
ಐಎಸ್ಐಎಸ್
ಲೆಬೆನಾನ್: ಇಸ್ಲಾಮಿಕ್ ಸ್ಟೇಟ್ ಜಿಹಾದಿ ಉಗ್ರ ಸಂಘಟನೆಯ ನಾಯಕ ಅಬು ಹಸನ್ ಅಲ್ ಹಷ್ಮಿ ಅಲ್-ಕುರೇಷಿ ಯುದ್ಧವೊಂದರಲ್ಲಿ ಮೃತಪಟ್ಟಿದ್ದು, ಹೊಸ ಮುಖ್ಯಸ್ಥನನ್ನು ನೇಮಕ ಮಾಡಲಾಗಿದೆ.
ಸ್ವತಃ ಉಗ್ರ ಸಂಘಟನೆ ಈ ಬಗ್ಗೆ ಮಾಹಿತಿ ನೀಡಿದ್ದು, ದೇವರ ಶತ್ರುಗಳೊಂದಿಗೆ ಹೋರಾಡಿ ನಮ್ಮ ನಾಯಕ ಮೃತಪಟ್ಟಿದ್ದಾನೆ ಎಂದಷ್ಟೇ ಉಗ್ರ ಸಂಘಟನೆಯ ವಕ್ತಾರರು ಹೇಳಿದ್ದಾರೆ.
ವಕ್ತಾರರ ಆಡಿಯೋ ಸಂದೇಶ ಬಿಡುಗಡೆಯಾಗಿದ್ದು, ಅಬು ಅಲ್ ಹುಸೇನ್ ಅಲ್ ಹುಸೇನಿ ಅಲ್ ಕುರೇಷಿಯನ್ನು ಹೊಸ ನಾಯಕನನ್ನಾಗಿ ನೇಮಕ ಮಾಡಲಾಗಿದೆ ಎಂದು ಉಗ್ರ ಸಂಘಟನೆ ತಿಳಿಸಿದೆ.
ಕುರಾಷಿ ಎಂಬುದು ಪ್ರವಾದಿ ಮೊಹಮ್ಮದ್ ರ ಬುಡಕಟ್ಟಿಗೆ ಸಂಬಂಧಿಸಿದ ಹೆಸರಾಗಿದ್ದು, ಈ ಮೂಲಕವೇ ಐಎಸ್ ನಾಯಕರುಗಳು ತಮ್ಮನ್ನು ಗುರುತಿಸಿಕೊಳ್ಳುತ್ತಾರೆ.
ಹೊಸ ನಾಯಕನ ಬಗ್ಗೆ ವಕ್ತಾರರು ಯಾವುದೇ ವಿವರಗಳನ್ನೂ ನೀಡಿಲ್ಲ. ಆದರೆ ಆತನೊಬ್ಬ ಹಿರಿಯ ಜಿಹಾದಿ ಎಂದಷ್ಟೇ ತಿಳಿಸಿದ್ದು, ಎಲ್ಲಾ ಸಂಘಟನೆಗಳು ಐಎಸ್ ಗೆ ತಮ್ಮ ನಿಷ್ಠೆಯನ್ನು ಪ್ರಕಟಿಸುವಂತೆ ಸೂಚನೆ ನೀಡಲಾಗಿದೆ.