ಕೊಲಂಬೋ: ಶ್ರೀಲಂಕಾ ಆರ್ಥಿಕ ಬಿಕ್ಕಟ್ಟು ಮತ್ತು ಆಂತರಿಕ ಸಂಘರ್ಷ ಮುಂದುವರೆದಿದ್ದು, ವಿರೋಧದ ನಡುವೆಯೂ ರಣಿಲ್ ವಿಕ್ರಮಸಿಂಘೆ ಅವರನ್ನು ಹಂಗಾಮಿ ಅಧ್ಯಕ್ಷರಾಗೆ ಆಯ್ಕೆ ಮಾಡಿದ ಬೆನ್ನಲ್ಲೇ ರಾಜಧಾನಿ ಕೊಲಂಬೋದಲ್ಲಿ ಪ್ರತಿಭಟನೆ ಮತ್ತೆ ಭುಗಿಲೆದ್ದಿದೆ.
ಕೊಲಂಬೋದಲ್ಲಿ ಪ್ರತಿಭಟನಾಕಾರರ ಪ್ರತಿಭಟನೆ ಮತ್ತೆ ಭುಗಿಲೆದ್ದಿದ್ದು, ಈ ಹಿಂದೆ ಅಧ್ಯಕ್ಷರ ಬಂಗಲೆಯನ್ನು ಸೀಜ್ ಮಾಡಿದ್ದ ಪ್ರತಿಭಟನಾಕಾರರು ಇದೀಗ ಪ್ರಧಾನಿ ಅಧಿಕೃತ ನಿವಾಸವನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡಿದ್ದಾರೆ. ಈ ಹಿಂದೆಯೇ ಪ್ರತಿಭಟನಾಕಾರರು ಪ್ರಧಾನಿ ನಿವಾಸಕ್ಕೆ ಮುತ್ತಿಗೆ ಹಾಕುವ ವಿಚಾರ ತಿಳಿದ ಶ್ರೀಲಂಕಾ ಪೊಲೀಸರು ಮತ್ತು ಸೇನೆ ವ್ಯಾಪಕ ಭದ್ರತೆ ನಿಯೋಜಿಸಿತ್ತು, ಆದಾಗ್ಯೂ ಇಂದು ಪ್ರತಿಭಟನಾಕಾರರು ಪ್ರಧಾನಿ ನಿವಾಸದ ಮುತ್ತಿಗೆಗೆ ಯತ್ನಿಸಿದ್ದು, ಈ ವೇಳೆ ಅವರನ್ನು ತಡೆಯಲು ಸೇನೆ ಮತ್ತು ಪೊಲೀಸರು ಅಶ್ರುವಾಯು, ಜಲಫಿರಂಗಿಗಳನ್ನು ಸಿಡಿಸಿ ತಡೆಯಲು ಯತ್ನಿಸಿದರು.
ಪ್ರಧಾನಿ ನಿವಾಸಕ್ಕೆ ಹಾಕಲಾಗಿದ್ದ ಬ್ಯಾರಿಕೇಡ್ ಗಳನ್ನು ಮುರಿದು, ಫ್ಲವರ್ ರೋಡ್‌ನಲ್ಲಿರುವ ಪ್ರಧಾನಿ ಕಚೇರಿ ಮತ್ತು ನಿವಾಸದೊಳಗೆ ನುಗ್ಗಿದರು. ಅಂತೆಯೇ ಮುಖ್ಯ ರಾಜ್ಯ ದೂರದರ್ಶನ ಕೇಂದ್ರಕ್ಕೆ ನುಗ್ಗಿದರು. ಮತ್ತೊಂದೆಡೆ ಇಡೀ ಪ್ರತಿಭಟನೆಯನ್ನು ವರದಿ ಮಾಡುತ್ತಿದ್ದ ವಾಹಿನಿಯ ಲೈವ್ ಕಾರ್ಯಕ್ರಮದ ವೇಳೆ ಅಪರಿಚಿತ ವ್ಯಕ್ತಿಯೊಬ್ಬರು ರೂಪವಾಹಿನಿ ನೆಟ್‌ವರ್ಕ್‌ನ ಸ್ಟುಡಿಯೊಗೆ ನುಗ್ಗಿ ಪ್ರತಿಭಟನೆಗೆ ಸಂಬಂಧಿಸಿದ ಸುದ್ದಿಗಳನ್ನು ಮಾತ್ರ ಪ್ರಸಾರ ಮಾಡುವಂತೆ ಆದೇಶಿಸಿದ್ದಾನೆ. ಈ ವೇಳೆ ವಾಹಿನಿಯ ಪ್ರಸರಣ ಕೆಲಕಾಲ ಸ್ಥಗಿತಗೊಂಡಿತ್ತು. ಈ ವೇಳೆ ರೆಕಾರ್ಡ್ ಮಾಡಿದ ಪ್ರೋಗ್ರಾಂನೊಂದಿಗೆ ಆ ಕಾರ್ಯಕ್ರಮಗಳನ್ನು ಬದಲಾಯಿಸಲಾಗಿತ್ತು.
ಇನ್ನು ಸರ್ಕಾರ ವಿರೋಧಿ ಪ್ರತಿಭಟನೆಗಳಿಂದ ತಪ್ಪಿಸಿಕೊಳ್ಳಲು ಅಧ್ಯಕ್ಷ ಗೋಟಬಯ ರಾಜಪಕ್ಸ ಅವರು ವಿದೇಶಕ್ಕೆ ಪಲಾಯನ ಮಾಡಿದ ನಂತರ ಶ್ರೀಲಂಕಾ ಬುಧವಾರ ತುರ್ತು ಪರಿಸ್ಥಿತಿಯನ್ನು ಘೋಷಿಸಿದೆ.
Advertisement