚೀನಾದ ಇಪ್ಪತ್ತೇಳು ಯುದ್ಧ ವಿಮಾನಗಳು ಬುಧವಾರ ತೈವಾನ್‌ನ ವಾಯು ರಕ್ಷಣಾ ವಲಯ ಪ್ರವೇಶಿಸಿವೆ ಎಂದು ತೈವಾನ್ ದೃಢಪಡಿಸಿದೆ.
Published: 03rd August 2022 11:43 PM | Last Updated: 04th August 2022 03:52 PM | A+A A-

ನ್ಯಾನ್ಸಿ ಪೆಲೋಸಿ - ಸಾಯ್ ಇಂಗ್ ವೆನ್
ತೈಪೆ: ಅಮೆರಿಕ ಹೌಸ್ ಸ್ಪೀಕರ್ ನ್ಯಾನ್ಸಿ ಪೆಲೋಸಿ ಅವರು ತೈವಾನ್ ಗೆ ಭೇಟಿ ನೀಡಿ ವಾಪಸ್ ಆದ ಬೆನ್ನಲ್ಲೇ ಚೀನಾದ ಇಪ್ಪತ್ತೇಳು ಯುದ್ಧ ವಿಮಾನಗಳು ಬುಧವಾರ ತೈವಾನ್‌ನ ವಾಯು ರಕ್ಷಣಾ ವಲಯ ಪ್ರವೇಶಿಸಿವೆ ಎಂದು ತೈವಾನ್ ದೃಢಪಡಿಸಿದೆ.
"ಪೀಪಲ್ಸ್ ಲಿಬರೇಷನ್ ಆರ್ಮಿ(ಪಿಎಲ್ಎ)ಯ 27 ಯುದ್ಧ ವಿಮಾನಗಳು ಆಗಸ್ಟ್ 3, 2022 ರಂದು ನಮ್ಮ ಪ್ರದೇಶ(ರಿಪಬ್ಲಿಕ್ ಆಫ್ ಚೀನಾ)ವನ್ನು ಸುತ್ತುವರಿದಿವೆ" ಎಂದು ತೈವಾನ್ ರಕ್ಷಣಾ ಸಚಿವಾಲಯ ಟ್ವೀಟ್‌ನಲ್ಲಿ ತಿಳಿಸಿದೆ.
ತಮ್ಮದೇ ಪ್ರದೇಶವೆಂದು ಪರಿಗಣಿಸುವ ತೈವಾನ್‌ಗೆ ಪೆಲೋಸಿ ಭೇಟಿ ಬಗ್ಗೆ ಚೀನಾ ವ್ಯಗ್ರವಾಗಿದ್ದು, ಇಂದು ತೈವಾನ್ ಸುತ್ತ ಯುದ್ಧ ವಿಮಾನಗಳ ಹಾರಾಟ ನಡೆಸುವ ಮೂಲಕ ತನ್ನ ಶಕ್ತಿ ಪ್ರದರ್ಶಿಸಿದೆ.
ಇದನ್ನೂ ಓದಿ: ನ್ಯಾನ್ಸಿ ಪೆಲೋಸಿ ತೈವಾನ್ ಭೇಟಿ ವಿರೋಧಿಸಿ 'ಉದ್ದೇಶಿತ ಮಿಲಿಟರಿ ಕ್ರಮಕ್ಕೆ' ಚೀನಾ ಸನ್ನದ್ಧ
ಚೀನಾದ ತೀವ್ರ ವಿರೋಧದ ನಡುವೆಯೂ ನ್ಯಾನ್ಸಿ ಪೆಲೋಸಿ ಅವರು ನಿನ್ನೆ ರಾತ್ರಿ ತೈವಾನ್ ರಾಜಧಾನಿ ತೈಪೆಗೆ ಆಗಮಿಸಿದ್ದರು. ಇಂದು ಅವರು, ತೈವಾನ್ ಅಧ್ಯಕ್ಷೆ ಸಾಯ್ ಇಂಗ್ ವೆನ್ ಜೊತೆ ಸಭೆ ನಡೆಸಿ ಬಳಿಕ ಅಮೆರಿಕದ ವಿಶೇಷ ವಿಮಾನದಲ್ಲಿ ದಕ್ಷಿಣ ಕೊರಿಯಾಗೆ ತೆರಳಿದರು.