ನ್ಯಾಟೋ ನಡೆಯಿಂದ ಸ್ಪೇನ್ ಗೆ ನಿರಾಶೆ; ರಷ್ಯಾ ಬಿಟ್ಟು ಆಫ್ರಿಕಾ ಕಡೆ ಗಮನ ಹರಿಸಲು ಒತ್ತಡ!

ನ್ಯಾಟೋ ತನ್ನ ಮಿತ್ರ ರಾಷ್ಟ್ರಗಳ ಆಸಕ್ತಿಯನ್ನು ಕಡೆಗಣಿಸಿರುವುದರಿಂದ ನ್ಯಾಟೊ ಬಳಗದೊಳಗೆ ಆಂತರಿಕ ದಂಗೆ ಉಂಟಾಗುವ ಸಾಧ್ಯತೆಗಳಿವೆ. ನ್ಯಾಟೋ ಸದಸ್ಯ ರಾಷ್ಟ್ರಗಳು ಜೋ ಬಿಡನ್ ಹಠಕ್ಕಾಗಿ ನ್ಯಾಟೋ ಇನ್ನೂ ರಷ್ಯಾ ವಿಚಾರಕ್ಕೇ ಅಂಟಿಕೊಂಡಿರುವುದರಿಂದ ಅಸಮಾಧಾನಗೊಂಡಿವೆ.
ನ್ಯಾಟೋ ನಡೆಯಿಂದ ಸ್ಪೇನ್ ಗೆ ನಿರಾಶೆ; ರಷ್ಯಾ ಬಿಟ್ಟು ಆಫ್ರಿಕಾ ಕಡೆ ಗಮನ ಹರಿಸಲು ಒತ್ತಡ!

- ಗಿರೀಶ್ ಲಿಂಗಣ್ಣ
ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ

ನ್ಯಾಟೋ ತಾನು ಈಗಾಗಲೇ ಸೋತಿರುವ ಯುದ್ಧವನ್ನು ಗೆಲ್ಲುವ ಪ್ರಯತ್ನ ಮುಂದುವರಿಸುತ್ತಿದೆ. ಪಾಶ್ಚಿಮಾತ್ಯ ರಾಷ್ಟ್ರಗಳು ಇಂದಿಗೂ ರಷ್ಯಾ ಏಕಾಂಗಿಯಾಗಿ ತಮ್ಮ ಯೋಚನೆಗಳ ಮೇಲೆ ತಣ್ಣೀರೆರೆಚಿದರ ಎಂಬುದನ್ನು ಒಪ್ಪಿಕೊಳ್ಳಲು ಕಷ್ಟಪಡುತ್ತಿವೆ. ನ್ಯಾಟೋ ತನ್ನ ಮಿತ್ರರ ಗುರಿಗಳನ್ನು ಬದಿಗೊತ್ತಿ, ಇನ್ನೂ ಹೇಗಾದರೂ ಯುದ್ಧವನ್ನು ಮುಂದುವರಿಸಿ, ಮುಖ ಉಳಿಸಿಕೊಳ್ಳುವ ಗೆಲುವು ಪಡೆಯಲು ಹಂಬಲಿಸುತ್ತಿದೆ.

ಯುದ್ಧ ಮುಂದುವರಿದಷ್ಟೂ, ನ್ಯಾಟೋದ ಮಿತ್ರರಾಷ್ಟ್ರಗಳ ವೈಯಕ್ತಿಕ ಆಕಾಂಕ್ಷೆಗಳು ಸಂಕಷ್ಟಕ್ಕೊಳಗಾಗುತ್ತವೆ. ಯುದ್ಧ ಮುಂದುವರಿದಂತೆ ತಮ್ಮ ಮೇಲಾಗುತ್ತಿರುವ ದುಷ್ಪರಿಣಾಮಗಳನ್ನು ಗಮನಿಸಿದ ರಾಷ್ಟ್ರಗಳಿಂದಾಗಿ ನ್ಯಾಟೋ ಬಳಗದೊಳಗೇ ಆಂತರಿಕ ಅಸಮಾಧಾನಗಳು ಮೂಡಿವೆ.

ನ್ಯಾಟೋದ ನಿರ್ಲಕ್ಷ್ಯ:

ಧಾನ್ಯಗಳ ಪ್ರಮುಖ ರಫ್ತುದಾರ ರಾಷ್ಟ್ರವಾದ ಉಕ್ರೇನ್ ಮೇಲೆ ರಷ್ಯಾ ನಡೆಸಿದ ದಾಳಿಯಿಂದಾಗಿ ಅಲ್ಲಿನ ಧಾನ್ಯಗಳ ಉತ್ಪಾದನೆ ಮೂರನೇ ಎರಡರಷ್ಟು ಕಡಿತವಾಗಿದೆ. ಇದರ ಪರಿಣಾಮವಾಗಿ ಆಫ್ರಿಕಾದಲ್ಲಿ ಆಹಾರ ಭದ್ರತೆಯ ಕೊರತೆ ಎದುರಾಗುವ ಅಪಾಯವಿದೆ. ಇದರ ಪರಿಣಾಮವಾಗಿ ಅಪರಾಧಗಳ ಹೆಚ್ಚಳ, ಅತಿಯಾದ ಬಡತನ, ಹಾಗೂ ಹಸಿವು ಆಫ್ರಿಕಾವನ್ನು ಕಾಡಬಹುದು. ಹಾಗಾಗಿ ಮೆಡಿಟರೇನಿಯನ್ ಸಮುದ್ರದ ತೀರವನ್ನು ಹಂಚಿಕೊಳ್ಳುವ ಸ್ಪೇನ್‌ನಂತಹ ರಾಷ್ಟ್ರಕ್ಕೆ ವಲಸೆ ಪ್ರಮಾಣ ಹೆಚ್ಚಳವಾಗುವ ಭಯವೂ ಇದೆ. ಆದ್ದರಿಂದ ಸ್ಪೇನ್ ಮತ್ತು ಇತರ ರಾಷ್ಟ್ರಗಳು ನ್ಯಾಟೋ ರಷ್ಯಾದ ಯೋಚನೆ ಬಿಟ್ಟು, ಮುಂದೆ ಬರುವ ಸಮಸ್ಯೆಗಳ ಕುರಿತು ಗಮನಹರಿಸಬೇಕು ಎಂದು ಆಗ್ರಹಿಸುತ್ತಿವೆ.

ಸ್ಪೇನ್ ಈಗಾಗಲೇ ವಿರೋಧಿ ಶಕ್ತಿಗಳು ಆಫ್ರಿಕಾದಿಂದ ವಲಸೆ ಹೆಚ್ಚಾಗುವಂತೆ ಮಾಡಿ, ಒತ್ತಡ ಹೆಚ್ಚಿಸುವ ಕೆಲಸ ಮಾಡುತ್ತಿವೆ ಎಂದು ಎಚ್ಚರಿಸಿದೆ. ಸ್ಪೇನಿನ ವಿದೇಶಾಂಗ ಸಚಿವ ಜೋಸ್ ಮ್ಯಾನುವಲ್ ಪ್ರಕಾರ, ವ್ಯಾಗ್ನರ್ ಗ್ರೂಪ್‌ನಲ್ಲಿರುವ ರಷ್ಯಾದ ಕೂಲಿ ಕಾರ್ಮಿಕರು ಈಗಾಗಲೇ ಸಾಹೆಲ್ ಪ್ರಾಂತ್ಯದಲ್ಲಿ ಯುರೋಪಿಗೆ ವಲಸೆಯನ್ನು ಪ್ರಚೋದಿಸುತ್ತಿದ್ದಾರೆ.

ವ್ಯಾಗ್ನರ್ ಗ್ರೂಪ್ ಒಂದು ರಷ್ಯಾದ ಖಾಸಗಿ ಪ್ಯಾರಾ ಮಿಲಿಟರಿ ಸಂಸ್ಥೆಯಾಗಿದ್ದು, ಕೂಲಿ ಕಾರ್ಮಿಕರ ನೆಟ್‌ವರ್ಕ್ ಅಥವಾ ವ್ಲಾಡಿಮಿರ್ ಪುಟಿನ್ ಅವರ ವಸ್ತುತಃ ಖಾಸಗಿ ಸೇನೆ ಎನ್ನಲಾಗುತ್ತದೆ. ಆದರೆ ಈ ಗುಂಪು ಅಧಿಕೃತವಾಗಿ ಅಸ್ತಿತ್ವದಲ್ಲಿಲ್ಲ.

"ಸಾಹೆಲ್ ಪ್ರಾಂತ್ಯದಲ್ಲಿ ವ್ಯಾಗ್ನರ್ ಕಂಪನಿಯಿದೆ, ಸಾಕಷ್ಟು ವಿದೇಶಿ ಸೇನೆಗಳೂ ಇವೆ. ಆದರೆ ಸಾಹೆಲ್ ಪ್ರಾಂತ್ಯದ ರಾಷ್ಟ್ರಗಳಿಗೆ ಬೇಕಾಗಿರುವುದು ಸೇನಾಪಡೆಗಳಲ್ಲ, ಅಭಿವೃದ್ಧಿ" ಎನ್ನುತ್ತಾರೆ ಮ್ಯಾನುವಲ್.

ಇತ್ತೀಚೆಗೆ ನೂರಾರು ವಲಸಿಗರು ಸ್ಪೇನಿನ ಮೆಲಿಲ್ಲಾವನ್ನು ಮೊರಾಕೋದಿಂದ ವಿಭಜಿಸುವ ಗಡಿ ಬೇಲಿಯನ್ನು ದಾಟಲು ಪ್ರಯತ್ನಿಸುವಾಗ ಹಲವರು ಪ್ರಾಣ ಕಳೆದುಕೊಂಡರು. ಸಾಕಷ್ಟು ವಲಸಿಗರು ಆಫ್ರಿಕಾದಿಂದ ನೂರು ಕಿಲೋಮೀಟರ್ ದೂರದಲ್ಲಿರುವ ಸ್ಪ್ಯಾನಿಷ್ ಕ್ಯಾನರಿ ದ್ವೀಪಗಳಿಗೂ ಆಗಮಿಸಿದ್ದಾರೆ.

"ನಾವು ಪ್ರಸ್ತುತ ವಲಸಿಗರ ಓಡಾಟ ಏರುತ್ತಿರುವ ಬೆಲೆಗಳ ಕಾರಣಕ್ಕೆ ಅಥವಾ ಆಹಾರ ಧಾನ್ಯಗಳನ್ನು ಪಡೆಯಲು ಕಷ್ಟವಾಗುವ ಕಾರಣಕ್ಕೆ ಹೆಚ್ಚುತ್ತಿದೆಯೋ ಎಂದು ತಿಳಿಯಲು ಪ್ರಯತ್ನಿಸುತ್ತಿದ್ದೇವೆ" ಎಂದು ಕ್ಯಾನರಿ ದ್ವೀಪದ ವಲಸೆ ಅಧಿಕಾರಿ ಒಬ್ಬರು ಹೇಳಿಕೊಂಡಿದ್ದಾರೆ.

ದಂಗೆಗೆ ತಯಾರಿಯೇ?:

ನ್ಯಾಟೋ ತನ್ನ ಮಿತ್ರ ರಾಷ್ಟ್ರಗಳ ಆಸಕ್ತಿಯನ್ನು ಕಡೆಗಣಿಸಿರುವುದರಿಂದ ನ್ಯಾಟೊ ಬಳಗದೊಳಗೆ ಆಂತರಿಕ ದಂಗೆ ಉಂಟಾಗುವ ಸಾಧ್ಯತೆಗಳಿವೆ. ನ್ಯಾಟೋ ಸದಸ್ಯ ರಾಷ್ಟ್ರಗಳು ಜೋ ಬಿಡನ್ ಹಠಕ್ಕಾಗಿ ನ್ಯಾಟೋ ಇನ್ನೂ ರಷ್ಯಾ ವಿಚಾರಕ್ಕೇ ಅಂಟಿಕೊಂಡಿರುವುದರಿಂದ ಅಸಮಾಧಾನಗೊಂಡಿವೆ.

"ನಾವು ಆಫ್ರಿಕಾದ ಸಬ್ ಸಹರನ್ ಮತ್ತು ಸಾಹೆಲ್ ಪ್ರಾಂತ್ಯದಲ್ಲಿನ ಸಮಸ್ಯೆಗಳನ್ನು ಗಮನಿಸುವುದರ ಕುರಿತು ಸಂತಸ ಹೊಂದಿದ್ದೇವೆ. ಇದು ಯುರೋಪಿಗೆ, ಅದರಲ್ಲೂ ನಮ್ಮ ದೇಶಕ್ಕೆ ಪ್ರಮುಖ ವಿಚಾರವಾಗಿದೆ. ಈ ಪ್ರಾಂತ್ಯದಲ್ಲಿ ಅಸ್ಥಿರತೆ ಅತಿಯಾದ ವಲಸೆ, ಭಯೋತ್ಪಾದನೆ, ಆಹಾರದ ಕೊರತೆ, ಇಂಧನದ ಕೊರತೆ, ಹವಾಮಾನ ಬದಲಾವಣೆಗಳಿಗೂ ಕಾರಣವಾಗಬಹುದು" ಎಂದು ಸ್ಪೇನ್ ಪ್ರಧಾನಿ ಪೆಡ್ರೋ ಸಾನ್‌ಚೆಜ಼್ ಅಭಿಪ್ರಾಯ ಪಟ್ಟಿದ್ದಾರೆ.

ಸ್ಪೇನ್ ಮಾರ್ಚ್ ತಿಂಗಳಲ್ಲಿ ಮೊರಾಕೋದೊಡನೆ ಅನಧಿಕೃತ ವಲಸೆ ತಡೆಯುವ ನಿಟ್ಟಿನಲ್ಲಿ ಒಂದು ಒಪ್ಪಂದ ಮಾಡಿಕೊಂಡಿತು. ಆದರೆ ಇಂತಹ ಸಂಕಷ್ಟದ ಸಂದರ್ಭದಲ್ಲೂ ಅದಕ್ಕೆ ನ್ಯಾಟೋದ ಮಿತ್ರರಿಂದ ಯಾವ ಸಹಾಯವೂ ಲಭಿಸುತ್ತಿಲ್ಲ. ಆಫ್ರಿಕಾದ ವಲಸಿಗರಿಗೆ ಸ್ಪೇನ್ ಮತ್ತು ಯುರೋಪ್‌ಗೆ ಪ್ರವೇಶಿಸಲು ಮೊರಾಕೊ ಉತ್ತಮ ದಾರಿಯಾಗಿದೆ. ವಲಸಿಗರ ಸಂಖ್ಯೆಯನ್ನು ತಡೆಯಲು ಸ್ಪೇನ್ ಮೊರಾಕೊ ಕೇಳಿದಂತೆ ಪಶ್ಚಿಮ ಸಹರಾ ಪ್ರಾಂತ್ಯದಲ್ಲಿ ತನ್ನ ರಾಜತಾಂತ್ರಿಕ ಸಂಬಂಧಗಳನ್ನು ಬದಲಾಯಿಸಲು ಒಪ್ಪಿಗೆ ಸೂಚಿಸಿದೆ. ಆದರೆ ಇದರಿಂದ ಹೇಳಿಕೊಳ್ಳುವಂತಹ ಪ್ರಯೋಜನವಾಗಿಲ್ಲ.

ಇನ್ನೂ ಸ್ಪಷ್ಟವಾಗಿ ಹೇಳುವುದಾದರೆ, ಬಿಡೆನ್ ಅಧೀನದಲ್ಲಿರುವಂತೆ ಕಾಣುವ ನ್ಯಾಟೋದ ನೀತಿಗಳಿಂದ ಮಿತ್ರರಾಷ್ಟ್ರಗಳು ಮಾತ್ರ ಅಸಮಾಧಾನಗೊಂಡಿಲ್ಲ. ಪೆಂಟಗಾನ್ ಸ್ಪಷ್ಟವಾಗಿ ಬಿಡೆನ್ ಆಡಳಿತಕ್ಕೆ ರಷ್ಯಾ ಮೇಲೆ ಗಮನ ಹರಿಸುವ ಬದಲು ಚೀನಾ ಮೇಲೆ ಗಮನ ಹರಿಸುವಂತೆ ಸೂಚಿಸಿದೆ. ಬಿಡೆನ್ ತನ್ನ ಹಠ ಬಿಡದಿದ್ದರೆ ನ್ಯಾಟೋ ಒಡೆದ ಮನೆಯಾಗಲಿದೆ. ರಷ್ಯಾ ವಿರುದ್ಧ ಹೊಸ ಮಿಲಿಟರಿ ಮಿತ್ರಕೂಟ ಸ್ಥಾಪಿಸುವ ಬಿಡೆನ್ ಕನಸು ಅಪಾಯಕಾರಿಯಾಗಿದೆ. ಅಹಂಕಾರಿಯಂತೆ ನಡೆದುಕೊಳ್ಳುವ ಬಿಡೆನ್ ಇದನ್ನು ಬೇಗ ಅರ್ಥ ಮಾಡಿಕೊಂಡಷ್ಟೂ ನ್ಯಾಟೋ ಪರಿಸ್ಥಿತಿ ಉತ್ತಮವಾಗಲಿದೆ.

<strong>ಗಿರೀಶ್ ಲಿಂಗಣ್ಣ </strong>
ಗಿರೀಶ್ ಲಿಂಗಣ್ಣ 

ಈ ಬರಹದ ಲೇಖಕರು ರಕ್ಷಣಾ ವಿಶ್ಲೇಷಕ ಮತ್ತು ಜರ್ಮನಿಯ ADD Engineering GmbH ನ ಅಂಗಸಂಸ್ಥೆಯಾದ ಆಡ್ ಎಂಜಿನಿಯರಿಂಗ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com