‘ನಿಮ್ಮ ಭದ್ರಕೋಟೆ ಕುಸಿದಿದೆ, ರಾಜೀನಾಮೆ ನೀಡುವ ಘನತೆ ಇರಲಿ!’: ಶ್ರೀಲಂಕಾ ಅಧ್ಯಕ್ಷ ಗೋಟಾಬಯ ವಿರುದ್ಧ ಪ್ರತಿಭಟನೆಗೆ ಸನತ್ ಜಯಸೂರ್ಯ ಸಾಥ್

ಶ್ರೀಲಂಕಾ ಆರ್ಥಿಕ ಬಿಕ್ಕಟ್ಟು ತಾರಕಕ್ಕೇರಿದ್ದು, ಅಧ್ಯಕ್ಷ ಗೋಟಾಬಯ ವಿರುದ್ಧದ ಪ್ರತಿಭಟನೆಯಲ್ಲಿ ಶ್ರೀಲಂಕಾ ಮಾಜಿ ಕ್ರಿಕೆಟಿಗ ಸನತ್ ಜಯಸೂರ್ಯ ಪಾಲ್ಗೊಂಡಿದ್ದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಶ್ರೀಲಂಕಾದಲ್ಲಿ ಪ್ರತಿಭಟನೆ
ಶ್ರೀಲಂಕಾದಲ್ಲಿ ಪ್ರತಿಭಟನೆ

ಕೊಲಂಬೋ: ಶ್ರೀಲಂಕಾ ಆರ್ಥಿಕ ಬಿಕ್ಕಟ್ಟು ತಾರಕಕ್ಕೇರಿದ್ದು, ಅಧ್ಯಕ್ಷ ಗೋಟಾಬಯ ವಿರುದ್ಧದ ಪ್ರತಿಭಟನೆಯಲ್ಲಿ ಶ್ರೀಲಂಕಾ ಮಾಜಿ ಕ್ರಿಕೆಟಿಗ ಸನತ್ ಜಯಸೂರ್ಯ ಪಾಲ್ಗೊಂಡಿದ್ದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಮಾಜಿ ಕ್ರಿಕೆಟಿಗ ಸನತ್ ಜಯಸೂರ್ಯ ಅವರು ಅಧ್ಯಕ್ಷ ಗೋಟಾಬಯ ರಾಜಪಕ್ಸೆ ವಿರುದ್ಧ ಧ್ವನಿ ಎತ್ತಿದ್ದು, ಹಾಲಿ ಆಂದೋಲನಕ್ಕೆ ಬೆಂಬಲ ನೀಡಿದ್ದಾರೆ. ತೀವ್ರ ಆರ್ಥಿಕ ಸಂಕಷ್ಟದಿಂದ ತತ್ತರಿಸಿರುವ ದ್ವೀಪ ರಾಷ್ಟ್ರದಲ್ಲಿ ಜನರ ಆಕ್ರೋಶದ ಕಟ್ಟೆ ಒಡೆದಿದೆ. ಅಧ್ಯಕ್ಷ ಸ್ಥಾನಕ್ಕೆ ಗೊಟಬಯ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ ಪ್ರತಿಭಟನಾಕಾರರು ಅವರ ಅಧಿಕೃತ ನಿವಾಸಕ್ಕೆ ನುಗ್ಗಿದ್ದಾರೆ. ಇದರಿಂದಾಗಿ ಗೊಟಬಯ ಅವರು ನಿವಾಸ ಬಿಟ್ಟು ಹೋಗಿದ್ದಾರೆ ಎಂದು ರಕ್ಷಣಾ ಇಲಾಖೆಯ ಉನ್ನತ ಮೂಲಗಳು ತಿಳಿಸಿರುವುದಾಗಿ ವರದಿಯಾಗಿದೆ.

ಪ್ರಧಾನಿ ರಣಿಲ್ ವಿಕ್ರಮಸಿಂಘೆ ಅವರು ಪ್ರತಿಭಟನೆಯಿಂದ ನಿರ್ಮಾಣವಾಗಿರುವ ಬಿಕ್ಕಟ್ಟಿನ ಕುರಿತು ಚರ್ಚಿಸಲು ಪಕ್ಷದ ನಾಯಕರ ತುರ್ತು ಸಭೆ ಕರೆದಿದ್ದಾರೆ. ಹಾಗೆಯೇ, ಸಂಸತ್‌ ಸಭೆ ನಡೆಸುವಂತೆ ಸ್ಪೀಕರ್‌ಗೆ ಮನವಿ ಮಾಡಿದ್ದಾರೆ ಎಂದು ಪ್ರಧಾನಿ ಕಚೇರಿ ಹೇಳಿಕೆ ನೀಡಿದೆ.

ಪ್ರತಿಭಟನೆಗೆ ಜಯಸೂರ್ಯ ಸಾಥ್
ಕೊಲಂಬೊದಲ್ಲಿರುವ ಅವರ ಅಧ್ಯಕ್ಷರ ಅಧಿಕೃತ ನಿವಾಸಕ್ಕೆ ಪ್ರತಿಭಟನಾಕಾರರು ಪ್ರವೇಶಿಸಿದಾಗ, ಶ್ರೀಲಂಕಾ ಕ್ರಿಕೆಟ್‌ನ ಮಾಜಿ ನಾಯಕ ಸನತ್ ಜಯಸೂರ್ಯ ಕೂಡ ಪ್ರತಿಭಟನಾಕಾರರಿಗೆ ಸಾಥ್ ನೀಡಿದ್ದಾರೆ. ಈ ವೇಳೆ ಮಾತನಾಡಿದ ಅವರು, 'ವಿಫಲ ನಾಯಕನನ್ನು ಹೊರಹಾಕಲು ದೇಶವು ಈ ರೀತಿ ಒಂದಾಗಿರುವುದನ್ನು ನಾನು ನೋಡಿಲ್ಲ. ಶ್ರೀಲಂಕಾದ ಜನರೊಂದಿಗೆ ನಾನು ಯಾವಾಗಲೂ ನಿಲ್ಲುತ್ತೇನೆ. ಜನರು ಶೀಘ್ರದಲ್ಲೇ ವಿಜಯೋತ್ಸವ ಆಚರಿಸುತ್ತಾರೆ. ಆದರೆ ಇದು ಯಾವುದೇ ಕಾನೂನು ಉಲ್ಲಂಘನೆಯಾಗದಂತೆ ಮುಂದುವರಿಯಬೇಕು ಎಂದು ಹೇಳಿದರು. 

“ಮುತ್ತಿಗೆ ಮುಗಿದಿದೆ. ನಿಮ್ಮ ಭದ್ರಕೋಟೆ ಕುಸಿದಿದೆ. ಅರಗಳಯ್ಯ ಮತ್ತು ಜನಶಕ್ತಿ ಗೆದ್ದಿದೆ. ದಯವಿಟ್ಟು ಈಗ ರಾಜೀನಾಮೆ ನೀಡುವ ಘನತೆ ಇರಲಿ! #GoHomeGota" ಎಂದು ಜಯಸೂರ್ಯ ಮತ್ತೊಂದು ಟ್ವೀಟ್‌ ಮಾಡಿದ್ದಾರೆ.  ಜಯಸೂರ್ಯ ಮಾತ್ರವಲ್ಲದೇ ಶ್ರೀಲಂಕಾದ ಮಾಜಿ ವಿಕೆಟ್ ಕೀಪಿಂಗ್ ಶ್ರೇಷ್ಠ ಕುಮಾರ ಸಂಗಕ್ಕಾರ ಮತ್ತು ಬ್ಯಾಟಿಂಗ್ ಲೆಜೆಂಡ್ ಮಹೇಲಾ ಜಯವರ್ಧನೆ ಅವರು ರಾಜಪಕ್ಸೆ ವಿರುದ್ಧ ಧ್ವನಿ ಎತ್ತಿದ್ದಾರೆ ಮತ್ತು ಪ್ರತಿಭಟನೆಗೆ ಬೆಂಬಲ ನೀಡಿದ್ದಾರೆ.

ಅಧ್ಯಕ್ಷ ಗೋಟಬಯಾ ಪಲಾಯನ
ಇನ್ನು ಶನಿವಾರ ಬೆಳಗ್ಗೆ ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಅಶ್ರುವಾಯು ಮತ್ತು ಜಲ ಫಿರಂಗಿಗಳನ್ನು ಬಳಸಿದ್ದು, ಪ್ರತಿಭಟನಾಕಾರರು ಪ್ರವೇಶಿಸದಂತೆ ಗುಂಡು ಹಾರಿಸಿದ್ದಾರೆ. ಆದರೆ, ಪ್ರತಿಭಟನಾಕಾರರು ಬ್ಯಾರಿಕೇಡ್‌ಗಳನ್ನು ಮುರಿದು ರಾಷ್ಟ್ರಪತಿ ಭವನ ಪ್ರವೇಶಿಸಿದ್ದಾರೆ. ಕೊಲಂಬೊದಲ್ಲಿ ಪ್ರತಿಭಟನೆ ಪ್ರಾರಂಭವಾಗುವ ಮೊದಲೇ ಗೋಟಬಯಾ ಅವರು ಅಧಿಕೃತ ಬಂಗಲೆಯಿಂದ ಪಲಾಯನ ಗೈದಿದ್ದಾರೆ.

ಪ್ರತಿಭಟನೆ ತಡೆಯಲು ಪೊಲೀಸರ ಹರಸಾಹಸ, 30 ಮಂದಿಗೆ ಗಾಯ
ಏತನ್ಮಧ್ಯೆ, ನಡೆಯುತ್ತಿರುವ ಪ್ರತಿಭಟನೆಯಲ್ಲಿ ಇಬ್ಬರು ಪೊಲೀಸ್ ಅಧಿಕಾರಿಗಳು ಸೇರಿದಂತೆ ಕನಿಷ್ಠ 30 ಜನರು ಗಾಯಗೊಂಡಿದ್ದು ಅವರನ್ನು ಕೊಲಂಬೊದ ರಾಷ್ಟ್ರೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. 

ಸ್ವಾತಂತ್ರ್ಯದ ನಂತರದ ಅತ್ಯಂತ ಕೆಟ್ಟ ಆರ್ಥಿಕ ಬಿಕ್ಕಟ್ಟು
1948 ರಲ್ಲಿ ಸ್ವಾತಂತ್ರ್ಯದ ನಂತರದ ಅತ್ಯಂತ ಕೆಟ್ಟ ಆರ್ಥಿಕ ಬಿಕ್ಕಟ್ಟಿನಲ್ಲಿ ಅದನ್ನು ಮುಳುಗಿಸಿದೆ. ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಶ್ರೀಲಂಕಾವು, ವಿದೇಶಿ ಕರೆನ್ಸಿ ಕೊರತೆಯಿಂದಾಗಿ ಅಗತ್ಯ ಸಾಮಗ್ರಿಗಳನ್ನು ಆಮದು ಮಾಡಿಕೊಳ್ಳಲು ಸಾಧ್ಯವಾಗದೆ ತತ್ತರಿಸುತ್ತಿದೆ. ಆಹಾರ ಮತ್ತು ಇಂಧನ ಕೊರತೆ ಭೀಕರವಾಗಿ ಕಾಡುತ್ತಿದೆ. ಅಗತ್ಯ ವೈದ್ಯಕೀಯ ಸಲಕರಣೆ, ಔಷಧಗಳ ಕೊರತೆಯೂ ಉಂಟಾಗಿದೆ. ತುರ್ತು ಅಲ್ಲದ ಶಸ್ತ್ರಚಿಕಿತ್ಸೆಗಳನ್ನು ಮುಂದೂಡುವ ಪರಿಸ್ಥಿತಿ ಸಹ ಇದೆ. ರಾಜಧಾನಿ ಕೊಲಂಬೊದಲ್ಲಿ ಭಾರೀ ಸಂಖ್ಯೆಯ ಪ್ರತಿಭಟನಾಕಾರರು ಸೇರಿದ್ದು, ಸದ್ಯದ ಪರಿಸ್ಥಿತಿ ಅನಿಯಂತ್ರಿತವಾಗಿದೆ.  

ಪೊಲೀಸ್ ಇಲಾಖೆಯ ಮುಖ್ಯಸ್ಥರ ವಿರುದ್ಧ ಕಾನೂನು ಹೋರಾಟ ಮಾಡುವುದಾಗಿ ಪ್ರತಿಪಕ್ಷಗಳ ನಾಯಕರು, ಹಕ್ಕುಗಳ ಹೋರಾಟಗಾರರು ಮತ್ತು ಬಾರ್ ಅಸೋಸಿಯೇಶನ್ ಸದಸ್ಯರು ಎಚ್ಚರಿಸಿದ ಬಳಿಕ ಶುಕ್ರವಾರ ಕರ್ಫ್ಯೂ ಹಿಂಪಡೆಯಲಾಗಿತ್ತು. ಮನೆಯಲ್ಲೇ ಇರುವಂತೆ ನೀಡಿದ್ದ ಆದೇಶವನ್ನು ಧಿಕ್ಕರಿಸಿರುವ ಹಲವಾರು ಮಂದಿ ಸರ್ಕಾರಿ ವಿರೋಧಿ ಪ್ರತಿಭಟನಾಕಾರರು,ರೈಲುಗಳನ್ನು ಓಡಿಸುವ ಮೂಲಕ ತಮ್ಮನ್ನು ಕೊಲಂಬೊ ತಲುಪಿಸುವಂತೆ ರೈಲ್ವೆ ಅಧಿಕಾರಿಗಳಿಗೆ ಒತ್ತಡ ಹೇರಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com